‘ಕೇಂದ್ರ ಕಾರ್ಪೋರೇಟ್‌ ಕೃಷಿ ತರಲು ಹೊರಟಿದೆ’

ದೇಶದ ಆರ್ಥಿಕತೆ, ಏಕತೆ ಮತ್ತು ಸಮಗ್ರತೆಗೆ ಆಳುವ ವರ್ಗದಿಂದ ಅಪಾಯ ಬಂದೊದಗಿದ್ದು ದೇಶದ ಸಂಪತ್ತು ಸೃಷ್ಟಿಸುವ ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೃಷಿ ಬಿಕ್ಕಟಿಗೆ ಸಿಲುಕಿದ್ದು ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ರೈತರ ಭೂಮಿಯನ್ನು ಕಿತ್ತುಕೊಂಡು ಕಾರ್ಪೊರೇಟ್‌ ಕೃಷಿಯನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಜಿಲ್ಲಾ ಸಂಚಾಲಕರಾದ ಸಿ. ಯತಿರಾಜು ತಿಳಿಸಿದರು.

Centre is going to bring corporate agriculture snr

 ತಿಪಟೂರು : ದೇಶದ ಆರ್ಥಿಕತೆ, ಏಕತೆ ಮತ್ತು ಸಮಗ್ರತೆಗೆ ಆಳುವ ವರ್ಗದಿಂದ ಅಪಾಯ ಬಂದೊದಗಿದ್ದು ದೇಶದ ಸಂಪತ್ತು ಸೃಷ್ಟಿಸುವ ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೃಷಿ ಬಿಕ್ಕಟಿಗೆ ಸಿಲುಕಿದ್ದು ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ರೈತರ ಭೂಮಿಯನ್ನು ಕಿತ್ತುಕೊಂಡು ಕಾರ್ಪೊರೇಟ್‌ ಕೃಷಿಯನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಜಿಲ್ಲಾ ಸಂಚಾಲಕರಾದ ಸಿ. ಯತಿರಾಜು ತಿಳಿಸಿದರು.

ನಗರದ ನಗರಸಭೆ ಮುಂಭಾಗ ಸಿಐಟಿಯು, ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗಾಗಿ ಮತ್ತು ಜನರ ಹಕ್ಕುಗಳ ರಕ್ಷಣೆಗಾಗಿ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿ ಮಾತನಾಡಿದರು. ಉತ್ಪಾದನಾ ವೆಚ್ಚದ ಆಧಾರದಲ್ಲಿ ಪ್ರತಿ ಕ್ವಿಂಟಲ್‌ ಕೊಬ್ಬರಿಗೆ 16,730 ರು.ಗಳನ್ನು ಬೆಂಬಲ ಬೆಲೆಯಾಗಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೃಷಿ ವೆಚ್ಚ ಮತ್ತು ದರ ಆಯೋಗಕ್ಕೆ ರಾಜ್ಯದ ತೋಟಗಾರಿಕಾ ಇಲಾಖೆಯು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 11750 ರು ಮಾತ್ರ ನಿಗಧಿ ಮಾಡಿ ರೈತ ವಿರೋಧಿಯಾಗಿದೆ. ರೈತ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿ ಮಾಡದೆ 77ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ತಿರಂಗ ಯಾತ್ರೆ ಮತ್ತು ಶೋಭಾಯಾತ್ರೆ ನಡೆಸುವ ಮೂಲಕ ಜನತೆಗೆ ಸುಳ್ಳಿನ ಕಂತೆಯನ್ನು ಹೆಣದಿದೆ. ಇನ್ನು ಜನತೆ ಅರ್ಥಮಾಡಿಕೊಂಡು ಕೋಮುವಾದದಿಂದ ಭಾರತವನ್ನು ರಕ್ಷಿಸಬೇಕು ಎಂದರು.

ಪ್ರಗತಿಪರ ಚಿಂತಕಿ ಇಂದಿರಮ್ಮ ಮಾತನಾಡಿ, ಪ್ರಸ್ತುತ ಮಣಿಪುರದಲ್ಲಿ ನಡೆಯುತ್ತಿರುಗ ಘಟನೆಗಳು ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಇಡೀ ಮಾನವ ಕುಲವೆ ತಲೆತಗ್ಗಿಸುವಂತಹದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಸ್ವಾತಂತ್ರ್ಯ ಬಂದು 77ವರ್ಷಗಳಾದರೂ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಿಐಟಿಯು ಎನ್‌.ಕೆ. ಸುಬ್ರಮಣೈ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಅಕ್ರಮಣಕಾರಿಯಾಗಿ ವಿದ್ಯುತ್‌, ರೈಲ್ವೆ ಸೇರಿದಂತೆ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ವಿದ್ಯುತ್‌ ತಿದ್ದುಪಡಿ ಮಸೂದೆ ಹಿಂಪಡೆದು ಸ್ಮಾರ್ಚ್‌ ಮೀಟರ್‌ ಯೋಜನೆಯಿಂದ ಬಹುಸಂಖ್ಯಾತ ರೈತರ, ಜನರ ಮೇಲೆ ಹೆಚ್ಚಿನ ಹೊರೆಯಾಗುತ್ತಿದ್ದು ಈ ನೀತಿಯನ್ನು ಹಿಮ್ಮೆಟ್ಟಿಸಬೇಕೆಂದರು.

ಅಧ್ಯಕ್ಷತೆಯನ್ನು ಮಹಿಳಾ ಮುಖಂಡೆ ಬಿ.ಎಸ್‌. ಅನುಸೂಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಆರ್‌.ಎಸ್‌. ಚನ್ನಬಸವಣ್ಣ, ರೈತ ಸಂಘದ ಮುಖಂಡರಾದ ತಿಮ್ಲಾಪುರ ದೇವರಾಜು, ಜಯಚಂದ್ರ ಶರ್ಮ, ಸೈಯದ್‌, ಅಲ್ಲಾಭಕ್ಷ, ಸಾದತ್‌, ಭೂಮಿ ಸತೀಶ್‌, ಗುಂಗುರಮಳೆ ಮುರುಳೀಧರ್‌, ಶ್ರೀಕಾಂತ್‌ ಕೆಳಹಟ್ಟಿ, ಕಾಸೀಂ ಷರೀಫ್‌, ಗಾಯತ್ರಿ, ಮಮತಾ, ಪುಷ್ಪ ಮತ್ತಿತರಿದ್ದರು.

Latest Videos
Follow Us:
Download App:
  • android
  • ios