Asianet Suvarna News Asianet Suvarna News

ರಾಯಚೂರಿನ ಗಲ್ಲಿ ಗಲ್ಲಿಯಲ್ಲಿ ವಿಷಪೂರಿತ ಸೇಂದಿ ಮಾರಾಟ: ಚಿಕ್ಕ ಮಕ್ಕಳು, ಮಹಿಳೆಯರೇ ಹೆಚ್ಚಾಗಿ ಭಾಗಿ..!

ಚಿಕ್ಕ ಮಕ್ಕಳೇ ಸಿ.ಎಚ್. ಪೌಡರ್ ಸೇಂದಿ ಸಾಗಾಟದ ದಂಧೆಕೋರರು ಆಗುತ್ತಿದ್ದಾರೆ. ಕೂಡಲೇ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಅಲರ್ಟ್ ಆಗಿ ಸಿ.ಎಚ್.ಪೌಡರ್ ಗೆ ದಾಸರಾದವರಿಗೆ ಗುರುತಿಸಿ ಅವರಿಗೆ ಬೇರೆ ಕಡೆ ಗುಣಮಟ್ಟದ ಚಿಕಿತ್ಸೆ ಕೊಡಿಸಿ ಅವರ ಮನ ಪರಿವರ್ತನೆ ಮಾಡಿ ಸಮಾಜಮುಖಿ ದಾರಿಗೆ ತರುವ ಜವಾಬ್ದಾರಿ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಮೇಲಿದೆ. ಒಂದು ವೇಳೆ ಸ್ಥಾಯಿ ಸಮಿತಿ ವಿಫಲವಾದ್ರೆ ಇಡೀ ನಗರವೇ ಸೇಂದಿ ಅಡ್ಡ ಆಗುವುದರಲ್ಲಿ ಅನುಮಾನವಿಲ್ಲ.

Challenge to the Excise Police For Control Hooch Racket in Raichur grg
Author
First Published Dec 5, 2023, 8:35 AM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಡಿ.05):  ರಾಯಚೂರು ಜಿಲ್ಲೆ ಆಂಧ್ರ ಮತ್ತು ತೆಲಂಗಾಣ ಗಡಿ ಹೊಂದಿರುವ ಜಿಲ್ಲೆಯಾಗಿದೆ. ಕೃಷ್ಣ ನದಿ ದಾಟಿ ಹೋಗಿದ್ರೆ ತೆಲಂಗಾಣ ರಾಜ್ಯ ಬರುತ್ತೆ. ಇತ್ತ ತುಂಗಭದ್ರಾ ನದಿ ದಾಟಿ ಹೋಗಿದ್ರೆ ಆಂಧ್ರಪ್ರದೇಶ ಸಿಗುತ್ತೆ. ಹೀಗಾಗಿ ನಿತ್ಯವೂ ‌ಆಂಧ್ರ ಮತ್ತು ತೆಲಂಗಾಣದ ಜನರು ರಾಯಚೂರು ಜಿಲ್ಲೆಗೆ ಬಂದು ಹೋಗುವುದು ಕಾಮನ್. ನೂರಾರು ಸಂಬಂಧಗಳು ಮತ್ತು ಕೆಲ ಸಂಪ್ರದಾಯಗಳು ರಾಯಚೂರಿನಲ್ಲಿ ಕಾಣಬಹುದಾಗಿದೆ. ಅದರ ಭಾಗವಾಗಿಯೇ ರಾಯಚೂರು ನಗರದಲ್ಲಿ ರಾಜರೋಷವಾಗಿ ವಿಷಪೂರಿತ ಸೇಂದಿ ‌ಮಾರಾಟ ದಂಧೆ ಜೋರಾಗಿ ನಡೆದಿದೆ.  

ಇಂತಹ ವಿಷಪೂರಿತ ಸೇಂದಿ ಸೇವಿಸಿದ ಯುವಕರು ಈಗ ಬೀದಿಯ ಹೆಣಗಳಂತೆ ಚಟಕ್ಕೆ ಬಲಿಯಾಗಿ ನಿತ್ಯ ರೋಗಕ್ಕೆ ತುತ್ತಾಗಿ ಓಡಾಟ ಮಾಡುವುದು ನಡೆದಿದೆ. ಅದರಲ್ಲೂ ಸಿ.ಎಚ್. ಸೇಂದಿ ದಾಸರಾದ ನೂರಾರು ಕುಟುಂಬಗಳು ಬೀದಿಗೆ ಬಂದಿರುವ ಹತ್ತಾರು ದುರಂತ ಕಥೆಗಳು ರಾಯಚೂರು ನಗರದಲ್ಲಿ ಇನ್ನೂ ಜೀವಂತ ಕಾಣಬಹುದಾಗಿದೆ. 

ರಾಯಚೂರು: ಶ್ವಾಸಕೋಶದಿಂದ ಗುಂಡು ಸೂಜಿ ಹೊರ ತೆಗೆದ ರಿಮ್ಸ್ ವೈದ್ಯರು, ಬಾಲಕನಿಗೆ ಪುನರ್ಜನ್ಮ..!

ತೆಲಂಗಾಣದಿಂದ ಸಿ.ಎಚ್. ಪೌಡರ್ ತಂದು ಸೇಂದಿ ದಂಧೆ: 

ತೆಲಂಗಾಣದಲ್ಲಿ ಸೇಂದಿ ಮಾರಾಟಕ್ಕೆ ಸರ್ಕಾರವೇ ಅನುಮತಿ ನೀಡಿದೆ. ಹೀಗಾಗಿ ತೆಲಂಗಾಣ ತುಂಬಾ ರಾಜಾರೋಷವಾಗಿ ಸೇಂದಿ ಮಾರಾಟವಾಗುತ್ತೆ.‌ಆದ್ರೆ ನಮ್ಮ ರಾಜ್ಯದಲ್ಲಿ ಸೇಂದಿ ನಿಷೇಧವಿದೆ. ಆದ್ರೂ ರಾಯಚೂರು ನಗರದ ಗಲ್ಲಿ ಗಲ್ಲಿಯ ಮನೆಗಳಲ್ಲಿ ಅಕ್ರಮವಾಗಿ ವಿಷಪೂರಿತ ಸೇಂದಿ ಮಾರಾಟ ದಂಧೆ ಜೋರಾಗಿ ನಡೆದಿದೆ. ಈ ಹಿಂದೆ ಕ್ವಿಂಟಾಲ್ ಗಟ್ಟಲೇ ಸಿ.ಎಚ್. ಪೌಡರ್ ತಂದು ಸೇಂದಿ ಮಾರಾಟ ದಂಧೆ ಮಾಡುವ ದಂಧೆಕೋರರು ಈಗ ಆ ದಂಧೆ ಬಿಟ್ಟಿದ್ದಾರೆ. ಅವರು ಮಾಡಿದ ದಂಧೆಯಿಂದ ಸೇಂದಿ ದಾಸರಾದ ಬಡ ಜನರು ಈಗ ಸಿ.ಎಚ್. ಪೌಡರ್ ಸೇಂದಿ ಮಾರಾಟಕ್ಕೆ ಇಳಿದಿದ್ದಾರೆ. ಲೀಟರ್ ಸಿ.ಎಚ್. ಪೌಡರ್ ಸೇಂದಿಗೆ 50ರೂಪಾಯಿಗೆ ನಗರದಲ್ಲಿ ಮಾರಾಟವಾಗುತ್ತಿದೆ.

ಸಿ.ಎಚ್. ಪೌಡರ್ ಸೇಂದಿ ಸೇವಿಸಿದ್ರೆ ಏನು ಆಗುತ್ತೆ!

ಸಿ.ಎಚ್. ಪೌಡರ್ ಅಂದ್ರೆ ಇಂಗ್ಲಿಷ್ ‌ನಲ್ಲಿ  calcium hypochlorite. ಈ ಪೌಡರ್ ಕೇವಲ ಔಷಧಿ ತಯಾರಿಕೆ ಮಾತ್ರ ಬಳಕೆ ಮಾಡುತ್ತಿದ್ರು. ಈಗ ಇಡೀ ವಿಶ್ವದಲ್ಲಿ ಈ ಸಿ.ಎಚ್‌. ಪೌಡರ್ ನಿಷೇಧ ಮಾಡಲಾಗಿದೆ. ಆದ್ರೂ ಕೆಲ ಕೆಮಿಕಲ್ ಕಂಪನಿಯವರು ಕಳ್ಳತನದಿಂದ ತಯಾರಿಕೆ ಮಾಡಿ ತೆಲಂಗಾಣಕ್ಕೆ ಕಳುಹಿಸುತ್ತಿದ್ದಾರೆ. ಆ ಕೆಮಿಕಲ್ ಮತ್ತು ವಿಷಕಾರಿ ಸಿ.ಎಚ್. ಪೌಡರ್ ‌ಕಳ್ಳ ಮಾರ್ಗದಿಂದ ರಾಯಚೂರು ನಗರಕ್ಕೆ ಬಂದು ಸೇರುತ್ತಿದೆ. ಹೀಗೆ ಬಂದು ಸೇರಿದ ನಿಷೇಧಿತ  ವಿಷಕಾರಿ ಸಿ.ಎಚ್. ಪೌಡರ್ ಸಾಗಾಟ ಮಾಡುವ ಒಂದು ಬಹುದೊಡ್ಡ ತಂಡವೇ ರಾಯಚೂರು ನಗರದ ಗಲ್ಲಿ ಗಲ್ಲಿ ‌ಇದೆ. ಈ ತಂಡವು ಸಿ.ಎಚ್. ಪೌಡರ್ ನಿಂದ ಸೇಂದಿ ತಯಾರಿಕೆ ಮಾಡಿ ಮನೆಯಲ್ಲಿ ಕುಳಿತು ಮಾರಾಟ ಮಾಡುತ್ತಿದ್ದಾರೆ. ಇಂತಹ ಅಪಾಯಕಾರಿ ಸೇಂದಿ ಒಮ್ಮೆ ಸೇವನೆ ಮಾಡಿದ್ರೆ ಸಾಕು, ಆ ವ್ಯಕ್ತಿಗೆ ನಿತ್ಯವೂ ಸಿ.ಎಚ್. ಪೌಡರ್ ಸೇಂದಿ ಸೇವನೆ ‌ಮಾಡಲ್ಲೇ ಬೇಕು. ಇಲ್ಲವೆಂದರೆ ಆತನ ಕೈ- ಕಾಲು ಕೆಲಸ ಮಾಡಲ್ಲವೆಂಬಂತೆ ವರ್ತಿಸಲು ಶುರು ಮಾಡುತ್ತಾರೆ. ಹೀಗಾಗಿ ಈ ದಂಧೆಯೂ ಇನ್ನೂ ರಾಯಚೂರು ‌ನಗರದಲ್ಲಿ ಜೀವಂತವಿದೆ.

ಸಿ.ಎಚ್.ಪೌಡರ್ ಸೇಂದಿ ಹೇಗೆ ತಯಾರಿಸುತ್ತಾರೆ!

ಸಿ.ಎಚ್. ಪೌಡರ್ ಸೇಂದಿಗೆ ರಾಯಚೂರು ನಗರದಲ್ಲಿ ಭಾರೀ ಬೇಡಿಕೆ ಇದೆ. ಕೆಲ ನಗರದಲ್ಲಿ ಯಾರೇ ಸತ್ತರೂ ಸಂಬಂಧಿಕರಿಗೆ ಟೀ- ಕಾಫಿ ಬದಲು ಎಲ್ಲರಿಗೂ ಸಿ.ಎಚ್. ಪೌಡರ್ ‌ಸೇಂದಿ ನೀಡುವ ಪದ್ಧತಿ ಇದೆ. ಕೆಲ ಬಡಾವಣೆಯಲ್ಲಿ ಸಂಜೆ ಆದ್ರೆ ಸಾಕು ದುಡಿದು ಮನೆಗೆ ಬರುವ ಕೂಲಿ ಕಾರ್ಮಿಕರು ಸೇಂದಿ ಸೇವಿಸಿ ತೂಗಾಡುವುದು ನಿತ್ಯ ನೋಡಬಹುದಾಗಿದೆ.ಎಷ್ಟೋ ಮಕ್ಕಳು ಅಪ್ಪ- ಅಮ್ಮನ ಕಳೆದುಕೊಂಡು ಅನಾಥರಾಗಿ ಅವರು ಸಹ ಈ ವಿಷಕಾರಿ ಸೇಂದಿಗೆ ದಾಸರಾಗಿ ರಸ್ತೆಯಲ್ಲಿ ಅಲೆಯುವುದು ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಕಾಣಬಹುದಾಗಿದೆ. ಇಂತಹ ವಿಷಕಾರಿ ತಿಳಿಹಳದಿ ಬಣ್ಣದ  ಸಿ.ಚ್. ಪೌಡರ್ ಗೆ ನೀರು ಹಾಕಿ, ಅದಕ್ಕೆ ಬಿಳಿಬಣ್ಣ ಬರಲಿವೆಂದು ಸುಣ್ಣ ಕಲಬೆರಕೆ ಮಾಡಿ ಲೀಟರ್ ಅಂತೆ ಮಾರಾಟ ಮಾಡುತ್ತಾರೆ.

ಎಲ್ಲೆಲ್ಲಿ ಮಾರಾಟವಾಗುತ್ತೆ ಸಿ.ಎಚ್. ಪೌಡರ್:

ರಾಯಚೂರು ನಗರದಲ್ಲಿ ಗಲ್ಲಿ - ಗಲ್ಲಿಯಲ್ಲಿ ಸಿ.ಎಚ್. ಪೌಡರ್ ಮಾರಾಟವಾಗುತ್ತೆ. ಅದರಲ್ಲೂ ಈ ವರ್ಷ ಮಳೆ ಕಡಿಮೆ ಆಗಿದೆ. ಹೀಗಾಗಿ ದೇಹ ತಂಪಾಗಿವೆಂದು ಮಕ್ಕಳು, ಯುವಕರು ಹಾಗೂ ಮಹಿಳೆಯರು ಸಿ.ಎಚ್. ಪೌಡರ್ ಸೇಂದಿಗೆ ದಾಸರಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಕಳ್ಳತನದಿಂದ ಸಿ.ಎಚ್. ಪೌಡರ್ ಸೇಂದಿ ಮಾರಾಟಗಾರರು ಸಹ ಹೆಚ್ಚಾಗಿದ್ದಾರೆ. ಮುಖ್ಯವಾಗಿ ರಾಯಚೂರು ನಗರದ ಎಂಪಿಎಂಸಿ ಸುತ್ತಲೂ ಬರುವ ಬಡಾವಣೆಯಲ್ಲಿ, ಎಲ್.ಬಿ.ಎಸ್.‌ನಗರದಲ್ಲಿ ಹಾಗೂ ‌ಹರಿಜನ‌ವಾಡ ಪ್ರದೇಶದಲ್ಲಿ ಮತ್ತು ರೈಲ್ವೆ ನಿಲ್ದಾಣ ಅಕ್ಕಪಕ್ಕದಲ್ಲಿ ಈ ಸೇಂದಿ ‌ಮಾರಾಟ ದಂಧೆ ನಡೆದಿದೆ. ಬಹುತೇಕ ದಂಧೆ ಮಾಡುವರು ಸಿ.ಎಚ್. ಪೌಡರ್ ಸೇಂದಿಗೆ ದಾಸರಾದವರೇ ಹೆಚ್ಚಾಗಿ ಇದ್ದಾರೆ. ಸೇಂದಿ ಸೇವನೆ ‌ಮಾಡದಿದ್ರೆ ಜೀವವೇ ಹೋಗುತ್ತೆ ಎಂಬುವಂತೆ ಸೇಂದಿಗೆ ದಾಸರಾದವರು ಇದ್ದಾರೆ. ಕೆಲವರು ಸೇಂದಿ ಸೇವನೆಗಾಗಿ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣ ಹಾಗೂ ‌ಮಾರುಕಟ್ಟೆ ಪ್ರದೇಶದಲ್ಲಿ ಭಿಕ್ಷೆ ಬೇಡಿ ‌ಸೇಂದಿ ಖರೀದಿ ‌ಮಾಡಿ ಸೇವನೆ ‌ಮಾಡುವರು ಇದ್ದಾರೆ.

ಚಿಕ್ಕ ಮಕ್ಕಳು ‌ಮತ್ತು ಮಹಿಳೆಯರೇ ಹೆಚ್ಚಾಗಿ ಸೇಂದಿ ‌ದಂಧೆಯಲ್ಲಿ ಭಾಗಿ

ರಾಯಚೂರು ನಗರದ ವಿವಿಧೆಡೆ ರಾಜಾರೋಷವಾಗಿ ನಿಷೇಧಿತ ವಿಷಕಾರಿ ಸೇಂದಿ ಮಾರಾಟವಾಗುತ್ತಿದೆ. ಈ ಸೇಂದಿಗೆ ಚಟಕ್ಕೆ ಮಕ್ಕಳು ಮತ್ತು ‌ಮಹಿಳೆಯರು ಒಳಗಾಗಿದ್ದು ಆತಂಕದ ಸಂಗತಿಯಾಗಿದೆ. ಸೇಂದಿ ಚಟಕ್ಕಾಗಿ ಮಕ್ಕಳು ತಮ್ಮ ಪ್ರಾಣದ ಹಂಗು ತೊರೆದು ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಕೆಲ ಮಹಿಳೆಯರು ಸೇಂದಿಗೆ ಹಣ ಇಲ್ಲದಕ್ಕೆ ಮೈಮಾರಾಟ ಮಾಡಿ ಹಣ ಪಡೆದು ಸೇಂದಿ ಸೇವಿಸಿ, ಇತ್ತೀಚಿಗೆ ಏಡ್ಸ್ ನಂತ ಮಾರಕ ಕಾಯಿಲೆಗಳಿಗೆ ತುತ್ತಾಗಿ ನರಳಾಟ ನಡೆಸಿದ್ದಾರೆ. ಕೆಲ ಮಕ್ಕಳೇ ತಂದೆ- ತಾಯಿ ಜೊತೆಗೆ ಪಕ್ಕದ ತೆಲಂಗಾಣಕ್ಕೆ ಹೋಗಿ ಸೇಂದಿ ತಂದು ಮಾರಾಟಕ್ಕೆ ‌ಇಳಿದಿದ್ದಾರೆ. 

ಸಿ.ಎಚ್‌. ಪೌಡರ್ ಸೇಂದಿಗೆ ಬ್ರೇಕ್ ಹಾಕುವರು ಯಾರು?

ರಾಯಚೂರು ನಗರದಲ್ಲಿ ನಡೆಯುವ ಈ ಅಕ್ರಮ ವಿಷಕಾರಿ ಸೇಂದಿ ಮಾರಾಟ ದಂಧೆ ಕಡಿವಾಣ ಹಾಕುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಏಕೆಂದರೆ ‌ಈ ಮುಂಚೆ ಕೆಲ ಬಡಾವಣೆಯಲ್ಲಿ ‌ಮಾತ್ರ ಸಿಗುತ್ತಿದ್ದ ಸಿ.ಎಚ್. ಪೌಡರ್ ಸೇಂದಿ ಈಗ ಗಲ್ಲಿ ಗಲ್ಲಿಯ ಮನೆಯಲ್ಲಿ ‌ಮಾರಾಟವಾಗುತ್ತಿದೆ. ಅಬಕಾರಿ ಪೊಲೀಸರು ರೇಡ್ ಮಾಡಿ ಆ ಕ್ಷಣದಲ್ಲಿ ಸಿಕ್ಕ ಸಿ.ಎಚ್. ಪೌಡರ್ ಮತ್ತು ಆರೋಪಿಯನ್ನ ಬಂಧಿಸಿ ಕೇಸ್ ಹಾಕಿ ಬಿಡುತ್ತಾರೆ. ಆ ಬಳಿಕ ಆ ವ್ಯಕ್ತಿ ಮತ್ತೆ ನಾನಾ ಮಾರ್ಗಗಳ ಮುಖಾಂತರ ಹೊರಬಂದು ಮತ್ತೆ ಅದೇ ಕಳ್ಳ ದಂಧೆ ‌ಶುರು ಮಾಡುವುದು ‌ಇಲ್ಲಿ ಕಾಮಾನ್ ಆಗಿ ಬಿಟ್ಟಿದೆ. ಇದನ್ನ ಸಂಪೂರ್ಣವಾಗಿ ತಡೆಯಬೇಕೆಂದು ರಾಯಚೂರು ಜಿಲ್ಲಾಡಳಿತ 12 ಇಲಾಖೆಗಳನ್ನ ಒಳಗೊಂಡ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಮಾಡಿದೆ. ಮೂರು ತಿಂಗಳಿಗೆ ಒಮ್ಮೆ ಸಭೆ ಮಾಡಿ 3-4 ಬಾರಿ ಕೇಸ್ ಗಳು ಆದವರಿಗೆ ಗಡಿಪಾರು ಸಹ ಮಾಡಿದ್ದಾರೆ. ಆದ್ರೂ ದಂಧೆ ಮಾತ್ರ ಹಾಗೇ ನಡೆಯುತ್ತಿದೆ.

ಮಂತ್ರಾಲಯದ ರಾಯರ ಹುಂಡಿಗೂ ತಟ್ಟಿದ ಬರದ ಬಿಸಿ; 31 ದಿನದಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?

ವಿಷಪೂರಿತ ಸೇಂದಿ ನಿರ್ಮೂಲನಾ ಸ್ಥಾಯಿ ಸಮಿತಿಯಲ್ಲಿನ ಇಲಾಖೆಗಳು:

ಸಿ.ಎಚ್. ಪೌಡರ್ ಸೇಂದಿ ಅಂದ್ರೆ ಎಲ್ಲರೂ ಅದು ಅಬಕಾರಿ ಇಲಾಖೆಗೆ ಸೇರಿದ್ದು, ಅವರೇ ಕೇಸ್ ಮಾಡಬೇಕು ಅಂತ ಎಲ್ಲರಿಗೂ ಗೊತ್ತು. ಆದ್ರೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲೆಗೆ ಪಿಡುಗು ಆಗುವ ಸಿ.ಎಚ್. ಪೌಡರ್ ನಿರ್ಮೂಲನೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 12 ಇಲಾಖೆಗಳು ಒಳಗೊಂಡ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಇದೆ. ಈ ಸಮಿತಿಯಲ್ಲಿ ಜಿ.ಪಂ. ಜಿಲ್ಲಾ ಪೊಲೀಸರು, ಸಹಾಯಕ ಆಯುಕ್ತರು, n‌ಅರಣ್ಯ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ,ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಮಹಿಳಾ ಮತ್ತು ‌ಮಕ್ಕಳ ಕಲ್ಯಾಣ ಇಲಾಖೆ, ರೈಲ್ವೆ ಮತ್ತು ತಹಸೀಲ್ದಾರರು, ಇಷ್ಟು ಇಲಾಖೆಗಳ ಮುಖ್ಯಸ್ಥರು ಸಹ ಕೈಜೋಡಿಸಿ ಈ ಸಮಸ್ಯೆಗೆ ಮುಕ್ತಿ ನೀಡಬೇಕಾಗಿದೆ. ಆದ್ರೆ ಅಬಕಾರಿ ಇಲಾಖೆ ರೇಡ್ ಮಾಡಿರುವುದು ಬಿಟ್ಟರೇ ಬೇರೆ ಇಲಾಖೆಯವರು ‌ನೋಡಿಯೂ ನೋಡದಂತೆ ಇರುವುದರಿಂದ ಈ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. 

ಚಿಕ್ಕ ಮಕ್ಕಳೇ ಸಿ.ಎಚ್. ಪೌಡರ್ ಸೇಂದಿ ಸಾಗಾಟದ ದಂಧೆಕೋರರು ಆಗುತ್ತಿದ್ದಾರೆ. ಕೂಡಲೇ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಅಲರ್ಟ್ ಆಗಿ ಸಿ.ಎಚ್.ಪೌಡರ್ ಗೆ ದಾಸರಾದವರಿಗೆ ಗುರುತಿಸಿ ಅವರಿಗೆ ಬೇರೆ ಕಡೆ ಗುಣಮಟ್ಟದ ಚಿಕಿತ್ಸೆ ಕೊಡಿಸಿ ಅವರ ಮನ ಪರಿವರ್ತನೆ ಮಾಡಿ ಸಮಾಜಮುಖಿ ದಾರಿಗೆ ತರುವ ಜವಾಬ್ದಾರಿ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಮೇಲಿದೆ. ಒಂದು ವೇಳೆ ಸ್ಥಾಯಿ ಸಮಿತಿ ವಿಫಲವಾದ್ರೆ ಇಡೀ ನಗರವೇ ಸೇಂದಿ ಅಡ್ಡ ಆಗುವುದರಲ್ಲಿ ಅನುಮಾನವಿಲ್ಲ.

Follow Us:
Download App:
  • android
  • ios