ಧಾರವಾಡ[ಸೆ.24]: ರೈತರ ಜಾತ್ರೆ, ಸಂತೆ ಎಂದೆಲ್ಲಾ ಕರೆಯಿಸಿಕೊಳ್ಳುತ್ತಿರುವ ಕೃಷಿ ಮೇಳದ ಎರಡನೇ ದಿನದ ಪ್ರಮುಖ ಆಕರ್ಷಣೆ ಜಾನುವಾರುಗಳ ಪ್ರದರ್ಶನ. ಕೃಷಿ ವಿವಿಯ ದ್ವಾರದಲ್ಲಿಯೇ ತರಹೇವಾರಿ ಜಾನುವಾರುಗಳ ಮೇಳ ರೈತರನ್ನು ಆಕರ್ಷಿಸುತ್ತಿದೆ.

ಬರೀ ಧಾರವಾಡ ಅಲ್ಲದೇ ಸುತ್ತಲಿನ ಊರುಗಳಿಂದ ಬಂದಿದ್ದ ಜಾನುವಾರುಗಳು ತಮ್ಮದೇಯಾದ ವಿಶೇಷತೆ ಹೊಂದಿದ್ದವು. ಭಾನುವಾರ ರಜಾ ದಿನವಿರುವ ಕಾರಣ ಲಕ್ಷಾಂತರ ಜನರು ಜಾನುವಾರು ಗಳನ್ನು ವೀಕ್ಷಿಸಲು ಈ ಕೃಷಿ ಮೇಳಕ್ಕೆ ಆಗಮಿಸಿದ್ದರು. ಪ್ರಸಕ್ತ ಸಾಲಿನ ಮೇಳಕ್ಕೆ ವಿನಯ್ ಡೈರಿಯ ವಿವಿಧ ಹೊಸ ಸದಸ್ಯರು ಬೆಳ್ಳಂಬೆಳಗ್ಗೆ ಹಾಜರಿದ್ದರು.

ವಿಶೇಷವಾಗಿ ಬೃಹತ್ ಗಾತ್ರದ ಜಾಫ್ರಬಾದಿ ತಳಿಯ ಎಮ್ಮೆ- ಕೋಣ, ಮುರ‌್ರಾ ಎಮ್ಮೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಇವುಗಳೊಡನೆ ಕುದುರೆ, ಹಸು, ಎತ್ತು ಮುಂತಾದ ಜಾನುವಾರುಗಳು ಪ್ರಾಣಿ ಪ್ರಿಯರ ಕಣ್ಮನ ಸೆಳೆದವು.

ಮುದ್ದುಮೊಗದ ಹಸುಗಳು: ಮಾಜಿ ಸಚಿವ ವಿನಯ ಕುಲಕರ್ಣಿ ಒಡೆತನದ ವಿನಯ್ ಡೈರಿಯ ಇಪ್ಪತ್ತು ಹಸುಗಳು ಮೇಳದಲ್ಲಿದ್ದವು. ಸದೃಢ ದೇಹಿಗಳಾದ ಇವುಗಳಿಗೆ ದಿನನಿತ್ಯ ಎರಡು ಬಾರಿ ಪೋಷಕಾಂಶಯುಕ್ತ ಹುಲ್ಲು, ಗೋದಿ ಹೊಟ್ಟು,ಹುರುಳಿ ನುಚ್ಚನ್ನು ಹಾಕಲಾಗುತ್ತದೆ. ಪ್ರತಿಯೊಂದು ಹಸು ದಿನವೊಂದಕ್ಕೆ 30-40 ಲೀಟರ್‌ನಷ್ಟು ಹಾಲು ನೀಡುತ್ತಿವೆಯಂತೆ. ಇವುಗಳ ಆರೈಕೆಗೆಂದೇ ಪ್ರತ್ಯೇಕವಾಗಿ ರಾಜಸ್ತಾನದ ನಾಲ್ಕು ವೈದ್ಯರಿದ್ದು, ಪಾಲನೆಗೆ ವಿರೂಪಾಕ್ಷ, ಮುತ್ತುರಾಜ ಎಂಬಿಬ್ಬರನ್ನು ನೇಮಿಸಿದ್ದಾರೆ ಎಂಬ ಮಾಹಿತಿ ದೊರಕಿತು.

ದೈತ್ಯ ಜಾಫ್ರಬಾದಿ ಕೋಣ: ಗುಜರಾತಿ ಮೂಲದ ತಳಿ ಇದಾಗಿದ್ದು ತನ್ನ ದಢೂತಿ ದೇಹದಿಂದ ಜನರ ಕಣ್ಮನ ಸೆಳೆಯುತ್ತಿದೆ. ದಿನಕ್ಕೆ ನಿಯಮಿತ ಮೂರು ಬಾರಿ ಕೆಜಿಗಟ್ಟಲೇ ಆಹಾರ ಸೇವಿಸುವ ಈ ಕೋಣಕ್ಕೆ ಹತ್ತಿಕಾಳು, ಗೋವಿನಜೋಳ, ಗೋದಿಹಿಟ್ಟು, ಕಡಲೆಕಾಳನ್ನು ನೀಡಲಾಗುತ್ತದೆ. ಇನ್ನು ಹರಿಯಾಣದ ಮುರ‌್ರಾ ತಳಿಯನ್ನು ಇಲ್ಲಿ ಪ್ರದರ್ಶನಕ್ಕೆ ತರಲಾಗಿತ್ತು. ಇದರ ಪಾಲನೆಯನ್ನು ಸಂಜಯ್ ದುಬೆ ಮಾಡುತ್ತಾರೆ. ತನ್ನ ಆಕರ್ಷಕ ಹೊಂಬಣ್ಣದಿಂದ ಎಲ್ಲರನ್ನು ಹುಬ್ಬೇರಿಸುತ್ತಿರುವ ಕುದುರೆಗಳು ಮೇಳದ ಮತ್ತೊಂದು ಆಕರ್ಷಣೆ. 

ದರ್ಶನ್ ಕುದುರೆ ಪ್ರದರ್ಶನಕ್ಕೆ
ಕನ್ನಡದ ಖ್ಯಾತ ನಟ ದರ್ಶನ್ ನೀಡಿದ ಕುದುರೆಯನ್ನೂ ಇಲ್ಲಿ ಪ್ರದರ್ಶನಕ್ಕೆ ತರಲಾಗಿದ್ದು, ಇದನ್ನು ಜನತೆ ತಿರಗಾಮುರಗಾ ನೋಡುತ್ತಿದ್ದಾರೆ. ಕುದುರೆಗಳಿಗೆ ಕಡಲೆ, ಸೋಯಾಬೀನ್, ಗೋವಿನಜೋಳದ ಮಿಶ್ರಣವನ್ನು ಮಿನರಿ ಮಿಕ್ಸರ್ ಮೂಲಕ ಮಿಕ್ಸ್ ಮಾಡಿ ತಿನ್ನಲು ಕೊಡಲಾಗುತ್ತಿದೆ. ಇಲ್ಲಿನ ಪ್ರತಿಯೊಂದು ಕುದುರೆಯ ಬೆಲೆ 4 ಲಕ್ಷದಿಂದ  10 ಲಕ್ಷದ ವರೆಗೂ ಇದೆ. ಉಳಿದಂತೆ ಟಗರು, ಮೊಲ, ನಾಯಿ ತಳಿಗಳ ಪ್ರದರ್ಶನವೂ ಭರ್ಜರಿಯಾಗಿ ನಡೆಯುತ್ತಿದೆ.