ಬಳ್ಳಾರಿ: ಅಂತ್ಯ ಸಂಸ್ಕಾರಕ್ಕಾಗಿ ತೆಪ್ಪದಲ್ಲಿ ಶವ ಸಾಗಾಟ
ಕಂಪ್ಲಿ ಕೋಟೆಯ ಸ್ಮಶಾನಕ್ಕೆ ಶವ ತೆಗೆದುಕೊಂಡು ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆ ಶವವನ್ನು ತೆಪ್ಪದಲ್ಲಿ ಹಾಕಿಕೊಂಡು ಹೋಗಲಾಗಿದೆ.
ಕಂಪ್ಲಿ(ಜು.22): ತುಂಗಭದ್ರಾ ಜಲಾಶಯದಿಂದ ಅಧಿಕ ನೀರು ಬಿಡುಗಡೆಗೊಳಿಸಿದ್ದರಿಂದ ಕಂಪ್ಲಿ ಕೋಟೆಯ ನದಿ ಪಾತ್ರದ ಬಳಿ ಅಂತ್ಯಕ್ರಿಯೆಗೆಂದು ಶವವನ್ನು ತೆಪ್ಪದಲ್ಲಿ ಹಾಕಿಕೊಂಡು ಹೋಗಿರುವ ಘಟನೆ ಬುಧವಾರ ಸಂಜೆ ಜರುಗಿದೆ.
ದಮ್ಮೂರು ಫಕ್ಕೀರಮ್ಮ (72) ಮೃತರಾಗಿದ್ದರು. ಕಂಪ್ಲಿ ಕೋಟೆಯ ಸ್ಮಶಾನಕ್ಕೆ ಶವ ತೆಗೆದುಕೊಂಡು ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆ ಶವವನ್ನು ತೆಪ್ಪದಲ್ಲಿ ಹಾಕಿಕೊಂಡು ಹೋಗಲಾಗಿದೆ.
ಪ್ರತಿ ಬಾರಿ ತುಂಗಭದ್ರಾ ನದಿಗೆ ನೀರು ಬಂದಾಗಲೆಲ್ಲ ಸ್ಮಶಾನಕ್ಕೆ ಹೋಗುವ ರಸ್ತೆ ಜಲಾವೃತವಾಗುತ್ತದೆ. ಇದರಿಂದಾಗಿ ಈ ಸ್ಮಶಾನದ ಬಳಿ ಆರ್ಯವೈಶ್ಯ ಸಮಾಜ, ಬ್ರಾಹ್ಮಣ ಸಮಾಜ, ತೊಗಟಿವೀರ ಕ್ಷತ್ರಿಯ ಸಮಾಜ, ಜೈನ್ ಸಮಾಜ,ಗಂಗಾಮತ ಸಮಾಜ ಸೇರಿದಂತೆ ಇತರೆ ಸಮಾಜದವರು ಮೃತರ ಶವಸಂಸ್ಕಾರಕ್ಕೆಂದು ತೆರಳಲು ಸಮಸ್ಯೆಯಾಗುತ್ತದಲ್ಲದೇ ಶವವನ್ನು ತೆಪ್ಪದಲ್ಲಿ ಹಾಕಿಕೊಂಡು ಹೋಗುವಂತಾಗಿದೆ. ಈ ಕುರಿತು ಸಂಬಂಧ ಪಟ್ಟಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ಎತ್ತರಿಸಲು ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು!
ತುಂಗಭದ್ರಾ ನದಿಯಿಂದ ಪ್ರತಿ ಬಾರಿ ನೀರು ಬಂದಾಗ ಕಂಪ್ಲಿ ಕೋಟೆಯ ನದಿಪಾತ್ರದ ಬಳಿಯ ಸ್ಮಶಾನಕ್ಕೆ ಅಂತ್ಯಕ್ರಿಯೆಗೆಂದು ತೆರಳಲು ಸಮಸ್ಯೆಯಾಗುತ್ತದೆ. ಅಲ್ಲದೇ ನೀರಿನ ಪ್ರಮಾಣ ಹೆಚ್ಚಿದ್ದರೆ ಸ್ಮಶಾನದಲ್ಲೂ ನೀರು ನುಗ್ಗಿರುತ್ತದೆ. ಸ್ಮಶಾನದ ರಸ್ತೆಯನ್ನು ಎತ್ತರಿಸಬೇಕು. ಇನ್ನು ಸ್ಮಶಾನದ ಸುತ್ತಲು ತಡೆಗೋಡೆ ನಿರ್ಮಿಸುವ ಮೂಲಕ ಸ್ಮಶಾನದ ಒಳಗಡೆ ನೀರು ನುಗ್ಗದಂತೆ ಕ್ರಮಕೈಗೊಳ್ಳಬೇಕು ಅಂತ ಗಂಗಾಮತ ಸಮಾಜದ ಮುಖಂಡ ಬಿ.ಸಿದ್ದಪ್ಪ ತಿಳಿಸಿದ್ದಾರೆ.