ಬೆಂಗಳೂರು [ಡಿ.11]:  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 400 ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಲೇಔಟ್‌ನಲ್ಲಿ ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ನಂಬಿಸಿ ಜನರಿಗೆ ಟೋಪಿ ಹಾಕುತ್ತಿದ್ದ ಚಾಲಾಕಿ ವಂಚಕ ತಂಡದ ಸದಸ್ಯನೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

ನಾಗರಬಾವಿಯ ನಿವಾಸಿ ಮಧು ಬಂಧಿತನಾಗಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಧು ಸ್ನೇಹಿತ ಆಕಾಶ್‌, ಯಶಸ್‌ ಹಾಗೂ ಕುಮಾರ್‌ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರ ಕಡಿಮೆ ಬೆಲೆಗೆ ನಿವೇಶನ ಮಾರಾಟ ಮಾಡುವುದಾಗಿ ನಂಬಿಸಿ ಜನರಿಗೆ ಆಕಾಶ್‌ ತಂಡವು ವಂಚಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣವೇ ಕೃಷ್ಣಾನಂದ ನಗರದಲ್ಲಿದ್ದ ಆರೋಪಿಗಳ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದಾಗ ವಂಚನೆ ಕೃತ್ಯವು ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಆಕಾಶ್‌, ಮಧು, ಕುಮಾರ್‌ ಹಾಗೂ ಯಶಸ್‌ ಸ್ನೇಹಿತರಾಗಿದ್ದು, ಪಾಲುದಾರಿಕೆಯಲ್ಲಿ ಅವರು ರಿಯಲ್‌ ಎಸ್ಟೇಟ್‌ ನಡೆಸುತ್ತಿದ್ದರು. ಸುಲಭವಾಗಿ ಹಣ ಸಂಪಾದನೆಗೆ ಯೋಜಿಸಿದ ಆರೋಪಿಗಳು, ‘ಗರುಡಾದ್ರಿ ಇನ್‌ಫ್ರಾ ಪ್ರಾಜೆಕ್ಟ್’ ಹೆಸರಿನಲ್ಲಿ ಜನರಿಗೆ ಟೋಪಿ ಹಾಕಲು ಸಂಚು ರೂಪಿಸಿದ್ದರು. ಅದರಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 30-40 ಕಿ.ಮೀ ಅಂತರದ ಚಿಕ್ಕಬಳ್ಳಾಪುರ ತಾಲೂಕು ಹಾಗೂ ಆಂಧ್ರಪ್ರದೇಶದ ಪೆನುಕೊಂಡದಲ್ಲಿ 400 ಎಕರೆ ಭೂಮಿ ಖರೀದಿಸಿರುವುದಾಗಿ ಆಕಾಶ್‌ ತಂಡವು ಸಾರ್ವಜನಿಕವಾಗಿ ಪ್ರಚಾರ ನಡೆಸಿತು.

ವಾಸ್ತವದಲ್ಲಿ ಚಿಕ್ಕಬಳ್ಳಾಪುರ ಹಾಗೂ ಆಂಧ್ರಪ್ರದೇಶದಲ್ಲಿ ಆರೋಪಿಗಳು ಕಿಂಚಿತ್ತೂ ಭೂಮಿ ಖರೀದಿಸಿರಲಿಲ್ಲ. ರಸ್ತೆ ಪಕ್ಕದ ಯಾರದ್ದೋ ಜಮೀನಿನಲ್ಲಿ ಬೋರ್ಡ್‌ ನೆಟ್ಟು ತಮ್ಮದೇ ಭೂಮಿ ಎಂದು ಬಿಂಬಿಸಿದ್ದ ಆಕಾಶ್‌ ತಂಡವು, ಜಾಹೀರಾತು ನೋಡಿ ನಿವೇಶನ ಖರೀದಿಗೆ ಆಸಕ್ತಿ ತೋರಿಸಿದ ಜನರನ್ನು ಚಾಲಾಕಿ ಮಾತುಗಾರಿಕೆ ಮೂಲಕ ತಮ್ಮ ಬಲೆಗೆ ಬೀಳಿಸುತ್ತಿದ್ದರು. ಹೀಗೆ ಮರುಳಾದ ಗ್ರಾಹಕರನ್ನು ಕಾರು ಹಾಗೂ ಟಿಟಿ ವಾಹನದಲ್ಲಿ ಲೇಔಟ್‌ ವೀಕ್ಷಣೆಗೂ ಕರೆದೊಯ್ದು ಅವರು, ಅಲ್ಲಿ ಯಾರದ್ದೋ ಜಮೀನು ತೋರಿಸಿ ಕರೆತರುತ್ತಿದ್ದರು. ಈ ಮಾತು ನಂಬಿದ ಸುಮಾರು 30 ರಿಂದ 40ಕ್ಕೂ ಹೆಚ್ಚು ಜನರು, ಆರೋಪಿಗಳಿಗೆ ನಿವೇಶನ ಖರೀದಿ ಸಂಬಂಧ ಮುಂಗಡ ಹಣ ಪಾವತಿಸಿದ್ದರು. ಈ ರೀತಿ .50 ಲಕ್ಷದಿಂದ 60 ಲಕ್ಷ ಹಣವನ್ನು ಸಂಗ್ರಹಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೂರು ತಿಂಗಳಿಂದ ಆಕಾಶ್‌ ತಂಡವು ಮೋಸದ ಕೃತ್ಯದಲ್ಲಿ ತೊಡಗಿತ್ತು. ಇತ್ತೀಚೆಗೆ ಆಕಾಶ್‌ ಭೂ ವ್ಯವಹಾರದ ಬಗ್ಗೆ ಶಂಕೆಗೊಂಡ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಸಿಬಿ ಇನ್‌ಸ್ಪೆಕ್ಟರ್‌ ಕೇಶವಮೂರ್ತಿ ನೇತೃತ್ವದ ತಂಡ, ನಾಗರಬಾವಿಯ ಕೃಷ್ಣಾನಂದ ನಗರದಲ್ಲಿದ್ದ ಆರೋಪಿಗಳ ಕಚೇರಿ ಮೇಲೆ ಶನಿವಾರ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿತು. ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಸಿಸಿಬಿ ದೂರು ದಾಖಲಿಸಿದ್ದು, ಮುಂದಿನ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.