ಭೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣ: ಪ್ರಮುಖ ಆರೋಪಿ ಬಂಧನ
ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಪಿಸ್ತೂಲ್, ಒಂದು ಜೀವಂತ ಗುಂಡು ಹಾಗೂ ಮೊಬೈಲ್ ಜಪ್ತಿ| ಪ್ರಮುಖ ಆರೋಪಿ ಮಡಿವಾಳಯ್ಯ ಹಿರೇಮಠನು ಧರ್ಮರಾಜ್ ಚಡಚಣ ಕಟ್ಟಾ ಬೆಂಬಲಿಗ| ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಾದೇವ ಭೈರಗೊಂಡ|
ವಿಜಯಪುರ(ಡಿ.09): ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಗುಂಡಿನ ದಾಳಿಯ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದೂವರೆ ತಿಂಗಳು ಬಳಿಕ ಪ್ರಮುಖ ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ವಿಜಯಪುರ ನಗರದ ಬಂಬಳ ಅಗಸಿ ನಿವಾಸಿ ಮಡಿವಾಳಯ್ಯ ಉರ್ಫ್ ಮಡು ಪಂಚಯ್ಯ ಹಿರೇಮಠ (33) ಎಂಬುವನನ್ನು ಬಂಧಿಸಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಪಿಸ್ತೂಲ್, ಒಂದು ಜೀವಂತ ಗುಂಡು ಹಾಗೂ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಕೃತ್ಯ ನಡೆದ ದಿನದಿಂದಲೂ ತಲೆ ಮರೆಸಿಕೊಂಡಿದ್ದ ಈತನನ್ನು ಹುಡುಕಲು ಪೊಲೀಸರು ಹಲವಾರು ಸ್ಥಳಗಳನ್ನು ಜಾಲಾಡಿದ್ದರು. ಕೊನೆಗೂ ಪೊಲೀಸರ ಕೈಗೆ ಮಡಿವಾಳಯ್ಯ ಹಿರೇಮಠ ಸಿಕ್ಕಿ ಬಿದ್ದಿದ್ದಾನೆ.
ಭೀಮಾತೀರದಲ್ಲಿ ಮತ್ತೆ ಗುಂಡಿನ ದಾಳಿಗೆ ಅಸಲಿ ಕಾರಣ...ಮಲ್ಲಿಕಾರ್ಜುನ ಎಲ್ಲಿದ್ದಾನೆ?
ಪ್ರಕರಣದ ಹಿನ್ನಲೆ:
ಕಳೆದ ನವೆಂಬರ್ 2 ರಂದು ಕಾತ್ರಾಳ ಕ್ರಾಸ್ ಬಳಿ ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಅವರ ಕಾರಿಗೆ ವಾಹನ ಡಿಕ್ಕಿಹೊಡೆಸಿ ಗುಂಡಿನ ದಾಳಿ ಮಾಡಲಾಗಿತ್ತು. ಈ ಘಟನೆಯಲ್ಲಿ ಭೈರಗೊಂಡ ಕಾರು ಚಾಲಕ ಹಾಗೂ ಸಹಚರ ಅಸುನೀಗಿದ್ದರು. ಮಹಾದೇವ ಭೈರಗೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಮಡಿವಾಳಯ್ಯ ಹಿರೇಮಠನು ಧರ್ಮರಾಜ್ ಚಡಚಣ ಕಟ್ಟಾ ಬೆಂಬಲಿಗ. ಧರ್ಮರಾಜ್ ಚಡಚಣ ಕೊಲೆ ಪ್ರಕರಣದ ಉನ್ನತ ತನಿಖೆಗಾಗಿ ಧರ್ಮರಾಜ್ ಚಡಚಣ ಅವರ ತಾಯಿ ಮಲಾಬಾಯಿ ಚಡಚಣ ಅವರ ಕಾನೂನು ಹೋರಾಟದಲ್ಲಿ ಸದಾ ಮಹತ್ವದ ಪಾತ್ರ ವಹಿಸಿದ್ದ. ಅದೇ ತೆರನಾಗಿ ಧರ್ಮರಾಜ್ ಚಡಚಣ ಬಾಯ್ಸ್ ಎನ್ನುವ ಸಂಘಟನೆಯನ್ನು ರಚಿಸಿ ಧರ್ಮರಾಜ್ ಚಡಚಣ ಅಭಿಮಾನಿಗಳನ್ನು ಸಂಘಟಿಸಿದ್ದ, ಈ ಅಭಿಮಾನವನ್ನೇ ಹೆಚ್ಚು ಜಾಗೃತಗೊಳಿಸಿ ಯುವಕರನ್ನು ಗುಂಡಿನ ದಾಳಿ ಕೃತ್ಯಕ್ಕೆ ಬಳಕೆ ಮಾಡಿದ್ದ ಎಂಬ ಮೊದಲಾದ ಅಂಶಗಳು ತನಿಖೆ ವೇಳೆ ತಿಳಿದು ಬಂದಿದೆ.