ಚಾಮರಾಜನಗರ :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ, ರೈತರಿಗೆ ಋುಣಮುಕ್ತ ಪತ್ರ ಬರೆದಿದ್ದರೂ ಕೃಷಿಸಾಲ ಮಾಡಿದ ಅನ್ನದಾತರಿಗೆ ಬ್ಯಾಂಕ್‌ಗಳಿಂದ ನೋಟಿಸ್‌ ಬರುವುದು ಮಾತ್ರ ನಿಂತಿಲ್ಲ. ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ರೈತರಿಗೆ ವಿಜಯಾ ಬ್ಯಾಂಕ್‌ನಿಂದ ನೋಟಿಸ್‌ ನೀಡಲಾಗಿದ್ದು, ಜೂ.4ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.

"

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಎಚ್‌.ಡಿ.ಕುಮಾರಸ್ವಾಮಿ ಅವರು ರೈತರ .2 ಲಕ್ಷವರೆಗಿನ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದರು. ಅದರಂತೆ ಚಾಮರಾಜನಗರ ಜಿಲ್ಲೆಯಲ್ಲಿ ಸಾಲಮನ್ನಾ ಯೋಜನೆಯ ಫಲಾನುಭವಿ ರೈತರ ಮನೆಬಾಗಿಲಿಗೆ ಫೆಬ್ರವರಿಯಲ್ಲೇ ಋುಣಮುಕ್ತ ಪತ್ರವನ್ನು ಸರ್ಕಾರವೇ ಬರೆದಿತ್ತು. ಸರ್ಕಾರವೇ ಕಳುಹಿಸಿದ ಪತ್ರ ಕಂಡು ರೈತರು ಸಾಲದ ಸಂಕಷ್ಟದಿಂದ ಪಾರಾದೆವಲ್ಲ ಎಂದು ನಿರುಮ್ಮಳರಾಗಿದ್ದರು. ಆದರೆ, ಇದಾದ ಕೆಲವೇ ದಿನಗಳಲ್ಲಿ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರದ ವಿಜಯ ಬ್ಯಾಂಕ್‌ ಶಾಖೆಯಿಂದ ರೈತರಿಗೆ ಕೋರ್ಟ್‌ ನೋಟಿಸ್‌ ಬರಲಾರಂಭಿಸಿದೆ. ಬಾಕಿ ಸಾಲದ ಮೇಲಿನ ಬಡ್ಡಿ ಕಟ್ಟಿ, ಇಲ್ಲವಾದರೆ ಜೂ.4ರಂದು ಕೋರ್ಟ್‌ಗೆ ಹಾಜರಾಗಿ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಜೀವಹೋದಂತಾಗಿದೆ​-ರೈತನ ಅಳಲು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿದ್ದರೂ, ಫಲಾನುಭವಿ ರೈತರಿಗೆ ಋುಣಮುಕ್ತ ಪತ್ರ ಬರೆದಿದ್ದರೂ ಕೋರ್ಟ್‌ ನೋಟಿಸ್‌ ಬಂದಿರುವುದನ್ನು ಕಂಡು ರೈತರೀಗ ಆತಂಕಗೊಂಡಿದ್ದಾರೆ.

‘ನಾನು 2009ರಲ್ಲಿ ವಿಜಯ ಬ್ಯಾಂಕಿನಿಂದ 1.75 ಲಕ್ಷ ಬೆಳೆ ಸಾಲ ಪಡೆದಿದ್ದೆ. ನಂತರ ನೀರಿಲ್ಲದೆ ಬೆಳೆ ಕೈಕೊಟ್ಟಿತ್ತು. ಸಾಲ ವಾಪಸ್‌ ಕಟ್ಟುವುದು ಹೇಗೆಂದು ಕಂಗಾಲಾಗಿದ್ದೆ. ಇಂಥ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಸರ್ಕಾರ ಸಾಲ ಮನ್ನಾದ ಭರವಸೆ ನೀಡಿದ್ದು, ಇತ್ತೀಚೆಗೆ ಸಾಲಮುಕ್ತ ಪತ್ರವನ್ನೂ ಬರೆದು ಹೆದರಬೇಡಿ ಎಂದು ಧೈರ್ಯ ತುಂಬಿದ್ದರಿಂದ ಹೋದ ಜೀವಬಂದಂತಾಗಿತ್ತು. ಆದರೆ, ಇದೀಗ ಮನೆ ಬಾಗಿಲಿಗೆ ಬ್ಯಾಂಕ್‌ನವರು ಕೋರ್ಟ್‌ ನೋಟಿಸ್‌ ಕಳುಹಿಸಿದೆ. ಮುಂದೇನು ಎನ್ನುವ ಆತಂಕ ಕಾಡಲು ಶುರುವಾಗಿದೆ’’ ಎಂದು ಮರಿಯಾಲ ಗ್ರಾಮದ ರೈತ ದಳಪತಿ ವೀರತಪ್ಪ ಅಳಲು ತೋಡಿಕೊಂಡಿದ್ದಾರೆ. 

ಒಂದು ಕೈಯಲ್ಲಿ ಭರವಸೆ ನೀಡಿ ಇನ್ನೊಂದು ಕೈಯಲ್ಲಿ ಶಿಕ್ಷಿಸಲು ಹೊರಟಿದೆಯೇ ಸರ್ಕಾರ ಎಂದು ಕಣ್ಣೀರು ನೋವು ತೋಡಿಕೊಳ್ಳುತ್ತಿದ್ದಾರೆ. ಮತ್ತೊಬ್ಬ ರೈತ ಅಶೋಕ್‌ ಅವರಂತು, ಕೋರ್ಟ್‌ ನೋಟಿಸ್‌ ಕುರಿತು ಬ್ಯಾಂಕ್‌ನವರನ್ನು ವಿಚಾರಿಸಿದರೆ ಅವರಿಂದ ಸರಿಯಾದ ಉತ್ತರವೇ ಬರುತ್ತಿಲ್ಲ ಎಂದು ಆರೋಪಿಸುತ್ತಾರೆ.