ಚಿತ್ರದುರ್ಗ(ಜು.28): ಚಿತ್ರದುರ್ಗ ಜಿಲ್ಲೆಯ ಏಕಮಾತ್ರ ಕಾಂಗ್ರೆಸ್‌ ಶಾಸಕ , ಚಳ್ಳಕೆರೆ ವಿಧಾನಸಭೆ ಕ್ಷೇತ್ರದ ಪ್ರತಿನಿಧಿ ಟಿ.ರಘುಮೂರ್ತಿ ಅಂತೂ 18 ದಿನಗಳ ಮೈತ್ರಿ ತಿಕ್ಕಾಟದ ನಂತರ ಕ್ಷೇತ್ರದ ಕಡೆಗೆ ಮುಖ ಮಾಡಿದ್ದಾರೆ.

ಶನಿವಾರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಿತ್ರದುರ್ಗ ತಾಲೂಕಿನ ತುರುವನೂರು ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ ಅವರು, ರೈತರ ಜೊತೆಗೆ ಕೆಲಕಾಲ ಚರ್ಚಿಸಿದರು. ಅಲ್ಲದೆ, ಮೇವು ವಿತರಣೆ ಬಗ್ಗೆ ಮಾಹಿತಿ ಪಡೆದರು.

ಮೇವಿನ ಗುಣಮಟ್ಟದ ಮಾಹಿತಿ:

ಗೋಶಾಲೆಗೆ ಶಾಸಕ ಟಿ.ರಘುಮೂರ್ತಿ ಅವರು ನೀಡಿದ ದಿಢೀರ್‌ ಭೇಟಿ ಇದಾದ್ದರಿಂದ ಅಲ್ಲಿ ಯಾರೂ ಅಧಿಕಾರಿಗಳು ಇರಲಿಲ್ಲ. ಶನಿವಾರ ರಜೆ ಇದ್ದಿದ್ದರಿಂದ ಅಧಿಕಾರಿಗಳನ್ನು ಸಂಪರ್ಕಿಸುವ ಉಸಾಬರಿಗೂ ಅವರು ಹೋಗಲಿಲ್ಲ. ಗೋಶಾಲೆಗೆ ರಾಸುಗಳು ಹೊಡೆದುಕೊಂಡು ಬಂದಿದ್ದ ರೈತರು ಶಾಸಕರ ಆಗಮನ ಕಂಡು ಖುಷಿಯಾಗಿದ್ದರು. ಜಾನುವಾರುಗಳ ಸ್ಥಿತಿ ಅವಲೋಕಿಸಿ ನಿತ್ಯ ವಿತರಣೆಯಾಗುತ್ತಿರುವ ಮೇವಿನ ಪ್ರಮಾಣ ಹಾಗೂ ಗುಣಮಟ್ಟದ ಬಗ್ಗೆ ರೈತರಿಂದಲೇ ರಘುಮೂರ್ತಿ ಅವರು ಮಾಹಿತಿ ಪಡೆದರು.

ಮಳೆ ಬರುವವರೆಗೂ ಮೇವಿನ ಸಮಸ್ಯೆ:

ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದರೂ ಚಿತ್ರದುರ್ಗ ತಾಲೂಕಿನ ಕಸಬಾ ಹಾಗೂ ತುರುವನೂರು ಹೋಬಳಿಯಲ್ಲಿ ವರುಣ ಮುನಿಸು ತೊರೆದಿಲ್ಲ. ಹಾಗಾಗಿ, ಎಲ್ಲೂ ಚಿಗುರು ಮೇವು ಸಿಗುತ್ತಿಲ್ಲ. ಸರ್ಕಾರ ನಿಯಮಾವಳಿಗಳ ಪ್ರಕಾರ ಅಧಿಕಾರಿಗಳು ಮೇವು ವಿತರಣೆ ಮಾಡುತ್ತಿದ್ದಾರೆ. ಮಳೆ ಬರುವವರೆಗೂ ರೈತರು ಸಹಕರಿಸಬೇಕೆಂದು ರಘುಮೂರ್ತಿ ಮನವಿ ಮಾಡಿದರು.

ಅತೃಪ್ತ ಶಾಸಕರು ಅನರ್ಹ: ಸ್ಪೀಕರ್ ನಿರ್ಧಾರಕ್ಕೆ ವಿಶ್ವನಾಥ್ ಫುಲ್ ಗರಂ!

ನಿತ್ಯ ಹಸಿಜೋಳದ ಸಿಪ್ಪೆಯನ್ನೇ ಜಾನುವಾರುಗಳಿಗೆ ನೀಡುತ್ತಿದ್ದು, ಅದರಲ್ಲಿ ಹೆಚ್ಚಿನ ಸತ್ವವಿದೆ. ಜಾನುವಾರುಗಳು ಮೇವನ್ನು ಪೂರ್ಣವಾಗಿ ತಿನ್ನುತ್ತಿವೆ. ಜಾನುವಾರುಗಳ ಎಣಿಕೆ ನಂತರ ನಿತ್ಯ ಮೇವು ನೀಡಲಾಗುತ್ತಿದೆ. ಗ್ರಾಮಲೆಕ್ಕಾಧಿಕಾರಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಪಶುವೈದ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಉತ್ತಮ ಮಳೆಯಾಗುವವರೆಗೆ ಗೋಶಾಲೆ ಮುಂದುವರೆಸುವಂತೆ ರೈತರು ಕೋರಿದರು.

ಮೇವು ಬ್ಯಾಂಕ್‌ ತೆರೆಯಿರಿ:

ಎರಡು ದಿನದ ಹಿಂದೆಯಷ್ಟೇ ಹುಣಿಸೆಕಟ್ಟೆಗ್ರಾಮದ ರೈತರು ತಹಸೀಲ್ದಾರ್‌ ಕಾಂತರಾಜ್‌ ಅವರನ್ನು ಭೇಟಿಯಾಗಿ ತುರುವನೂರು ಗೋಶಾಲೆಗೆ ಜಾನುವಾರುಗಳ ಹೊಡೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಎರೆ ಹೊಲದಲ್ಲಿ ಗೋಶಾಲೆ ತೆರೆದಿರುವುದರಿಂದ ತುಸು ಮಳೆ ಬಿದ್ದರೂ ಮಣ್ಣು ಅಂಟುತ್ತೆ. ಶೀತಗಾಳಿಗೆ ಜಾನುವಾರುಗಳು ಹಾಲು ಕೊಡುವುದಿಲ್ಲವೆಂದು ಆರೋಪಿಸಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಣಿಸೆಕಟ್ಟೆಗ್ರಾಮದಲ್ಲಿ ಮೇವು ಬ್ಯಾಂಕ್‌ ತೆರೆದರೆ ಹಣಕೊಟ್ಟು ಅಲ್ಲೇ ಮೇವು ಪಡೆಯುತ್ತೇವೆ. ಜಿಲ್ಲಾಡಳಿತ ತಕ್ಷಣವೇ ಮೇವು ಬ್ಯಾಂಕ್‌ ತೆರೆಯಬೇಕೆಂದು ಒತ್ತಾಯಿಸಿದ್ದರು. ಶಾಸಕ ಟಿ.ರಘುಮೂರ್ತಿ ಗೋಶಾಲೆಗೆ ದಿಢೀರ್‌ ಭೇಟಿ ನೀಡಿದ್ದರಿಂದ ಅಷ್ಟಾಗಿ ರೈತರಿಗೆ ಈ ವಿಷಯ ಗಮನಕ್ಕೆ ಬರಲಿಲ್ಲ.