Asianet Suvarna News Asianet Suvarna News

ಕೇಂದ್ರ-ರಾಜ್ಯ ಸರ್ಕಾರ ನಿರ್ಲಕ್ಷ್ಯ ಕೊಬ್ಬರಿ ಬೆಲೆ 8 ಸಾವಿರಕ್ಕೆ ಕುಸಿತ

ಕಲ್ಪತರು ನಾಡಿನ ಕೊಬ್ಬರಿ ಬೆಳೆಗಾರರಿಗೆ ಈ ವರ್ಷ ಮಳೆರಾಯ ಕೃಪೆ ತೋರದ ಕಾರಣ ತೀವ್ರ ಬರಗಾಲ ಆವರಿಸಿದ್ದು, ಇತ್ತ ಬೆಳೆಯೂ ಇಲ್ಲ, ಅತ್ತ ಅಲ್ಪಸ್ವಲ್ಪ ಬೆಳೆದಿರುವ ಕೊಬ್ಬರಿ ಬೆಲೆಯೂ ಪಾತಾಳಕ್ಕೆ ಕುಸಿದು ತೆಂಗು ಬೆಳೆಗಾರರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯದಿಂದ ಕೊಬ್ಬರಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಬೆಳೆಗಾರರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.

Central state government negligence   Coconut price falls to 8 thousand snr
Author
First Published Nov 24, 2023, 7:41 AM IST

ಬಿ. ರಂಗಸ್ವಾಮಿ

ತಿಪಟೂರು:  ಕಲ್ಪತರು ನಾಡಿನ ಕೊಬ್ಬರಿ ಬೆಳೆಗಾರರಿಗೆ ಈ ವರ್ಷ ಮಳೆರಾಯ ಕೃಪೆ ತೋರದ ಕಾರಣ ತೀವ್ರ ಬರಗಾಲ ಆವರಿಸಿದ್ದು, ಇತ್ತ ಬೆಳೆಯೂ ಇಲ್ಲ, ಅತ್ತ ಅಲ್ಪಸ್ವಲ್ಪ ಬೆಳೆದಿರುವ ಕೊಬ್ಬರಿ ಬೆಲೆಯೂ ಪಾತಾಳಕ್ಕೆ ಕುಸಿದು ತೆಂಗು ಬೆಳೆಗಾರರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯದಿಂದ ಕೊಬ್ಬರಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಬೆಳೆಗಾರರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.

ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕೇಂದ್ರ ಸರ್ಕಾರ ರು.11750 ಬೆಂಬಲ ಬೆಲೆ ಘೋಷಿಸಿ ನಫೆಡ್ ಮೂಲಕ ಖರೀದಿಸುತ್ತೇವೆ ಎಂದು ಹೇಳಿದ್ದು, ರಾಜ್ಯ ಸರ್ಕಾರ ಇದಕ್ಕೆ ಪ್ರತಿಯಾಗಿ ನಫೆಡ್ ಮೂಲಕ ಮಾರಾಟ ಮಾಡುವ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ರು. 1250  ಪ್ರೋತ್ಸಾಹ ಬೆಲೆಯನ್ನು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಘೋಷಿಸಿದ್ದು, ಇವೆರಡೂ ಸೇರಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ 13 ಸಾವಿರ ಆಗಿದ್ದರೂ, ಮಾರುಕಟ್ಟೆಯಲ್ಲಿ ರೈತರು ಕೇವಲ ರು. 8000 ಕ್ಕೆ ಒಂದು ಕ್ವಿಂಟಾಲ್ ಕೊಬ್ಬರಿ ಮಾರಾಟ ಮಾಡುವಂತ ದುಃಸ್ಥಿತಿ ಬಂದಿದೆ.

ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ, ಕೇಂದ್ರದ ಬೆಂಬಲ ಬೆಲೆಗಿಂತ ಕಡಿಮೆಯಾದ ತಕ್ಷಣ ಕೇಂದ್ರ ಸರ್ಕಾರ ನಫೆಡ್ ಮೂಲಕ ಖರೀದಿ ಕೇಂದ್ರ ತೆರೆದು ತಾನು ಘೋಷಿಸಿರುವ ಬೆಂಬಲ ಬೆಲೆಗೆ ರೈತರಿಂದ ಕೊಬ್ಬರಿ ಖರೀದಿಸಬೇಕೆಂಬ ನಿಯಮವಿದ್ದರೂ ಖರೀದಿ ಕೇಂದ್ರಗಳನ್ನು ತೆರೆಯುತ್ತಿಲ್ಲ. ಪರಿಣಾಮ ಒಂದು ವರ್ಷದ ಹಿಂದೆ ರು. ೧೮ಸಾವಿರವಿದ್ದ ಕೊಬ್ಬರಿ ಬೆಲೆ ಕೇವಲ ರು. ೮೦೦೦ಕ್ಕೆ ತೀವ್ರ ಕುಸಿತ ಕಂಡು ಬೆಳೆಗಾರರು ಸಂಕಷ್ಟದಲ್ಲಿದ್ದರೂ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸುವ ಪ್ರಕ್ರಿಯೆ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ನಫೆಡ್ ಮೂಲಕ ಕೊಬ್ಬರಿ ಮಾರಾಟ ಮಾಡುವ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ರು.1250  ಪ್ರೋತ್ಸಾಹ ಬೆಲೆ ಘೋಷಿಸಿದ್ದು, ನಫೆಡ್ ಖರೀದಿ ಕೇಂದ್ರಗಳು ಪ್ರಾರಂಭವಾಗದ್ದರಿಂದ ಕೊಬ್ಬರಿ ಬೆಳೆಗಾರರಿಗೆ ತೀವ್ರ ನಷ್ಟವಾಗುತ್ತಿದ್ದರೂ ಸರ್ಕಾರ ಮಾತ್ರ ರೈತರ ನೆರವಿಗೆ ಬರುತ್ತಿಲ್ಲ. ಈ ಬಗ್ಗೆ ರೈತರು, ರೈತ ಹೋರಾಟಗಾರರು ನಫೆಡ್ ಖರೀದಿ ಕೇಂದ್ರ ಪ್ರಾರಂಬಿಸಲು ಹೋರಾಟ, ಒತ್ತಡ ಹಾಕಿದರೂ ಈವರೆಗೂ ಖರೀದಿ ಕೇಂದ್ರಗಳು ಪ್ರಾರಂಭವಾಗಿಲ್ಲ.

ಹಾಗಾಗಿ, ಸರ್ಕಾರಗಳು ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆಂದು ತಾವೇ ಘೋಷಿಸಿರುವ ಯೋಜನೆಗಳು ನೆರವಿಗೆ ಬಾರದಂತಾಗಿದೆ. ಕಲ್ಪತರು ನಾಡಿನಲ್ಲಿ ಕೊಬ್ಬರಿ ಬೆಲೆ ಹಿಂದೆಂದೂ ಕಾಣದಷ್ಟು ಕುಸಿತ ಕಂಡಿದ್ದರೂ ಸರ್ಕಾರಗಳ ಘೋಷಿತ ಬೆಂಬಲ ಬೆಲೆ ಯಾವ ಪ್ರಯೋಜನಕ್ಕೂ ಬಾರದಂತಾಗಿ ಕೊಬ್ಬರಿ ಬೆಳೆಗಾರರ ಜೀವನ ಅತಂತ್ರವಾಗಿದೆ.

ಚುನಾವಣಾ ಪ್ರಚಾರ ಸಭೆಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೀವ್ರ ಕುಸಿತ ಕಂಡಿದ್ದ ಕೊಬ್ಬರಿ ಬೆಲೆಯನ್ನೇ ಮತ ಸೆಳೆಯುವ ಬಂಡವಾಳ ಮಾಡಿಕೊಂಡು ತಿಪಟೂರು ಸೇರಿದಂತೆ ಕೊಬ್ಬರಿ ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಕೊಬ್ಬರಿ ಬೆಲೆ ಯಾವಾಗಲೂ ರು. ೧೫ಸಾವಿರ ಇರುವಂತೆ ಮಾಡುತ್ತೇವೆಂದು ಸಂಕಷ್ಟದಲ್ಲಿದ್ದ ಬೆಳೆಗಾರರಿಗೆ ಗ್ಯಾರಂಟಿ ನೀಡಿ ಅವರಿಂದ ಮತಗಿಟ್ಟಿಸಿಕೊಂಡು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರೂ ಕೊಬ್ಬರಿ ಬೆಲೆ ಮಾತ್ರ ಹೆಚ್ಚಿಸದೆ ನಂಬಿಕೆ ದ್ರೋಹ ಎಸಗಲಾಗಿದೆ.

- ತಡಸೂರು ಗುರುಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ, ತಿಪಟೂರು.

ಕೇಂದ್ರ ಸರ್ಕಾರ 11750  ರು. ಬೆಂಬಲ ನೀಡಿ ನಫೆಡ್ ಮೂಲಕ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸದ ಹಿನ್ನೆಲೆ ಕೊಬ್ಬರಿ ಬೆಲೆ ಮತ್ತಷ್ಟು ಪಾತಾಳಕ್ಕೆ ಇಳಿದಿದೆ. ಆಗಸ್ಟ್‌ನಿಂದ ನವೆಂಬರ್ ಕೊನೆಯ ತನಕ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದು. ಹಲವಾರು ವರ್ಷಗಳಿಂದ ಇದ್ದರೂ, ಈ ಬಾರಿ ಮಾತ್ರ ಬೆಲೆ ತೀವ್ರ ಕುಸಿತವಾಯಿತು. ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂದು ಹೇಳಿಕೊಳ್ಳುವ ಕೇಂದ್ರ ಸರ್ಕಾರ ತಾನೇ ಘೋಷಿಸಿರುವ ಬೆಂಬಲ ಬೆಲೆಗೂ ಕೊಬ್ಬರಿ ಖರೀದಿ ಮಾಡದಿರುವುದು ಕೊಬ್ಬರಿ ಬೆಳೆಗಾರರಿಗೆ ಮಾಡುತ್ತಿರುವ ಮೋಸವಾಗಿದೆ. ಸಂಸತ್ ಸದಸ್ಯರು ಈ ಬಗ್ಗೆ ಕೂಡಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸುವಂತೆ ನೋಡಿಕೊಳ್ಳಬೇಕಿದೆ.

-ಲೋಕೇಶ್ವರ, ಕಾಂಗ್ರೆಸ್ ಮುಖಂಡ, ತಿಪಟೂರು.

ತೋಟಗಾರಿಕೆ ಇಲಾಖೆಯೇ ಸ್ಪಷ್ಟಪಡಿಸಿರುವಂತೆ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ರು. 16500 ಖರ್ಚು ಬರುತ್ತದೆ. ಆದರೆ, ಹಾಲಿ ಕೊಬ್ಬರಿ ಬೆಲೆ ೮ ಸಾವಿರದಲ್ಲಿಯೇ ಗಿರಕಿ ಹೊಡೆಯುತ್ತಿದೆ. ನಾವು ಕೊಬ್ಬರಿಯಿಂದಲೇ ಜೀವನ ಕಟ್ಟಿಕೊಂಡಿದ್ದು, ತೆಂಗಿನ ಮರಗಳು ಹತ್ತಾರು ರೋಗಗಳಿಂದ ನರಳುತ್ತಿವೆಯಲ್ಲದೆ ಕೊಬ್ಬರಿ ಇಳುವರಿ ಹಾಗೂ ಬೆಲೆ ಎರಡೂ ಕುಸಿದಿದ್ದು, ದೈನಂದಿನ ಖರ್ಚುಗಳು ದುಬಾರಿಯಾಗಿದ್ದರೂ ಸರ್ಕಾರಗಳು ಯಾವ ನೆರವಿಗೂ ಬಾರದಿರುವುದರಿಂದ ಬೆಳೆಗಾರರಿಗೆ ಆತ್ಮಹತ್ಯೆಯೊಂದೇ ದಾರಿಯಾಗಿದೆ

-ಕೆ.ಎಂ. ಪರಮೇಶ್ವರಯ್ಯ, ಕೊಬ್ಬರಿ ಬೆಳೆಗಾರರು, ತಿಪಟೂರು.

Follow Us:
Download App:
  • android
  • ios