ಬಳ್ಳಾರಿ(ಏ.29): ಒಂದು ನೂರು ಅಥವಾ ಅದಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಾರ್ಖಾನೆ ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಪಿಎಫ್‌ ವಂತಿಗೆಯನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿಯ ಪ್ರಾದೇಶಿಕ ಕಚೇರಿಯ ಸಹಾಯಕ ಆಯುಕ್ತ ಸಂದೀಪ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೇ. 90ರಷ್ಟು ಉದ್ಯೋಗಿಗಳ ತಿಂಗಳ ವೇತನ 15 ಸಾವಿರಗಿಂತ ಕಡಿಮೆ ಇರಬೇಕು. ಶೇ. 100 ಉದ್ಯೋಗಿಗಳ ಕೆ.ವೈ.ಸಿ ಮತ್ತು ಉದ್ಯೋಗದಾತರ ಪೂರ್ಣ ಮಾಹಿತಿ ಎಲೆಕ್ಟ್ರಾನಿಕ್‌ ಮುಖಾಂತರ (ಫಾರ್ಮ್‌-5ಎ) ನಮೂದಿಸಿರಬೇಕು. ಇಂತಹ ಉದ್ಯೋಗಿಗಳ ವೇತನ ಶೇ. 24ರಷ್ಟು ಪಿಎಫ್‌  ವಂತಿಗೆಯನ್ನು ಕೇಂದ್ರ ಸರ್ಕಾರ ಮೂರು ತಿಂಗಳವರೆಗೆ ಪಾವತಿಸಲಿದೆ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಮಾನವೀಯ ಮನಸ್ಸುಗಳಿಂದ ಹರಿದು ಬರುತ್ತಿದೆ ನೆರ​ವು

ಪರಿಹಾರ ಪ್ರಕ್ರಿಯೆ ಮತ್ತು ಕಾರ್ಯ ವಿಧಾನಗಳನ್ನು ಒಳಗೊಂಡ ತಂತ್ರಾಂಶವನ್ನು ಇಪಿಎಫ್‌ಒ (ಎಲೆಕ್ಟ್ರಾನಿಕ್‌ ಚಲನ್‌-ಕಮ್‌-ರಿಟರ್ನ್‌(ಇಸಿಆರ್‌)) ವ್ಯವಸ್ಥೆ ಜಾರಿಗೊಳಿಸಿದೆ. ಈ ವ್ಯವಸ್ಥೆಯು ಸಂಬಂಧಪಟ್ಟ ಕಾರ್ಖಾನೆಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಪರಿಹಾರವನ್ನು ಪಡೆಯಲು ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಇಪಿಎಫ್‌ಒ ಕೋವಿಡ್‌-19 ಟ್ಯಾಬ್‌ನಲ್ಲಿ ವೀಕ್ಷಿಸಬಹುದು.

ಈಗಾಗಲೇ ಭವಿಷ್ಯನಿಧಿ ಕಚೇರಿಯ ಮುಖಾಂತರ ಅರ್ಹ ಉದ್ಯೋಗದಾತರಿಗೆ ಇ-ಮೇಲ್‌ ಮೂಲಕ ಸಂದೇಶವನ್ನು ರವಾನಿಸಲಾಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿಗೆ ಭವಿಷ್ಯನಿಧಿಯ ಬಳ್ಳಾರಿ ಕಾರ್ಯಾಲಯದ ದೂ.ಸಂ.08392-266304/268943ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.