ಬೆಂಗಳೂರು(ನ.19): ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಗುರುತು ಸಿಗದಂತೆ ಮಾಜಿ ಮೇಯರ್‌ ಸಂಪತ್‌ ರಾಜ್‌ ಮಾರುವೇಷದಲ್ಲಿ ಓಡಾಡಿದ್ದರು ಎಂಬ ಸಂಗತಿ ಸಿಸಿಬಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕನ್ನಿಂಗ್‌ ಹ್ಯಾಮ್‌ ರಸ್ತೆಯ ಬ್ಯಾಪಿಸ್ಟ್‌ ಆಸ್ಪತ್ರೆಯಿಂದ ರಾತ್ರೋರಾತ್ರಿ ತಪ್ಪಿಸಿಕೊಂಡ ಸಂಪತ್‌ ರಾಜ್‌, ಬಳಿಕ ತನ್ನ ಸ್ನೇಹಿತ ರಿಯಾಜ್‌ವುದ್ದೀನ್‌ ಕಾರಿನಲ್ಲಿ ನಾಗರಹೊಳೆ ತಲುಪಿದ್ದರು. ಬಳಿಕ ಅಲ್ಲಿ ತಮ್ಮ ಪರಿಚಿತರ ಸಹಕಾರದಲ್ಲಿ ಎರಡು ವಾರಗಳು ಆಶ್ರಯ ಪಡೆದಿದ್ದ ಮಾಜಿ ಮೇಯರ್‌, ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಎರಡು ದಿನಕ್ಕೊಮ್ಮೆ ವಾಸ ಸ್ಥಳ ಬದಲಾಯಿಸುತ್ತಿದ್ದರು. ಆಗ ಕೆಲವು ಬಾರಿ ಬಸ್ಸಿನಲ್ಲಿ ಸಹ ಅವರು ಪ್ರಯಾಣಿಸಿದ್ದರು. ಈ ವೇಳೆ ತಮ್ಮ ಚಹರೆ ಪತ್ತೆಯಾಗದಂತೆ ಸಾಧಾರಣ ಉಡುಪು ಧರಿಸಿ ಅವರು ಸಂಚರಿಸಿದ್ದರು ಎಂದು ತಿಳಿದು ಬಂದಿದೆ.

ಹದಿನೈದು ದಿನಗಳು ನಾಗರಹೊಳೆ ಸರಹದ್ದಿನಲ್ಲಿ ತಲೆಮರೆಸಿಕೊಂಡಿದ್ದ ಅವರು, ಕೊನೆಗೆ ನಗರಕ್ಕೆ ಮರಳಿದ್ದರು. ಬಳಿಕ ಬೆನ್ಸನ್‌ಟೌನ್‌ನಲ್ಲಿರುವ ತಮ್ಮ ಗೆಳೆಯನ ಮನೆಯಲ್ಲಿ ಅವಿತುಕೊಂಡಿದ್ದ ಅವರು, ಅಲ್ಲಿಗೆ ವಕೀಲರನ್ನು ಕರೆಸಿಕೊಂಡು ಜಾಮೀನು ಕುರಿತು ಸಮಾಲೋಚಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ, ಕೂಡಲೇ ದಾಳಿ ನಡೆಸಿ ಮಾಜಿ ಮೇಯರ್‌ನನ್ನು ಬಂಧಿಸಿದೆ ಎಂದು ಮೂಲಗಳು ಹೇಳಿವೆ.

ಸಂಪತ್ ರಾಜ್‌ ಬಂಧನದಿಂದ ಪಿತೂರಿ ಮಾಡಿದವರ ಇನ್ನಷ್ಟು ಸಾಕ್ಷಿ ಸಿಗಲಿದೆ: ಬೊಮ್ಮಾಯಿ

ಮಾಜಿ ಮೇಯರ್‌ ವಿಚಾರಣೆ

ಇನ್ನು ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಮಾಜಿ ಮೇಯರ್‌ ಸಂಪತ್‌ ರಾಜ್‌ ಅವರನ್ನು ಎರಡನೇ ದಿನವು ಸಿಸಿಬಿ ವಿಚಾರಣೆ ಮುಂದುವರೆಸಿದೆ. ಮಡಿವಾಳ ವಿಚಾರಣಾ ಕೇಂದ್ರದಲ್ಲಿ ಕೆಲ ಗಂಟೆಗಳು ಪ್ರಶ್ನಿಸಿ ತನಿಖಾಧಿಕಾರಿ ಎಸಿಪಿ ವೇಣುಗೋಪಾಲ್‌ ಹೇಳಿಕೆ ದಾಖಲಿಸಿದ್ದರು. ಬಳಿಕ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆ ತಂದರು. ಅಲ್ಲಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಹಾಗೂ ಡಿಸಿಪಿ ಕೆ.ಪಿ.ರವಿಕುಮಾರ್‌ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ನಾನು ಬೆಂಕಿ ಹಾಕಿಸಿಲ್ಲ-ಸಂಪತ್‌ ರಾಜ್‌

ಶಾಸಕರ ಮನೆಗೆ ಬೆಂಕಿ ಹಾಕಿಸುವ ಕೃತ್ಯ ಮಾಡಿಲ್ಲ. ಗಲಭೆ ಕೂಡಾ ಪ್ರಚೋದನೆ ನೀಡಿಲ್ಲ ಎಂದು ವಿಚಾರಣೆ ವೇಳೆ ಸಂಪತ್‌ರಾಜ್‌ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ ಪಕ್ಷದಲ್ಲಿದ್ದ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್‌ ಸೇರಿದ್ದರು. ಬಳಿಕ ಅವರೊಂದಿಗೆ ಸ್ನೇಹ-ಬಾಂಧವ್ಯದಿಂದ ನಡೆದುಕೊಂಡಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರ ಪರವಾಗಿ ಕೆಲಸ ಮಾಡಿದ್ದೇನೆ. ರಾಜಕೀಯ ದ್ವೇಷಕ್ಕೆ ನನ್ನ ವಿರುದ್ಧ ಶಾಸಕರು ಆರೋಪ ಮಾಡುತ್ತಿದ್ದಾರೆ ಎಂದು ಸಂಪತ್‌ ಹೇಳಿರುವುದಾಗಿ ತಿಳಿದು ಬಂದಿದೆ.

ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು; ಸಂಪತ್‌ರಾಜ್ ಬಂಧನಕ್ಕೆ ಅಖಂಡ ಪ್ರತಿಕ್ರಿಯೆ

ಆ.11 ರಂದು ರಾತ್ರಿ ಕಾವಲ್‌ಬೈರಸಂದ್ರ ಬಳಿ ಶಾಸಕರ ಸಂಬಂಧಿ ವಿರುದ್ಧ ಮುಸ್ಲಿಂ ಸಮುದಾಯದವರು ಗಲಾಟೆ ಮಾಡುತ್ತಿರುವ ವಿಚಾರ ತಿಳಿಯಿತು. ಆ ಬಗ್ಗೆ ವಿಚಾರಿಸಲು ನನ್ನ ಆಪ್ತ ಸಹಾಯಕ ಅರುಣ್‌ ಕುಮಾರ್‌ ಹಾಗೂ ಸಂತೋಷ್‌ ಜತೆ ಮಾತನಾಡಿದೆ. ಬಳಿಕ ಕೆಲವು ಮುಸ್ಲಿಂ ಮುಖಂಡರಿಗೂ ಕರೆ ಮಾಡಿ ವಿಚಾರಿಸಿದೆ. ಆದರೆ ನಾನು ಗಲಭೆಗೆ ಪ್ರಚೋದನೆ ನೀಡಿದ್ದೇನೆ ಎಂಬುದು ಸುಳ್ಳು ಎಂದು ಮಾಜಿ ಮೇಯರ್‌ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಜಾಕೀರ್‌ಗೆ ಹುಡುಕಾಟ

ಮಾಜಿ ಮೇಯರ್‌ ಬಂಧನ ಬೆನ್ನೆಲ್ಲೇ ತಲೆಮರೆಸಿಕೊಂಡಿರುವ ಮಾಜಿ ಕಾರ್ಪೋರೇಟರ್‌ ಅಬ್ದುಲ್‌ ಜಾಕಿಬ್‌ ಜಾಕೀರ್‌ ಪತ್ತೆಗೆ ಸಿಸಿಬಿ ಕಾರ್ಯಾಚರಣೆ ಚುರುಕುಗೊಳಿಸಿದೆ. ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಜತೆ ಸೇರಿ ಸಂಚು ರೂಪಿಸಿದ ಆರೋಪ ಜಾಕೀರ್‌ ವಿರುದ್ಧ ಕೇಳಿ ಬಂದಿದೆ.