ಸರ್ಜಾಪುರದಿಂದ ಹೆಬ್ಬಾಳವರೆಗಿನ ಮೆಟ್ರೋ ರೆಡ್ ಲೈನ್ (ಹಂತ–3 ‘ಎ’) ಯೋಜನೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ತಾಂತ್ರಿಕ ಮತ್ತು ಆರ್ಥಿಕ ಅಂಶಗಳ ಕುರಿತು ಮರು ಅಧ್ಯಯನ ನಡೆಸುವಂತೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಪರಿಷ್ಕೃತ ವರದಿ ಸಿದ್ಧಪಡಿಸುತ್ತಿದೆ.

ಬೆಂಗಳೂರು: ಸರ್ಜಾಪುರದಿಂದ ಹೆಬ್ಬಾಳವರೆಗೆ ನಿರ್ಮಿಸಲು ಉದ್ದೇಶಿಸಿರುವ ಮೆಟ್ರೋ ರೆಡ್ ಲೈನ್ (ಹಂತ–3 ‘ಎ’) ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಹಂತ ಮೂರು ‘ಎ’ ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮಂಡಳಿ ಪ್ರಾಥಮಿಕವಾಗಿ ತಿರಸ್ಕರಿಸಿದ್ದು, ಯೋಜನೆ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುವಂತೆ ಸೂಚನೆ ನೀಡಿದೆ.

Add Asianetnews Kannada as a Preferred SourcegooglePreferred

ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾನ್ ಮಾಹಿತಿ ನೀಡಿದ್ದು, ಸರ್ಜಾಪುರ–ಹೆಬ್ಬಾಳ ಮೆಟ್ರೋ ಮಾರ್ಗವನ್ನು ಡಬಲ್ ಡೆಕ್ಕರ್ ಫ್ಲೈಓವರ್ ಹಾಗೂ ಮೆಟ್ರೋ ಕಾಮಗಾರಿಯನ್ನು ಸಂಯೋಜಿತವಾಗಿ ನಿರ್ಮಿಸುವ ಉದ್ದೇಶದೊಂದಿಗೆ ಯೋಜನೆ ರೂಪಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ

ಡಬಲ್ ಡೆಕ್ಕರ್ ಹಾಗೂ ಮೆಟ್ರೋ ಕಾಮಗಾರಿಯನ್ನು ಒಟ್ಟಿಗೆ ನಿರ್ಮಿಸುವ ಮಾದರಿಯ ಕುರಿತು ವಿವರವಾದ ವರದಿಯನ್ನು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಈಗಾಗಲೇ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಮಂಡಳಿ ಈ ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕ ಹಾಗೂ ಆರ್ಥಿಕ ಅಂಶಗಳ ಕುರಿತು ಇನ್ನಷ್ಟು ಅಧ್ಯಯನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಮಂಡಳಿಯ ಸೂಚನೆಯಂತೆ, ಯೋಜನೆಯನ್ನು ಪುನಃ ಪರಿಶೀಲಿಸಿ, ಅಗತ್ಯ ಬದಲಾವಣೆಗಳೊಂದಿಗೆ ಮತ್ತೊಮ್ಮೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಯೋಜನೆ ವೆಚ್ಚ ಕಡಿಮೆಗೊಳಿಸುವಂತೆ ಸಲಹೆ

ಯೋಜನೆಯ ಒಟ್ಟು ವೆಚ್ಚವನ್ನು ಕಡಿಮೆಗೊಳಿಸುವ ಸಾಧ್ಯತೆಗಳ ಬಗ್ಗೆ ಕೂಡ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ, ಯೋಜನೆಯ ವೆಚ್ಚ ಅಂದಾಜು, ವಿನ್ಯಾಸ ಹಾಗೂ ತಾಂತ್ರಿಕ ಅಂಶಗಳನ್ನು ಮರುಪರಿಶೀಲನೆ ನಡೆಸಲಾಗುತ್ತಿದೆ. ವೆಚ್ಚ ನಿಯಂತ್ರಣದ ಜೊತೆಗೆ ಕಾರ್ಯಸಾಧ್ಯತೆ ಕುರಿತು ಹೊಸದಾಗಿ ಅಧ್ಯಯನ ನಡೆಸಿ, ತಿದ್ದುಪಡಿ ವರದಿಯನ್ನು ಮಂಡಳಿಗೆ ಸಲ್ಲಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಡಿಪಿಆರ್ ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿ

ಕೇಂದ್ರ ಸರ್ಕಾರದ ಸೂಚನೆಗಳ ಹಿನ್ನೆಲೆಯಲ್ಲಿ, ಹಂತ–3 ‘ಎ’ ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಯೋಜನೆಯ ವೆಚ್ಚ, ತಾಂತ್ರಿಕ ಅಂಶಗಳು ಹಾಗೂ ಸಂಚಾರ ಸಮಸ್ಯೆ ಪರಿಹಾರಕ್ಕೆ ಯೋಜನೆ ಎಷ್ಟು ಪರಿಣಾಮಕಾರಿ ಎಂಬ ಅಂಶಗಳನ್ನು ಸಮಗ್ರವಾಗಿ ಒಳಗೊಂಡಂತೆ ಡಿಪಿಆರ್ ತಯಾರಿಸಲಾಗುತ್ತಿದೆ.

ಪುನರ್‌ಪರಿಶೀಲನೆ ಹಾಗೂ ತಿದ್ದುಪಡಿ ವರದಿ ಸಲ್ಲಿಸಿದ ಬಳಿಕವೇ ಕೇಂದ್ರ ಸರ್ಕಾರದಿಂದ ಅಂತಿಮ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಸರ್ಜಾಪುರ–ಹೆಬ್ಬಾಳ ಮೆಟ್ರೋ ರೆಡ್ ಲೈನ್ ಯೋಜನೆಯ ಭವಿಷ್ಯ ಮುಂದಿನ ಪರಿಶೀಲನಾ ವರದಿ ಜೊತೆಗೆ ಕೇಂದ್ರ–ರಾಜ್ಯ ಮಟ್ಟದ ಚರ್ಚೆಗಳ ಮೇಲೆ ನಿಂತಿದೆ.