ಬಳ್ಳಾರಿ(ಫೆ.16): ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಕಾರು ಚಲಾಯಿಸುತ್ತಿದ್ದ ರಾಹುಲ್‌ ಎಂಬಾತನನ್ನು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿ, ಘಟನಾ ಸ್ಥಳಕ್ಕೆ ಕರೆತರಲಾಗಿದೆ. ಬಳಿಕ ಹೊಸಪೇಟೆಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆತನಿಗೆ ಜಾಮೀನು ಲಭಿಸಿತು.

ಪ್ರಕರಣದ ತನಿಖೆಗಾಗಿ ಬೆಂಗಳೂರಿಗೆ ತೆರಳಿದ್ದ ಸಂಡೂರು ಸಿಪಿಐ ಎಚ್‌. ಶೇಖರಪ್ಪ ನೇತೃತ್ವದ ತಂಡ ಅಪಘಾತ ಪಡಿಸಿದ ಕಾರು ಚಾಲಕ ರಾಹುಲ್‌ನನ್ನು ಬಂಧಿಸಿ, ಮರಿಯಮ್ಮನಹಳ್ಳಿಗೆ ಶನಿವಾರ ಕರೆ ತಂದಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಈ ವೇಳೆ ನ್ಯಾಯಾಲಯ ಚಾಲಕನಿಗೆ ಜಾಮೀನು ನೀಡಿದೆ.

ಹೊಸಪೇಟೆ ಕಾರು ಅಪಘಾತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಸಂಡೂರು ಸಿಪಿಐ ನೇತೃತ್ವದ ತಂಡ ಬೆಂಗಳೂರಿಗೆ ತೆರಳಿ ವಿಚಾರಣೆ ನಡೆಸಿದರೆ, ಇನ್ನೊಂದು ತಂಡ ಹಂಪಿ, ವಿರೂಪಾಪುರಗಡ್ಡೆ ಸೇರಿದಂತೆ ಹಲವೆಡೆ ಭೇಟಿ ನೀಡಿ ಪರಿಶೀಲಿಸಿದೆ. ಅವರು ಎಲ್ಲಿ ಭೇಟಿ ನೀಡಿದ್ದರು. ಎಲ್ಲಿ ವಾಸಿಸಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಅಪಘಾತವಾದ ಬಳಿಕ ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ಹೋಗುವ ಮೊದಲು ಖಾಸಗಿ ಆಸ್ಪತ್ರೆಗೆ (ಮೈತ್ರಿ ಆಸ್ಪತ್ರೆ) ಹೋಗಿದ್ದರು ಎಂದು ಹೇಳಲಾಗುತ್ತಿದೆಯಾದರೂ ಆಸ್ಪತ್ರೆಯಲ್ಲಿ ಯಾವ ದಾಖಲೆಯೂ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿದ್ದ ಸಿಸಿ ಟಿವಿಯಲ್ಲೂ ಗಾಯಾಳುಗಳು ಬಂದಿರುವುದು ಕಂಡು ಬರುತ್ತಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸಪೇಟೆ ಬಳಿ ಕಾರು ಅಪಘಾತ: ತನಿಖೆ ಚುರುಕು, ಬೆಂಗಳೂರಿಗೆ ತಂಡ

ಸಂಡೂರು ಸಿಪಿಐ ಎಚ್‌. ಶೇಖರಪ್ಪ ಅವರು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರ ಅಳಿಯನಾಗಿದ್ದು, ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿರುವ ಬಗ್ಗೆಯೂ ಅಪಸ್ವರ ಎದ್ದಿತ್ತು. ಸಚಿವರ ಪುತ್ರನ ಹೆಸರು ಇದರಲ್ಲಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನ್ಯಾಯಸಮ್ಮತವಾಗದು ಎಂಬ ಆರೋಪಕ್ಕೂ ಪೊಲೀಸರು ಸ್ಪಷ್ಟನೆ ನೀಡಿದ್ದು, ಮರಿಯಮ್ಮನಹಳ್ಳಿ ಠಾಣೆ ಸಂಡೂರು ವಿಭಾಗಕ್ಕೆ ಬರುವುದರಿಂದ ಅವರಿಂದಲೇ ತನಿಖೆ ನಡೆಸಬೇಕಾಗುತ್ತದೆ. ಇದರಲ್ಲಿ ತಾರತಮ್ಯ ಮಾಡುವ ಪ್ರಶ್ನೆ ಉದ್ಭವಿಸದು ಎಂದು ಸ್ಪಷ್ಟಪಡಿಸಿದ್ದಾರೆ.

ಮೃತ ರವಿ ನಾಯ್ಕ ಕುಟುಂಬದ ಕಣ್ಣೀರು.

ರವಿ ನಾಯ್ಕನನ್ನು ಹೆಚ್ಚು ಪೋಷಣೆ ಮಾಡಿದ ಅಜ್ಜಿ, ತಂದೆ-ತಾಯಿ ಹಾಗೂ ಕುಟುಂಬ ಸದಸ್ಯರು ರವಿನಾಯ್ಕ ಇನ್ನಿಲ್ಲ ಎಂಬ ನೋವಿನಲ್ಲಿ ಮುಳುಗಿದ್ದಾರೆ. ನೀಗದ ನೋವಲ್ಲೂ ಮೃತ ರವಿನಾಯ್ಕ ಪೋಷಕರು ತಿಥಿ ಕಾರ್ಯದ ಸಿದ್ಧತೆ ನಡೆಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮೃತ ರವಿನಾಯ್ಕ ಅತ್ತೆ ಭಾರತಿಬಾಯಿ, ಅಪಘಾತವಾದ ದಿನ ನಮ್ಮ ಆಸ್ಪತ್ರೆಗೆ ಅನೇಕರು ಬಂದಿದ್ದು ನಿಜ. ಅವರನ್ನು ತೋರಿಸಿದರೆ ಗುರುತು ಹಿಡಿಯುತ್ತೇನೆ ಎಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಅಪಘಾತವಾದ ಕಾರ್‌ನಲ್ಲಿ ಸಚಿವ ಆರ್‌. ಅಶೋಕ್‌ ಅವರ ಪುತ್ರ ಇದ್ದನೋ ಇಲ್ಲವೋ? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಪೊಲೀಸ್‌ ತನಿಖೆಯ ಕಡೆ ಎಲ್ಲರ ದೃಷ್ಟಿನೆಟ್ಟಿದೆ.