ಚಿಕ್ಕಮಗಳೂರಿನ ವಿದ್ಯಾ ಕಾಫಿ ಕ್ಯೂರಿಂಗ್ ಘಟಕವು ಬೇಜವಾಬ್ದಾರಿಯಿಂದ ಜಮೀನಿಗೆ ಸುರಿದ ಕೆಮಿಕಲ್ ಮಿಶ್ರಿತ ಬಿಸಿ ಬೂದಿಯ ಮೇಲೆ ಕಾಲಿಟ್ಟ ದೇವರಾಜ್ ಮತ್ತು ಈರೇಗೌಡ ಎಂಬ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಲುಗಳು ಸಂಪೂರ್ಣ ಸುಟ್ಟುಹೋಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಮಗಳೂರು (ಮಾ.06): ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಖಾಸಗಿ ಕಾಫಿ ಕ್ಯೂರಿಂಗ್ ಘಟಕವೊಂದರ ಬೇಜವಾಬ್ದಾರಿತನಕ್ಕೆ ಇಬ್ಬರು ರೈತರು ತಮ್ಮ ಕಾಲುಗಳನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹರಿಹರದಹಳ್ಳಿಯಲ್ಲಿರುವ 'ವಿದ್ಯಾ ಕಾಫಿ ಕ್ಯೂರಿಂಗ್' ಘಟಕವು ರಾತ್ರೋರಾತ್ರಿ ಜಮೀನಿಗೆ ಸುರಿಯುತ್ತಿರುವ ಕೆಮಿಕಲ್ ಮಿಶ್ರಿತ ಬಿಸಿ ಬೂದಿಯಿಂದಾಗಿ ಈ ದಾರುಣ ಘಟನೆ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

ಚಿಕ್ಕಮಗಳೂರು ತಾಲೂಕಿನ ಹರಿಹರದಹಳ್ಳಿ ನಿವಾಸಿಗಳಾದ ದೇವರಾಜ್ ಮತ್ತು ಈರೇಗೌಡ ಎಂಬ ರೈತರು ತಮ್ಮ ಜಮೀನಿಗೆ ಹೋದ ಸಂದರ್ಭದಲ್ಲಿ ಈ ಅನಾಹುತ ನಡೆದಿದೆ. ವಿದ್ಯಾ ಕಾಫಿ ಕ್ಯೂರಿಂಗ್ ಘಟಕದವರು ಕಾಫಿ ಸಂಸ್ಕರಣೆಯ ನಂತರ ಹೊರಬರುವ ಕೆಮಿಕಲ್ ಮಿಶ್ರಿತ ನೀರು ಮತ್ತು ಕಾದ ಬೂದಿಯನ್ನು ರಾತ್ರೋರಾತ್ರಿ ರೈತರ ಹೊಲಗಳ ಪಕ್ಕದಲ್ಲಿ ಸುರಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೇಲ್ನೋಟಕ್ಕೆ ಬೂದಿಯಂತೆ ಕಂಡರೂ, ಒಳಭಾಗದಲ್ಲಿ ಇದು ಕಲ್ಲಿದ್ದಲಿನಂತೆ ಕೆಂಡವಾಗಿ ಉರಿಯುತ್ತಿರುತ್ತದೆ. ಜಮೀನಿಗೆ ತೆರಳಿದ್ದ ಈ ಇಬ್ಬರು ರೈತರು ತಿಳಿಯದೇ ಈ ಬೂದಿಯ ಮೇಲೆ ಕಾಲಿಟ್ಟಿದ್ದಾರೆ.

ಸುಟ್ಟು ಕರಕಲಾದ ಕಾಲುಗಳು:

ಬೂದಿಯ ಮೇಲೆ ಕಾಲಿಡುತ್ತಿದ್ದಂತೆ ಇಬ್ಬರು ರೈತರ ಕಾಲುಗಳ ಮೇಲ್ಭಾಗದ ಚರ್ಮ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬೂದಿಯಲ್ಲಿದ್ದ ತೀವ್ರ ಶಾಖ ಮತ್ತು ರಾಸಾಯನಿಕಗಳ ಕಾರಣದಿಂದಾಗಿ ಕಾಲುಗಳು ಸುಟ್ಟು ಹೋಗಿದ್ದು, ಅವರು ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ಗಾಯಾಳು ರೈತರನ್ನು ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರಿಗೂ ತುರ್ತು ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ರೈತರ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ವಿದ್ಯಾ ಕಾಫಿ ಕ್ಯೂರಿಂಗ್ ವಿರುದ್ಧ ಆಕ್ರೋಶ:

ಕ್ಯೂರಿಂಗ್ ಘಟಕವು ರಾತ್ರೋರಾತ್ರಿ ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ರೈತರ ಜಮೀನುಗಳ ಹತ್ತಿರ ಈ ವಿಷಕಾರಿ ಬೂದಿ ಹಾಗೂ ತ್ಯಾಜ್ಯವನ್ನು ಸುರಿಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟಕದ ಮಾಲೀಕರ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣವಾಗಿದ್ದು, ಅವರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪೊಲೀಸ್ ದೂರು ದಾಖಲು:

ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಘಟಕದ ಹೊಣೆಗಾರರ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಕ್ಯೂರಿಂಗ್ ಘಟಕದ ಪರವಾನಗಿ ರದ್ದುಗೊಳಿಸುವಂತೆ ಒತ್ತಾಯ ಕೇಳಿಬರುತ್ತಿದೆ.

ತಮ್ಮ ಕುಟುಂಬದ ಆಧಾರಸ್ತಂಭವಾಗಿದ್ದ ರೈತರು ಈಗ ಆಸ್ಪತ್ರೆಯಲ್ಲಿ ನರಳುತ್ತಿದ್ದು, ಮಲೆನಾಡಿನ ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಇಂತಹ ಬೇಜವಾಬ್ದಾರಿ ಉದ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.