ಹುಬ್ಬಳ್ಳಿ(ಜ.19): ಉತ್ತರ ಕರ್ನಾಟಕದ ಬಹುಬೇಡಿಕೆಯಾಗಿದ್ದ ಮಹದಾಯಿ ವಿಷಯವನ್ನೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಮ್ಮ ಭಾಷಣದಲ್ಲೇ ಪ್ರಸ್ತಾಪಿಸಲೇ ಇಲ್ಲ. ಮಹದಾಯಿ ಬಗ್ಗೆ ಪ್ರಸ್ತಾಪಿಸುತ್ತಾರೆ ಎಂಬ ನಿರೀಕ್ಷೆಯಿಟ್ಟುಕೊಂಡಿದ್ದ ರೈತರಿಗೆ ಹೋರಾಟಗಾರರಿಗೆ ಇದು ನಿರಾಶೆಯನ್ನುಂಟು ಮಾಡಿತ್ತು. ಆದರೆ ಹೋಟೆಲ್‌ನಲ್ಲಿ ಮಾತ್ರ ಹೋರಾಟಗಾರರನ್ನು ಭೇಟಿಯಾಗಿ ಕೆಲ ನಿಮಿಷ ಚರ್ಚೆ ನಡೆಸಿದರು. ಈ ಮೂಲಕ ಹೋರಾಟಗಾರರನ್ನು ಸಮಾಧಾನ ಪಡಿಸಲು ಶಾ ಯತ್ನಿಸಿದಂತಾಯಿತು.

ಮಹದಾಯಿ ವಿಷಯವಾಗಿ ದಶಕಗಳಿಂದ ಹೋರಾಟ ನಡೆಯುತ್ತಿದೆ. ಕಳೆದ ನಾಲ್ಕು ವರ್ಷಗಳಿಂದಂತೂ ನಿರಂತರ ಧರಣಿ ನಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಬಗೆಹರಿಸುವುದಾಗಿ ಶಾ ಭರವಸೆ ನೀಡಿದ್ದರು. ಅದರಂತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ಶಾ ಬಂದಿದ್ದರು. ಹೀಗಾಗಿ ರಾರ‍ಯಲಿಯಲ್ಲಿ ಸಿಎಎ ಪರ ಮಾತನಾಡುವುದರ ಜೊತೆಗೆ ಮಹದಾಯಿ ವಿಷಯವಾಗಿ ಪ್ರಸ್ತಾಪಿಸುತ್ತಾರೆ ಎಂಬ ನಿರೀಕ್ಷೆ ರೈತರದ್ದಾಗಿತ್ತು. ಆದರೆ ಭಾಷಣದಲ್ಲೆಲ್ಲೂ ಮಹದಾಯಿ ಬಗ್ಗೆ ಚಕಾರವನ್ನೇ ಎತ್ತಲಿಲ್ಲ.

ಹೋಟೆಲ್‌ನಲ್ಲಿ ಭೇಟಿ:

ಈ ನಡುವೆ ಡೆನಿಸನ್‌ ಹೋಟೆಲ್‌ನಲ್ಲಿ ಮಾತ್ರ ಅಮಿತ್‌ ಶಾ ಹೋರಾಟಗಾರರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟರು. ಕಾರ್ಯಕ್ರಮ ಮುಗಿಸಿಕೊಂಡು ಹೋಟೆಲ್‌ಗೆ ತೆರಳಿದ ಅಮಿತ್‌ ಶಾ ಅವರನ್ನು ಭೇಟಿಯಾಗಲು ಮಹದಾಯಿ ಹೋರಾಟಗಾರರು ಹೋಟೆಲ್‌ ಹೊರಗೆ ಕಾಯುತ್ತಾ ಕುಳಿತ್ತಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೋರಾಟಗಾರರನ್ನು ನೋಡಿ ಒಳಗೆ ಕರೆದುಕೊಂಡು ಹೋದರು ಅಲ್ಲದೇ, ಹೋಟೆಲ್‌ನ ಲಾಂಜ್‌ನಲ್ಲಿ ಶಾ ಅವರನ್ನು ಭೇಟಿ ಮಾಡಿಸಿದರು. ಈ ವೇಳೆ ಹೋರಾಟಗಾರರು ಹಸಿರು ಟಾವೆಲ್‌ ಹಾಕಿ ಶಾ ಅವರನ್ನು ಸನ್ಮಾನಿಸಿದರು ಅಲ್ಲದೇ, ಮಹದಾಯಿ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ನ್ಯಾಯಾಧಿಕರಣ ತೀರ್ಪು ನೀಡಿ ಒಂದೂವರೆ ವರ್ಷವಾಗಿದೆ. ಆದರೂ ಈವರೆಗೂ ಕೇಂದ್ರ ಸರ್ಕಾರ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಅಧಿಸೂಚನೆ ಹೊರಡಿಸಿದರೆ ಇಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬಹುದು. ಆದಕಾರಣ ಆದಷ್ಟು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಅಮಿತ್‌ ಶಾ ಹೋರಾಟಗಾರರೊಂದಿಗೆ ಕೆಲ ನಿಮಿಷ ಚರ್ಚಿಸಿದರು.

ಈ ವೇಳೆ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಮಠ, ಶಾಸಕ ಮುರುಗೇಶ ನಿರಾಣಿ, ರೈತ ಹೋರಾಟಗಾರರಾದ ಸುಭಾಸಗೌಡ ಪಾಟೀಲ ಸೇರಿದಂತೆ ಹಲವರಿದ್ದರು. ಮಹದಾಯಿ ವಿಷಯವಾಗಿ ಇದೇ ಮೊದಲ ಬಾರಿಗೆ ಅಮಿತ್‌ ಶಾ ಅವರನ್ನು ನೇರವಾಗಿ ಭೇಟಿಯಾಗಿ ಮನವಿ ಕೊಟ್ಟಿದ್ದು.