ಬೆಂಗಳೂರು [ನ.17]:  ಶುಕ್ರವಾರ ದೊಡ್ಡ ಬಿದರಕಲ್ಲು ಸಮೀಪದ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ಬಾಯ್ಲರ್‌ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಸಂಬಂಧ ಗಾರ್ಮೆಂಟ್ಸ್‌ ಕಂಪನಿ ವಿರುದ್ಧ ರಾಜ್ಯ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ ಶನಿವಾರ ಪೀಣ್ಯ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದೆ.

ಸರ್ಕಾರದ ಪರವಾನಿಗೆ ಪಡೆಯದೆ ಬಾಯ್ಲರ್‌ ಅಳವಡಿಸಿದ ಆರೋಪದ ಮೇರೆಗೆ ಇಲಾಖೆ ಪ್ರಕರಣ ದಾಖಲಿಸಿದೆ.

ದೊಡ್ಡಬಿದರಕಲ್ಲು ಸಮೀಪದ ಅನ್ನಪೂಣೇಶ್ವರಿ ಲೇಔಟ್‌ನಲ್ಲಿರುವ ಫೋನಿಕ್ಸ್‌ ವಾಶ್‌ಟೆಕ್‌ ಗಾರ್ಮೆಂಟ್ಸ್‌ನಲ್ಲಿ ಶುಕ್ರವಾರ ರಾತ್ರಿ ಬಾಯ್ಲರ್‌ ಸ್ಫೋಟಗೊಂಡು ಕಾರ್ಖಾನೆ ಸಹ ಮಾಲಿಕ ಸೇರಿ ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಬಾಯ್ಲರ್‌ಗಳ ಇಲಾಖೆ ಅಧಿಕಾರಿಗಳು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ.

1948ರ ಕಾರ್ಖಾನೆಗಳ ಕಾಯ್ದೆ ಪ್ರಕಾರ ಕಾರ್ಖಾನೆಯಲ್ಲಿ ಉಡುಪು ಸ್ವಚ್ಛಗೊಳಿಸುವ ಘಟಕಕ್ಕೆ ಪರವಾನಿಗೆ ಪಡೆಯದೆ ವಾಶ್‌ಟೆಕ್‌ ಗಾರ್ಮೆಂಟ್ಸ್‌ ಕಾರ್ಖಾನೆ ಆಡಳಿತ ಮಂಡಳಿ, ಕಾರ್ಖಾನೆಯಲ್ಲಿ ಬಾಯ್ಲರ್‌ಗಳನ್ನು ಸ್ಥಾಪಿಸಿತ್ತು. ಇನ್ನೂ 1923ರ ಬಾಯ್ಲರ್‌ಗಳ ಕಾಯ್ದೆಯನ್ವಯ ಆ ಬಾಯ್ಲರ್‌ಗಳು ನೋಂದಣಿ ಆಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ ಗಾರ್ಮೆಂಟ್ಸ್‌ನ ಬಾಯ್ಲರ್‌ಗಳು ಸಹ ಗುಣಮಟ್ಟದಿಂದ ಕೂಡಿರಲಿಲ್ಲ. ಇದರಿಂದ ಒತ್ತಡ ಹೆಚ್ಚಾದ ಪರಿಣಾಮ ಅವುಗಳು ಸ್ಫೋಟಗೊಂಡಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿದೆ ಎಂದು ರಾಜ್ಯ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ ಹೆಚ್ಚುವರಿ ನಿರ್ದೇಶಕ ಟಿ.ಆರ್‌.ರಮೇಶ್‌ ತಿಳಿಸಿದ್ದಾರೆ.

ಘಟನೆ ವಿಚಾರ ತಿಳಿದ ಕೂಡಲೇ ರಾತ್ರಿಯೇ ಘಟನಾ ಸ್ಥಳಕ್ಕೆ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳ ಜತೆ ತೆರಳಿ ಪರಿಶೀಲನೆ ನಡೆಸಲಾಯಿತು. ಘಟನೆ ಸಂಬಂಧ ಆ ಕಂಪನಿಯ ಮಾಲಿಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ, ಈ ದುರಂತದ ತನಿಖೆ ಮುಗಿಯವರೆಗೆ ಕಾರ್ಖಾನೆ ಆರಂಭಿಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ರಮೇಶ್‌ ಹೇಳಿದ್ದಾರೆ.

ಕಾರ್ಖಾನೆಯ ಪಾಲುದಾರ ಸಾವು

ವಾಶ್‌ಟೆಕ್‌ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಶುಕ್ರವಾರ ರಾತ್ರಿ ಬಾಯ್ಲರ್‌ ಸ್ಫೋಟಿಸಿ ಮೃತಪಟ್ಟವರ ಪೈಕಿ ಒಬ್ಬರು ಕಂಪನಿಯ ಪಾಲುದಾರರಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿಕ್ಕಬಿದರಕಲ್ಲು ನಿವಾಸಿ ಶ್ರೀಕಂಠ ಅಲಿಯಾಸ್‌ ಕಂಠಿ ಹಾಗೂ ದೊಡ್ಡಬಿದರಕಲ್ಲಿನ ರಮೇಶ್‌ ಸಾವನ್ನಪ್ಪಿದ್ದರು. ಇದರಲ್ಲಿ ಕಂಠಿ ಅವರು ಕಾರ್ಖಾನೆಯ ಮಾಲಿಕರರಲ್ಲಿ ಒಬ್ಬರಾಗಿದ್ದಾರೆ. ಎರಡು ತಿಂಗಳಿಂದ ಕಾರ್ಯಸ್ಥಗಿತಗೊಳಿಸಿದ್ದ ಕಾರ್ಖಾನೆಯನ್ನು ಪುನಾರಂಭಿಸಲು ಅವರು ತಯಾರಿ ನಡೆಸಿದ್ದು, ಕೆಲವೇ ದಿನಗಳಲ್ಲಿ ಮತ್ತೆ ಗಾರ್ಮೆಂಟ್ಸ್‌ನಲ್ಲಿ ಕೆಲಸವಾಗಲಿತ್ತು. ಅಷ್ಟರಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸ ಪುನಾರಂಭಿಸುವ ಸಲುವಾಗಿ ಕಂಠಿ ಅವರು, ಶುಕ್ರವಾರ ಸಂಜೆ ಘಟಕದ ಪರಿಶೀಲನೆಗೆ ಕಾರ್ಮಿಕ ರಮೇಶ್‌ ಜತೆ ಬಂದಿದ್ದರು. ಆಗ ಬಹಳ ದಿನಗಳಿಂದ ಬಳಕೆಯಾಗದೆ ಇದ್ದ ಬಾಯ್ಲರ್‌ಗಳನ್ನು ಚಾಲೂ ಮಾಡಿದ್ದಾರೆ. ಈ ವೇಳೆ ತಾಂತ್ರಿಕ ತೊಂದರೆ ಕಾಣಿಸಿಕೊಂಡು ತೀವ್ರ ಒತ್ತಡದಿಂದ ಬಾಯ್ಲರ್‌ಗಳು ಸ್ಫೋಟಗೊಂಡಿವೆ ಎಂದು ಪೊಲೀಸರು ವಿವರಿಸಿದ್ದಾರೆ.