9 ಮದುವೆಯಾಗಿದ್ದಾರೆ ಎನ್ನಲಾದ ಮಹಿಳೆಯೊಬ್ಬರು ತನ್ನ 7ನೇ ಪತಿಯ ವಿರುದ್ಧ ದಾಖಲಿಸಿದ್ದ ಕ್ರೌರ್ಯದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಆರೋಪಗಳಲ್ಲಿ ಹುರುಳಿಲ್ಲ ಹಾಗೂ ವಿಚಾರಣೆ ಮುಂದುವರಿಸಿದರೆ ಕಾನೂನಿನ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಬರೋಬ್ಬರಿ ಒಂಬತ್ತು ಮದುವೆಯಾಗಿದ್ದಾರೆ ಎನ್ನಲಾದ ಮಹಿಳೆಯೊಬ್ಬರು, ವಿವಾಹಿತ ಮಹಿಳೆ ಮೇಲಿನ ಕ್ರೌರ್ಯ ಸೇರಿ ಇನ್ನಿತರ ಅಪರಾಧ ಸಂಬಂಧ ತನ್ನ ಏಳನೇ ಗಂಡನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

7ನೇ ಪತಿ ಮೇಲೆ ದೌರ್ಜನ್ಯ ಕೇಸ್‌ ಹಾಕಿದ್ದ 9 ಮದುವೆ ಆಗಿದ್ದಾರೆ ಎನ್ನಲಾದ ಮಹಿಳೆ

ಪತ್ನಿ ತನ್ನ ವಿರುದ್ಧ ದಾಖಲಿಸಿರುವ ಕ್ರಿಮಿಲ್‌ ಪ್ರಕರಣ ರದ್ದುಪಡಿಸುವಂತೆ ಕೋರಿ ಹೊಸಪೇಟೆಯ ರಾಜಕಾರಣಿ ರಾಜಾ ಹುಸೇನ್‌ ಎಂಬುವವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರರ ಆರೋಪಗಳ ಮೇಲೆ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸಿದಾಗ, ಆರೋಪಗಳು ಸುಳ್ಳೆಂದು ಕಂಡುಬರುತ್ತವೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ವಿವರ

ಅರ್ಜಿದಾರರು ಮತ್ತು ದೂರುದಾರೆಯು 2022ರಲ್ಲಿ ಮದುವೆಯಾಗಿದ್ದರು. ಮದುವೆ ನಡೆದ ಸ್ವಲ್ಪ ದಿನದ ಬಳಿಕ ದಂಪತಿ ಸಂಬಂಧ ಹದಗೆಟ್ಟಿದ್ದು, ಅರ್ಜಿದಾರರ ವಿರುದ್ಧ ದೂರುದಾರೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಉಡುಪಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು.

ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು. ಮದುದುವೆಯಾಗುವುದು, ಕುಟುಂಬದಲ್ಲಿ ಬಿರುಕು ಮೂಡಿಸುವುದು, ಪ್ರಕರಣಗಳ ಮೇಲೆ ಪ್ರಕರಣಗಳನ್ನು ಹೂಡುವುದು, ಅವುಗಳನ್ನು ಇತ್ಯರ್ಥಪಡಿಸುವುದು ಮತ್ತು ಅದರಿಂದ ಹಣ ಗಳಿಸುವುದು ದೂರುದಾರೆಗೆ ಅಭ್ಯಾಸವಾಗಿದೆ. 30 ವರ್ಷ ವಯಸ್ಸಿನ ದೂರುದಾರರು ಒಂಬತ್ತು ಬಾರಿ ಮದುವೆಯಾಗಿದ್ದಾರೆ. ಪ್ರತಿ ಬಾರಿಯೂ ಅವರು ಮದುವೆಯಾಗುವ ವಿಧಾನ ಒಂದೇ ಆಗಿರುತ್ತದೆ ಎಂದು ತಿಳಿಸಿ, ದೂರುದಾರರ ಕೃತ್ಯವನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸಿದ್ದರು. ಈ ಎಲ್ಲ ಆರೋಪಗಳನ್ನು ದೂರುದಾರೆ ನಿರಾಕರಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಹೈಕೋರ್ಟ್, ಅರ್ಜಿದಾರರು ಕೇವಲ ಒಂದೇ ಒಂದು ವೈವಾಹಿಕ ದೂರಿನ ನೋಂದಣಿಯನ್ನು ಪ್ರಶ್ನಿಸುತ್ತಿಲ್ಲ. ದೂರುದಾರರು ಒಂದರ ನಂತರ ಒಂದರಂತೆ ಒಟ್ಟು ಒಂಬತ್ತು ವೈವಾಹಿಕ ಸಂಬಂಧಗಳನ್ನು ಏರ್ಪಡಿಸಿಕೊಂಡಿದ್ದರು ಎಂಬುದನ್ನು ಸಾಬೀತುಪಡಿಸುವ ದಾಖಲೆಗಳ ಸರಣಿಯನ್ನೇ ಸಲ್ಲಿಸಿದ್ದಾರೆ. ಕೇವಲ ಒಬ್ಬ ವ್ಯಕ್ತಿ ಹಲವು ವಿವಾಹ ಮಾಡಿಕೊಂಡಿದ್ದಾನೆ ಎಂಬ ಕಾರಣದಿಂದಲೇ ಆತನ ಚಾರಿತ್ರ್ಯದ ಮೇಲಿನ ದೋಷಾರೋಪ ಮಾಡಲಾಗದು ಮತ್ತು ಆತ ಅಪರಾಧ ಎಸಗಿದ್ದಾನೆ ಎಂಬ ಊಹೆಗೆ ಆಧಾರವಾಗಲಾರದು. ಒಬ್ಬ ಮಹಿಳೆ ತನ್ನ ಹಿಂದಿನ ಪತಿಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದಾಳೆ ಎಂಬ ಕಾರಣಕ್ಕಾಗಿಯೇ, ಆಕೆ ನಂತರ ಸಲ್ಲಿಸುವ ದೂರು ಪರಿಗಣನೆಗೆ ಅರ್ಹವಲ್ಲ ಎಂದು ಹೇಳಲಾಗುವುದಿಲ್ಲ ಎಂದು ಪೀಠ ಹೇಳಿದೆ. ಅಲ್ಲದೆ, ಪ್ರತಿಯೊಂದು ದೂರು ಕೂಡ ಅದರಲ್ಲಿ ಮಾಡಲಾದ ಆರೋಪಗಳು ಮತ್ತು ಆ ಆರೋಪಗಳನ್ನು ಬೆಂಬಲಿಸುವ ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ನಿರ್ಧಾರವಾಗಬೇಕು ಎಂದು ಪೀಠ ತಿಳಿಸಿದೆ.

ಅರ್ಜಿದಾರರು ಉಲ್ಲೇಖಿಸುವ ಹಿಂದಿನ ನಡವಳಿಕೆಯು ಪ್ರಕರಣದ ಹಿನ್ನೆಲೆಯನ್ನು ಒದಗಿಸಬಹುದೇ ಹೊರತು, ಆರೋಪಿಸಲಾದ ಅಪರಾಧಗಳು ಮೇಲ್ನೋಟಕ್ಕೆ ಕಂಡು ಬರುತ್ತವೆಯೇ ಎಂದು ಪರಿಶೀಲಿಸಬೇಕೆಂಬ ಕಾನೂನುಬದ್ಧ ಅಗತ್ಯಕ್ಕೆ ಅದು ಪರ್ಯಾಯವಾಗಲಾರದು ಎಂದು ಪೀಠ ಹೇಳಿದೆ.

ಅಲ್ಲದೆ, ಆರೋಪವೊಂದನ್ನು ಅದರ ಮೇಲ್ನೋಟದ ಮೌಲ್ಯದಲ್ಲೇ ಸ್ವೀಕರಿಸಿದರೂ ಅದರಲ್ಲಿ ಅಪರಾಧವೊಂದಕ್ಕೆ ಅಗತ್ಯವಾದ ಮೂಲಭೂತ ಅಂಶಗಳು ಇಲ್ಲದಿದ್ದರೆ, ಅಂತಹ ಆರೋಪಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯು ಹೊಸ ಜೀವ ತುಂಬಲಾರದು. ಹಾಗಾಗಿ, ದೂರುದಾರೆಯು ಅರ್ಜಿದಾರರ ವಿರುದ್ಧ ಕೈಗೊಂಡಿರುವ ಕಾನೂನು ಕ್ರಮವನ್ನು ಬೇರೊಂದು ಉದ್ದೇಶಕ್ಕಾಗಿ ಕೈಗೊಳ್ಳಲಾಗಿದೆ ಎಂಬ ವಾದಕ್ಕೆ ಮಹತ್ವ ಬರುತ್ತದೆ. ಇದರಿಂದ ಅರ್ಜಿದಾರರ ವಿರುದ್ಧದ ವಿಚಾರಣೆ ಮುಂದುವರಿಸಲು ಅನುಮತಿಸಿದರೆ, ಅದು ಕಾನೂನು ಪ್ರಕ್ರಿಯೆ ದುರುಪಯೋಗವಾಗುತ್ತದೆ ಎಂದು ನುಡಿದು ಅರ್ಜಿದಾರರ ವಿರುದ್ಧದ ಉಡುಪಿಯ 2ನೇ ಹೆಚ್ಚುವರಿ ಸಿವಿಲ್‌ ಮತ್ತು ಎಸಿಜೆಎಂ ಕೋರ್ಟ್‌ ಮುಂದಿದ್ದ ವಿಚಾರಣೆ ರದ್ದುಪಡಿಸಿದೆ.