ಮಂಡ್ಯ (ನ.26): ಜಿದ್ದಿಗೆ ಬಿದ್ದು ಎತ್ತುಗಳ ಮೇಲೆ 14 ಟನ್‌ ಕಬ್ಬಿನ ಭಾರ ಹೊರಿಸಿ ಮೂರು ಕಿ.ಮೀ. ಎಳೆಸಿ ಹಿಂಸಿಸಿದ್ದ ಯುವಕರ ಮೇಲೆ ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಲೂಕಿನ ಎಚ್‌.ಮಲ್ಲೀಗೆರೆ ಗ್ರಾಮದ ರಂಜು ಮತ್ತು ಇತರರು ಎತ್ತಿನಗಾಡಿಗೆ 14 ಟನ್‌ ಕಬ್ಬು ತುಂಬಿ ಜೋಡೆತ್ತುಗಳಿಂದ ಎಳೆಸಿದ್ದರು. ಎತ್ತುಗಳು ಕಬ್ಬಿನ ಭಾರ ಹೊತ್ತು ಬರುವ ಹಾಗೂ ಅವುಗಳ ಮುಂದೆ ಯುವಕರು ಶೋ ನೀಡುತ್ತಿರುವ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದರು.

ಹಿಂದೆ ಇದೇ ಗ್ರಾಮದ ವ್ಯಕ್ತಿಯೊಬ್ಬ 10 ಟನ್‌ ಕಬ್ಬನ್ನು ಎತ್ತಿನಗಾಡಿಗೆ ತುಂಬಿ ಎತ್ತುಗಳಿಂದ ಎಳೆಸಿದ್ದನು. ಅವನ ಮೇಲಿನ ಜಿದ್ದಿಗೆ ಬಿದ್ದ ಯುವಕರು ಇತ್ತೀಚೆಗೆ 14ಟನ್‌ ಕಬ್ಬು ತುಂಬಿ ಎತ್ತುಗಳಿಂದ ಎಳೆಸಿದ್ದರು. ಯುವಕರ ಈ ಅಮಾನವೀಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಯುವಕರ ಮೇಲೆ ಮೂಕಪ್ರಾಣಿಗಳ ಮೇಲಿನ ಹಿಂಸೆ ತಡೆಗಟ್ಟುವ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.