ವಿಜಯಪುರ: ಬೈರಗೊಂಡ ಪ್ರಕರಣ, ಮಲ್ಲಿಕಾರ್ಜುನ ಚಡಚಣ ಮೇಲೂ ಕೇಸ್
ಬೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣ| ಭೀಮಾತೀರದ ಮಾಸ್ಟರ್ ಮೈಂಡ್, ನಟೋರಿಯಸ್ ಮಲ್ಲಿಕಾರ್ಜುನ ಚಡಚಣ ಹಾಗೂ ಅವನ ಪತ್ನಿ ವಿಮಲಾಬಾಯಿ ಚಡಚಣ ಮೇಲೂ ಪ್ರಕರಣ ದಾಖಲು|
ವಿಜಯಪುರ(ಡಿ.10): ಭೀಮಾತೀರದ ಮಹಾದೇವ ಸಾಹುಕಾರ ಬೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮಾತೀರದ ಮಾಸ್ಟರ್ ಮೈಂಡ್, ನಟೋರಿಯಸ್ ಮಲ್ಲಿಕಾರ್ಜುನ ಚಡಚಣ ಹಾಗೂ ಅವನ ಪತ್ನಿ ವಿಮಲಾಬಾಯಿ ಚಡಚಣ ಮೇಲೂ ಪ್ರಕರಣ ದಾಖಲಾಗಿದೆ.
ನಗರದ ಹೊರವಲಯ ಕನ್ನಾಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ಹತ್ತಿರ ನ.2ರಂದು ಮಹಾದೇವ ಸಾಹುಕಾರ ಬೈರಗೊಂಡ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡಿಸಿ, ಗುಂಡಿನ ದಾಳಿ ನಡೆದಿತ್ತು. ಈ ಘಟನೆಯಲ್ಲಿ ಬೈರಗೊಂಡ ಸಹಚರ ಹಾಗೂ ಕಾರು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದರು.
ಭೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣ: ಪ್ರಮುಖ ಆರೋಪಿ ಬಂಧನ
ಈ ಪ್ರಕರಣದಲ್ಲಿ ಅದೇ ಮಾಸ್ಟರ್ ಮೈಂಡ್ ಮಲ್ಲಿಕಾರ್ಜುನ ಚಡಚಣ ಕೈವಾಡವಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈತ ಕಳೆದೆರಡು ದಶಕಗಳಿಂದ ತಲೆ ಮರೆಸಿಕೊಂಡು ಮಹಾದೇವ ಸಾಹುಕಾರ ಬೈರಗೊಂಡ ಹತ್ಯೆಗೆ ಸಂಚು ರೂಪಿಸಿದ್ದಾನೆ. ಈತನ ಬಂಧನಕ್ಕೆ ಜಿಲ್ಲಾ ಪೊಲೀಸರು ಜಾಲ ಬೀಸಿದ್ದಾರೆ.
ಬೈರಗೊಂಡ ಮೇಲಿನ ಈ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮರಾಜ ಚಡಚಣ ಭಂಟ ಮಡುಸ್ವಾಮಿ(ಮಡಿವಾಳಯ್ಯ) ಹಿರೇಮಠ ಸೇರಿದಂತೆ 30 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ಬಳಸಿದ 5 ಪಿಸ್ತೂಲ್, 10 ಜೀವಂತ ಗುಂಡುಗಳು, 27 ಮೊಬೈಲ್, 8 ತಲ್ವಾರ್, ಬೈಕ್ ಸೇರಿದಂತೆ ವಾಹನ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದರು.