ಬೆಂಗಳೂರು [ಜು.27] :  ಉದ್ಯೋಗದ ಆಮಿಷವೊಡ್ಡಿ ಹೊರರಾಜ್ಯದ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಡ್ಯಾನ್ಸ್‌ಬಾರ್‌ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 104 ಯುವತಿಯರನ್ನು ರಕ್ಷಿಸಿ, 52 ಮಂದಿಯನ್ನು ಬಂಧಿಸಿದ್ದಾರೆ.

ಪುರಭವನದ ನರಸಿಂಹರಾಜ ರಸ್ತೆಯಲ್ಲಿರುವ ‘ಲವರ್ಸ್‌ ನೈಟ್‌’ ಡ್ಯಾನ್ಸ್‌ ಬಾರ್‌ ಹಾಗೂ ಅಶೋಕನಗರದ ರೆಸಿಡೆನ್ಸಿ ರಸ್ತೆಯ ‘ಪೇಜ್‌ 3’ ಡ್ಯಾನ್ಸ್‌ ಬಾರ್‌ನಲ್ಲಿ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು.

ಗುರುವಾರ ರಾತ್ರಿ 11ಕ್ಕೆ ಎರಡು ಬಾರ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಬಾರ್‌ನ ವ್ಯವಸ್ಥಾಪಕ, ಕ್ಯಾಶಿಯರ್‌ ಸೇರಿ ಕೃತ್ಯದಲ್ಲಿ ತೊಡಗಿದ್ದ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ. .2.11 ಲಕ್ಷ ನಗದು, ಹಣ ಎಣಿಕೆ ಯಂತ್ರ ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಸಿಲುಕಿದ್ದ 104 ಯುವತಿಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಹೊರ ರಾಜ್ಯದ ಯುವತಿಯರಿಗೆ ಕೆಲಸದ ಆಮಿಷವೊಡ್ಡಿ ನಗರಕ್ಕೆ ಕರೆಸಿ ಅಕ್ರಮವಾಗಿ ಕೂಡಿ ಹಾಕಿ ಬಾರ್‌ನಲ್ಲಿ ಅಶ್ಲೀಲ ನೃತ್ಯ ಮಾಡಿಸುತ್ತಿದ್ದರು. ಈ ವೇಳೆ ಗ್ರಾಹಕರು ಪ್ರಚೋದನೆಯಿಂದ ಯುವತಿಯರ ಮೇಲೆ ಹಣ ಎಸೆದು ಅಸಭ್ಯವಾಗಿ ವರ್ತಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.