* ಜಾತಿ ಸೂಚಕ ಗ್ರಾಮ ಹೆಸರು ರದ್ದು ಅಶೋಕ್* ಪರ್ಯಾಯ ಹೆಸರಿಡಲು ಅಗತ್ಯ ಕ್ರಮದ ಭರವಸೆ'* ವಸತಿ ಯೋಜನೆ ಫಲಾನುಭವಿಗಳ ಆದಾಯ ಮಿತಿ ಹೆಚ್ಚಳ* ಈಗಿನ ಮಿತಿಯಿಂದಾಗಿ ಹಲವರಿಗೆ ಅರ್ಜಿ ಸಲ್ಲಿಸಲೇ ಅವಕಾಶ ಆಗುತ್ತಿಲ್ಲ
ಬೆಂಗಳೂರು(ಮಾ. 15) ರಾಜ್ಯದಲ್ಲಿ (Karnataka) ಜಾತಿ ಹೆಸರಿನ ಮೇಲೆ ಇರುವ ಗ್ರಾಮಗಳ ಹೆಸರನ್ನು ರದ್ದುಪಡಿಸಿ ಪರ್ಯಾಯ ಹೆಸರನ್ನಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok)ಅಶ್ವಾಸನೆ ನೀಡಿದ್ದಾರೆ.
ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ತುರವಿಹಾಳ್ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ ಹಲವೆಡೆ ವಡ್ಡರಹಟ್ಟಿ, ಕುರುಬರ ಹಟ್ಟಿಸೇರಿದಂತೆ ನಾನಾ ಬಗೆಯಲ್ಲಿ ಜಾತಿ ಸೂಚಕ ಹೆಸರಲ್ಲಿ ಗ್ರಾಮಗಳನ್ನು ನಾಮಕರಣ ಮಾಡಲಾಗಿದೆ. ಜಾತಿ ಸೂಚಕ ಹೆಸರನ್ನು ತೆಗೆದುಹಾಕಲು ಕ್ರಮ ಜರುಗಿಸಲಾಗುವುದು. ಈಗಾಗಲೇ ಸ್ಮಶಾನಗಳಿಗೆ ಜಾತಿ ಆಧಾರದ ಮೇಲೆ ಇದ್ದ ಹೆಸರನ್ನು ತೆಗೆಯಲಾಗಿದೆ ಎಂದು ಹೇಳಿದರು.
ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು. ಇದು ಒಂದೆರಡು ತಿಂಗಳಲ್ಲಿ ನಡೆಯುವ ಪ್ರಕ್ರಿಯೆಯಲ್ಲ. ಎಷ್ಟೇ ವೇಗವಾಗಿ ಕೆಲಸ ಮಾಡಿದರೂ ಕನಿಷ್ಠ 8-9 ತಿಂಗಳು ಕಾಲಾವಕಾಶ ಬೇಕು ಎಂದರು.
ಬಿಜೆಪಿ ಸದಸ್ಯ ಅಶೋಕ್ ನಾಯಕ್ ಮಾತನಾಡಿ, ಉಪಗ್ರಹಗಳ ಮೂಲಕ ನಕ್ಷೆ ತಯಾರಿಸಿ ಕಂದಾಯ ಗ್ರಾಮಗಳನ್ನು ಗುರುತಿಸಬಹುದು. ಇದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂದು ಸಲಹೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಪಿ.ರಾಜೀವ್, ಕೇಂದ್ರ ಸರ್ಕಾರ ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಬಳಸಿಕೊಂಡು ಕಂದಾಯ ಗ್ರಾಮಗಳನ್ನು ಗುರುತಿಸಬಹುದು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿನ ಲಂಬಾಣಿ, ಗೊಲ್ಲ, ಬೋವಿ, ನಾಯಕ, ಸೋಲಿಗ ಸೇರಿದಂತೆ ದುರ್ಬಲ ಸಮುದಾಯಗಳ ಜನರ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ. ರಾಜ್ಯದಲ್ಲಿ 3,499 ದಾಖಲೆ ರಹಿತ ಜನವಸತಿ ಪ್ರದೇಶಗಳ ಪೈಕಿ 632 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 1441 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇನ್ನುಳಿದವುಗಳಿಗೆ ಕಾಲಾವಕಾಶ ಬೇಕಾಗಿದೆ ಎಂದು ಮಾಹಿತಿ ನೀಡಿದರು.
ವಸತಿ ಯೋಜನೆ ಫಲಾನುಭವಿಗಳ ಆದಾಯ ಮಿತಿ ಹೆಚ್ಚಳ : ವಿವಿಧ ವಸತಿ ಯೋಜನೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ನಿಗದಿಗೊಳಿಸಿರುವ ಆದಾಯ ಮಿತಿಯ ಪ್ರಮಾಣವನ್ನು ಹೆಚ್ಚಿಸುವ ಕುರಿತು ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ವಸತಿ ಸಚಿವ. ವಿ.ಸೋಮಣ್ಣ ಅಶ್ವಾಸನೆ ನೀಡಿದ್ದಾರೆ.
ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರ ನೀಡಿದ ಅವರು, ವಸತಿ ಯೋಜನೆಯಡಿ ಆಯ್ಕೆ ಮಾಡಲು ಗ್ರಾಮೀಣ ಭಾಗದಲ್ಲಿ ಆದಾಯ ಮಿತಿಯನ್ನು 32 ಸಾವಿರ ರು. ಮತ್ತು ನಗರ ಪ್ರದೇಶದಲ್ಲಿ 87 ಸಾವಿರ ರು.ನಿಗದಿಗೊಳಿಸಲಾಗಿದೆ. ಸರ್ಕಾರದ ಆದೇಶದಲ್ಲಿ 42 ಸಾವಿರ ರು.ಗಿಂತ ಕಡಿಮೆ ಮಾಡುವಂತಿಲ್ಲ ಎಂಬ ಕಾರಣಕ್ಕಾಗಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಗ್ರಾಮೀಣ ಭಾಗದ ಆದಾಯ ಮಿತಿಯನ್ನು 1.20 ಲಕ್ಷ ರು.ಗೆ ಮತ್ತು ನಗರ ಪ್ರದೇಶದ ಆದಾಯ ಮಿತಿಯನ್ನು 3 ಲಕ್ಷ ರು.ಗೆ ಹೆಚ್ಚಳ ಮಾಡಲಾಗುವುದು. ಶೀಘ್ರದಲ್ಲಿಯೇ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದರು.
ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸುಳ್ಳು ಪ್ರಮಾಣ ಪತ್ರಗಳನ್ನು ಕೊಟ್ಟರಾಯಿತು. ಈಗ ನಡೆಯುತ್ತಿರುವುದು ಅದೇ ತಾನೆ. ಸುಳ್ಳು ದಾಖಲೆ ನೀಡಿದರೆ ಫಲಾನುಭವಿಗಳು ಹೇಗೋ ಆಯ್ಕೆಯಾಗುತ್ತಾರೆ ಎಂದು ಸರ್ಕಾರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು
