ಉಡುಪಿ (ಮಾ.08):  ಮಾಜಿ ಸಚಿವರ ಸಿ.ಡಿ. ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದ 6 ಜನ ಸಚಿವರು ತಮ್ಮ ಅಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರ್ಟ್‌ ಮೊರೆ ಹೋಗಿರುವುದರಿಂದ, ಅವರೂ ಅಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರಾ ಎಂದು ಅವರ ಬಗ್ಗೆ ರಾಜ್ಯದ ಜನತೆಗೆ ಸಂಶಯ ಬರುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಹೇಳಿದ್ದಾರೆ.

ಭಾನುವಾರ ಉಡುಪಿ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಚಿವರು ಈ ನಡವಳಿಕೆಯಿಂದ ರಾಜ್ಯದ ಜನ ತಲೆತಗ್ಗಿಸುವಂತಾಗಿದೆ ಎಂದರು.

ಕುಂಬಳಕಾಯಿ ಕಳ್ಳ ಅಂದ್ರೆ ಅವರು ಯಾಕೆ ಹೆಗಲು ಮುಚ್ಚಿಕೊಂಡು ನೋಡಬೇಕು?, ಬಿಜೆಪಿಯನ್ನು ಪಾರ್ಟಿ ವಿದ್‌ ಡಿಫರೆಸ್ಸ್‌ ಅಂದರೇ ಇದೇನಾ? ತಮ್ಮನ್ನು ರಾಮಭಕ್ತರು ಎನ್ನುತ್ತಾರೆ, ರಾಮಭಕ್ತರು ಮಾಡುವ ಕೆಲಸವೇ ಇದು? ಬಸವಣ್ಣ, ಕುವೆಂಪು ಹುಟ್ಟಿದ ನಾಡಿನಲ್ಲಿ ಇಂತಹವರೂ ಹುಟ್ಟಿದ್ದು ನಾಚಿಕೆಗೇಡು ಎಂದರು.

ಕಾಂಗ್ರೆಸ್‌ ಷಡ್ಯಂತ್ರ ಅಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಸಿಡಿ ಸ್ಫೋಟದ ಹಿಂದೆ ಕಾಂಗ್ರೆಸ್‌ನ ಷಡ್ಯಂತ್ರ ಇಲ್ಲ, ಕಾಂಗ್ರೆಸ್‌ ಅಂತಹ ಕೆಲಸವನ್ನು ಎಂದೂ ಮಾಡಿಲ್ಲ, ಕಾಂಗ್ರೆಸ್‌ಗೆ ಅಭಿವೃದ್ಧಿ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದರು.

ರಾಸಲೀಲೆ ಪ್ರಕರಣ: ರಮೇಶ್‌ ಜಾರಕಿಹೊಳಿ ವಿರುದ್ಧ FIR? ..

25 ಸಂಸದರೂ ವಿಫಲ: ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದೂ ರಾಜ್ಯಕ್ಕೆ ಪ್ರವಾಹ ಪರಿಹಾರ ತರುವಲ್ಲಿ ಸೋತಿದ್ದಾರೆ, ಮುಂದೆ ಚುನಾವಣೆಗಳಾಗುವ ಕೇರಳ, ಪ.ಬಂಗಾಳ, ತಮಿಳುನಾಡಿಗೆ ಕೇಂದ್ರ ಸರ್ಕಾರ ಸಾವಿರ ಕೋಟಿಗಳಲ್ಲಿ ಅನುದಾನ ನೀಡಿದೆ. ಕರ್ನಾಟಕ್ಕೆ ಯಾಕೆ ನೀಡುವುದಿಲ್ಲ ಎಂದು ಕೇಳುವುದಕ್ಕೆ ಈ ಸಂಸದರು ಮಾತು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಉಡುಪಿ, ದ.ಕ.ದಂತಹ ಪ್ರಗತಿಪರ ವಿದ್ಯಾವಂತರ ಜಿಲ್ಲೆಗಳ ಜನರೂ ಇನ್ನೂ ಯಾಕೆ ಕೋಮುವಾದಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದರು.

ವರ್ಷವಿಡೀ ಹೋರಾಟ: ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಸೂಚನೆಯಂತೆ ರಾಜ್ಯದಲ್ಲಿ ವರ್ಷವಿಡೀ ಬಿಜೆಪಿ ಸರ್ಕಾರಗಳ ವೈಫಲ್ಯದ ವಿರುದ್ಧ ಹೋರಾಟ ನಡೆಸುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಲಾಗುತ್ತದೆ. ಮುಂದಿನ 15 ದಿನಗಳಲ್ಲಿ ಪಕ್ಷದ ಬೂತ್‌ ಸಮಿತಿ, ಗ್ರಾಮ ಸಮಿತಿಗಳನ್ನು ರಚಿಸಿ, ವಿಧಾನಸಭಾ, ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಜಿಲ್ಲಾದ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ನಾಯಕರಾದ ಎಂ.ಎ. ಗಫäರ್‌ ಮುಂತಾದವರಿದ್ದರು.