ಬೆಂಗಳೂರು[ಮಾ.05] ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ,  50 ಲಕ್ಷ ರೂ. ಗೆಬೇಡಿಕೆ ಇಟ್ಟಿದ್ದ ಆರೋಪದಡಿ ‘ಫೋಕಸ್‌’ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹೇಮಂತ್‌ಕುಮಾರ್ ಕಮ್ಮಾರ (40) ಅವರನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಶಾಸಕರ ಆಪ್ತ ಸಹಾಯಕ ಗಿರೀಶ್ ಭಾರದ್ವಾಜ್ ಅವರು ವೈಟ್‌ಫೀಲ್ಡ್‌ ಠಾಣೆಗೆ ನೀಡಿದ್ದ ದೂರಿನಡಿ ಆರೋಪಿಯನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರಲಾಗುವುದು’ ಎಂದು ಸಿಸಿಬಿಯ ಡಿಸಿಪಿ ಎಸ್‌.ಗಿರೀಶ್ ತಿಳಿಸಿದ್ದಾರೆ. 

ಯಸ್, ನಮ್ಮೊಳಗೊಬ್ಬ ಕಳ್ಳನಿದ್ದ: ಮುಲಾಜಿಲ್ಲದೆ ಹೊರದಬ್ಬಿದ್ದೇವೆ

ವಿಡಿಯೊ ಇರುವುದಾಗಿ ಹೇಳಿ ಶಾಸಕರಿಗೆ ಬೆದರಿಸುತ್ತಿದ್ದ ಆರೋಪಿ, ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ. ಆತನ ಮನೆ ಹಾಗೂ ಕಚೇರಿ ಮೇಲೆಯೂ ದಾಳಿ ನಡೆಸಲಾಗಿದೆ. ಲ್ಯಾಪ್‌ಟಾಪ್, ಸಿ.ಡಿ ಹಾಗೂ ಹಲವು ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.

ಈ ಬ್ಲಾಕ್ ಮೇಲ್ ಪ್ರಕರಣವನ್ನು ವೈಟ್​ ಫಿಲ್ಡ್​ ಪೊಲೀಸರು ಸಿಸಿಬಿಗೆ ವರ್ಗಾಯಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಡಿಸಿಪಿ ಎಸ್ ಗಿರೀಶ್​​ ನೇತೃತ್ವದಲ್ಲಿ ದಾಳಿ ನಡೆಸಿ, ಪೋಕಸ್​ ಕಚೇರಿಯಲ್ಲೇ ಹೇಮಂತ್  ಅವರನ್ನು ಬಂಧಿಸಿದ್ದಾರೆ. ಆತನ ಕಚೇರಿಯಲ್ಲಿ ಮಾರ್ಫಿಂಗ್​ ಬಳಸಿ ಸಿದ್ಧಪಡಿಸಲಾದ ಹಲವು ರಾಜಕಾರಣಿಗಳ ಫೋಟೊಗಳು, ನಕಲಿ ಸಿಡಿಗಳು ದಾಳಿ ವೇಳೆ ಪತ್ತೆಯಾಗಿವೆ ಎನ್ನಲಾಗಿದೆ.