ಜಾತಿ ಸರ್ಟಿಫಿಕೆಟ್‌ ಗೊಂದಲದಿಂದ ಸರ್ಕಾರಿ ಸೌಲಭ್ಯ ಮರೀಚಿಕೆ!

ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ವಿವಾಹ ಅಥವಾ ಇನ್ಯಾವುದೋ ಕಾರಣದಿಂದ ಆಗಮಿಸಿ ಇಲ್ಲೇ ನೆಲೆಯೂರಿರುವ ಸಾವಿರಾರು ಪರಿಶಿಷ್ಟಜಾತಿ, ಪಂಗಡದ ಜನರು ಇದೀಗ ಜಾತಿ ಸರ್ಟಿಫಿಕೆಟ್‌ ಗೊಂದಲದಿಂದಾಗಿ ಕೆಲವು ವರ್ಷಗಳಿಂದ ಸರ್ಕಾರದ ಎಲ್ಲ ಸವಲತ್ತುಗಳಿಂದ ವಂಚಿತರಾಗಿದ್ದಾರೆ.

Caste certificate confusion: Government facility miragerav

ಮಂಗಳೂರು (ಜು.27): ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ವಿವಾಹ ಅಥವಾ ಇನ್ಯಾವುದೋ ಕಾರಣದಿಂದ ಆಗಮಿಸಿ ಇಲ್ಲೇ ನೆಲೆಯೂರಿರುವ ಸಾವಿರಾರು ಪರಿಶಿಷ್ಟಜಾತಿ, ಪಂಗಡದ ಜನರು ಇದೀಗ ಜಾತಿ ಸರ್ಟಿಫಿಕೆಟ್‌ ಗೊಂದಲದಿಂದಾಗಿ ಕೆಲವು ವರ್ಷಗಳಿಂದ ಸರ್ಕಾರದ ಎಲ್ಲ ಸವಲತ್ತುಗಳಿಂದ ವಂಚಿತರಾಗಿದ್ದಾರೆ.

ಸರ್ಕಾರಿ ಸೌಲಭ್ಯಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ವ್ಯವಸ್ಥೆ ಆರಂಭವಾದ ಬಳಿಕ ಈ ಸಮಸ್ಯೆ ಉದ್ಭವಿಸಿದೆ. ವರ್ಷಗಳು ಕಳೆದರೂ ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ಮೀನ ಮೇಷ ಎಣಿಸಲಾಗುತ್ತಿದೆ. ಇದರಿಂದಾಗಿ ಮನೆ, ನಿವೇಶನ, ವಿಧವಾ ವೇತನ, ವೃದ್ಧಾಪ್ಯ ವೇತನ, ಮಕ್ಕಳಿಗೆ ಶೈಕ್ಷಣಿಕ ಸಾಲ ಕೂಡ ಸಿಗದೆ ಬಡವರು ಪರಿತಪಿಸುವಂತಾಗಿದೆ.

Reservation: ಎಸ್‌ಸಿ,ಎಸ್‌ಟಿ ಪಂಚಮಸಾಲಿ ಮೀಸಲಾತಿಗೆ ಬದ್ಧ: ಸಿಎಂ ಬೊಮ್ಮಾಯಿ

ಆರ್‌ಡಿ ನಂಬರ್‌(RD Number) ಇಲ್ಲದೆ ಸಮಸ್ಯೆ: ಕರ್ನಾಟಕದಲ್ಲಿ ನೀಡುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ(cirtificate)ದಲ್ಲಿ ಆರ್‌ಡಿ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಆದರೆ ಇತರ ರಾಜ್ಯಗಳ ಪ್ರಮಾಣ ಪತ್ರಗಳಲ್ಲಿ ಈ ಸಂಖ್ಯೆ ಇರುವುದಿಲ್ಲ. ಕರ್ನಾಟಕ ವ್ಯಾಪ್ತಿಯಲ್ಲಿ ವಾಸವಾಗಿದ್ದು ಸರ್ಕಾರದ ಯಾವುದೇ ಸವಲತ್ತಿಗಾಗಿ ಆನ್‌ಲೈನ್‌(Online) ಅರ್ಜಿ ಸಲ್ಲಿಸುವ ಸಂದರ್ಭ (ಮ್ಯಾನ್ಯುವಲ್‌ ಅರ್ಜಿ ಸ್ವೀಕಾರ ಈಗ ಇಲ್ಲ) ಆರ್‌ಡಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಿದೆ. ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬಂದವರ ಜಾತಿ, ಆದಾಯ ಪ್ರಮಾಣ ಪತ್ರದಲ್ಲಿ ಆರ್‌ಡಿ ಸಂಖ್ಯೆ ಇಲ್ಲದಿರುವುದರಿಂದ ಆನ್‌ಲೈನ್‌ ಅರ್ಜಿ ಸಲ್ಲಿಕೆ ವೇಳೆ ಅರ್ಜಿಯೇ ತಿರಸ್ಕೃತವಾಗುತ್ತಿದೆ.

ಬೇರೆ ಜಾತಿಗಳಿಗಿಲ್ಲ ತೊಂದರೆ: ನಿಯಮದ ಪ್ರಕಾರ ಎಸ್ಸಿ ಎಸ್ಟಿಹೊರತುಪಡಿಸಿ ದೇಶದ ಯಾವುದೇ ಜಾತಿಯ ವ್ಯಕ್ತಿಗಳು ಕರ್ನಾಟಕಕ್ಕೆ ಬಂದು ಇಲ್ಲಿ ಆರು ತಿಂಗಳು ವಾಸ್ತವ್ಯವಿದ್ದರೆ ಕರ್ನಾಟಕದಲ್ಲೇ ಜಾತಿ, ಆದಾಯ ಪ್ರಮಾಣಪತ್ರ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಎಸ್ಸಿ ಎಸ್ಟಿಸಮುದಾಯದವರಿಗೆ ಈ ಅವಕಾಶವಿಲ್ಲ. ಅವರು ಹುಟ್ಟಿದ ಪ್ರದೇಶದಿಂದಲೇ (ಯಾವ ರಾಜ್ಯದಲ್ಲೇ ಹುಟ್ಟಿರಲಿ) ಜಾತಿ ಪ್ರಮಾಣಪತ್ರ ಪಡೆಯಬೇಕಾಗುತ್ತದೆ. ಆ ಪ್ರಮಾಣಪತ್ರ ದೇಶಾದ್ಯಂತ ಅಂಗೀಕೃತವಾಗಿದ್ದರೂ ಕೂಡ, ಅದರಲ್ಲಿ ಆರ್‌ಡಿ ಸಂಖ್ಯೆ ಇಲ್ಲದಿರುವುದರಿಂದ ಕರ್ನಾಟಕದಲ್ಲಿ ಮಾತ್ರ ಸರ್ಕಾರಿ ಸವಲತ್ತು ಪಡೆಯಲು ಆಗುತ್ತಿಲ್ಲ.

Karnataka Scheduled Tribe : ಕಾಡುಗೊಲ್ಲ ಸಮುದಾಯ ಎಸ್‌ಟಿ ಸೇರ್ಪಡೆಗೆ ಕ್ರಮ

ಈ ಸಮಸ್ಯೆ ಕರ್ನಾಟಕದಲ್ಲೇ ಹುಟ್ಟಿದ ಪರಿಶಿಷ್ಟಜಾತಿ, ಪಂಗಡದ ಜನರಿಗೆ ಇಲ್ಲ. ರಾಜ್ಯದೊಳಗಿನ ನಿಯಮಗಳ ಪ್ರಕಾರ ಆರ್‌ಡಿ ಸಂಖ್ಯೆ ನಮೂದಾಗಿರುವ ಪ್ರಮಾಣಪತ್ರವೇ ಅವರಿಗೆ ದೊರೆಯುತ್ತಿದೆ.

ಮಹಿಳೆಯರೇ ಹೆಚ್ಚು: ಸರ್ಕಾರದ ಸೌಲಭ್ಯ ವಂಚಿತರಾಗುತ್ತಿರುವವರು ಮಹಿಳೆಯರೇ ಹೆಚ್ಚು. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಇತ್ಯಾದಿ ರಾಜ್ಯಗಳಿಂದ ಸಾವಿರಾರು ಮಂದಿ ಹೆಣ್ಮಕ್ಕಳು ಕರ್ನಾಟಕಕ್ಕೆ ವಿವಾಹವಾಗಿ ಆಗಮಿಸಿದ್ದಾರೆ. ಅವರಿಗೆ ಸರ್ಕಾರ ಆಧಾರ್‌ ಕಾರ್ಡ್‌, ರೇಶನ್‌ ಕಾರ್ಡ್‌ ನೀಡಿದೆ. ಇಲ್ಲೇ ಮತದಾನದ ಹಕ್ಕನ್ನೂ ನೀಡಲಾಗಿದೆ. ಆದರೆ ರಾಜ್ಯದ ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ಬಡ ಮಹಿಳೆಯರಿಗೆ ಒದಗಿಸಲಾಗುತ್ತಿರುವ ವಿಧವಾ ವೇತನ, ವೃದ್ಧಾಪ್ಯ ವೇತನದಂಥ ಪಿಂಚಣಿಯ ಸೌಲಭ್ಯವೂ ಸಿಗುತ್ತಿಲ್ಲ. ಮುಖ್ಯವಾಗಿ ಸರ್ಕಾರದ ವಸತಿ ಯೋಜನೆ ಮಹಿಳೆಯರ ಹೆಸರಲ್ಲೇ ಆಗುವಂಥದ್ದು. ಈ ಸೌಲಭ್ಯವೂ ಸಿಗುತ್ತಿಲ್ಲ. ಹಾಗಾಗಿ ಇಡೀ ಕುಟುಂಬವೇ ಸಮಸ್ಯೆಗೆ ಒಳಗಾಗುತ್ತಿದೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.

ನಾನು ವಿವಾಹವಾಗಿ ದ.ಕ.ಕ್ಕೆ ಬಂದಿದ್ದೇನೆ. ನಮ್ಮ ಮನೆ ಭಾಗಶಃ ಕುಸಿದಿದೆ. ಸರ್ಕಾರದ ವಸತಿ ಯೋಜನೆಗಾಗಿ ಅರ್ಜಿ ಸಲ್ಲಿಸುವಾಗ ನಾನು ಕೇರಳದ ಮೂಲದವಳಾಗಿರುವುದರಿಂದ ಜಾತಿ ಸರ್ಟಿಫಿಕೆಟ್‌ನಲ್ಲಿ ಆರ್‌ಡಿ ಸಂಖ್ಯೆ ಇಲ್ಲದೆ ಅರ್ಜಿ ತಿರಸ್ಕೃತವಾಗಿದೆ. ಮನೆ ಶಿಥಿಲವಾಗಿದ್ದರಿಂದ ಮಕ್ಕಳು ಸಂಬಂಧಿಕರ ಮನೆಯಲ್ಲಿ ಓದುತ್ತಿದ್ದಾರೆ. ಅರೆ ಕುಸಿದ ಮನೆಯಲ್ಲಿ ಭಯದಿಂದ ಬದುಕುತ್ತಿದ್ದೇವೆ. ಸಮಸ್ಯೆ ಬಗೆಹರಿಸಲು ಯಾರೂ ಸ್ಪಂದನೆ ನೀಡುತ್ತಿಲ್ಲ.

- ಕುಸುಮ, ಚೇಳೂರು, ಸಜಿಪಮೂಡು ಗ್ರಾಪಂ, ಬಂಟ್ವಾಳ ತಾಲೂಕು

 

ಬೇರೆ ರಾಜ್ಯದ ಪರಿಶಿಷ್ಟಸಮುದಾಯದವರಿಗೆ ನಮ್ಮ ರಾಜ್ಯದಲ್ಲಿ ಜಾತಿ ಪ್ರಮಾಣಪತ್ರ ನೀಡಲು ಅವಕಾಶವಿಲ್ಲ. ಇದು ಸರ್ಕಾರದ ಮಟ್ಟದಲ್ಲಿ ಬಗೆಹರಿಯಬೇಕಾದ ವಿಚಾರ.

- ಪುರಂದರ ಹೆಗ್ಡೆ, ಮಂಗಳೂರು ತಹಸೀಲ್ದಾರ್‌

 

Latest Videos
Follow Us:
Download App:
  • android
  • ios