ಬಾಗಲಕೋಟೆ: ಕಬ್ಬು ನುರಿಸದ ಕಾರ್ಖಾನೆ, ರೈತರಿಗೆ ಸಂಕಷ್ಟ..!

ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣ ನೀಡದೇ ಇರುವುದು, ಹೊಸ ದರ ನಿಗದಿ ಪಡಿಸುವಲ್ಲಿ ಪರಸ್ಪರ ಮಾತುಕತೆ ನಡೆಸದೇ ಇರುವುದು ಇದಕ್ಕೆ ಪ್ರಮುಖ ಕಾರಣ. 

Cane Crushing in Sugar Factories Not Yet Started in Bagalkot grg

ಈಶ್ವರ ಶೆಟ್ಟರ

ಬಾಗಲಕೋಟೆ(ಅ.27): ಜಿಲ್ಲೆಯಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆಗಳು ಆರಂಭಗೊಂಡು ಕಬ್ಬು ನುರಿಸುವ ಸಂದರ್ಭದಲ್ಲಿ ಮುಧೋಳ, ಬೀಳಗಿ ಹಾಗೂ ಜಮಖಂಡಿ ತಾಲೂಕಿನ ಕೆಲ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಇದಕ್ಕೆ ಮಾಲೀಕರ ಹಾಗೂ ರೈತ ಸಂಘಟನೆಗಳ ನಡುವಿನ ಬೆಲೆನಿಗದಿ ಸಂಬಂಧಿಸಿದ ಮಾತುಕತೆ ಇತ್ಯರ್ಥಗೊಳ್ಳದೆ ಇರುವುದು ಹಾಗೂ ಕಬ್ಬು ಬೆಳೆಗಾರರ ಹಾಗೂ ಆಡಳಿತ ಮಂಡಳಿಯ ನಡುವಿನ ಹಲವು ಭಿನ್ನನಿಲುವು ಮತ್ತು ಹೋರಾಟಗಳು ಕಾರಣವಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಉಭಯತರರು ಮುಂಬರುವ ದಿನಗಳಲ್ಲಿನ ಸವಾಲುಗಳನ್ನು ಎದುರಿಸುವುದು ನಿಶ್ಚಿತ.

ಬಾಗಲಕೋಟೆ ಜಿಲ್ಲೆ ಸಕ್ಕರೆ ಉತ್ಪಾದನೆ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಲ್ಲಿ ಮಾಡಿದ ಸಾಧನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇಲ್ಲಿಯವರೆಗೂ ಕಬ್ಬು ಬೆಳೆಗಾರರು ಹಾಗೂ ಆಡಳಿತ ಮಂಡಳಿಯವರು ಹಲವು ಭಿನ್ನನಿಲುವುಗಳ ನಡುವೆಯೇ ಪರಸ್ಪರ ಹೊಂದಾಣಿಕೆಯಿಂದ ಸಮಸ್ಯೆ ಪರಿಹರಿಸಿಕೊಂಡು ಅಂತಿಮವಾಗಿ ಕಬ್ಬು ನುರಿಸುವ ಕಾರ್ಯ ಆರಂಭಿಸಿ ಉತ್ತಮ ಸಾಧನೆಗೆ ಕಾರಣರಾಗಿದ್ದಾರೆ.

ಮತ್ತೊಮ್ಮೆ ಬಾದಾಮಿಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಸಿದ್ದು ಆಪ್ತ ಹೊಳಬಸು ಶೆಟ್ಟರ

ಪ್ರಸ್ತುತ ಸಮಸ್ಯೆ ಏನು?:

ಜಿಲ್ಲೆಯಲ್ಲಿ ಅದರಲ್ಲೂ ಮುಧೋಳ, ಜಮಖಂಡಿ ಭಾಗದಲ್ಲಿ ಬೆಳೆಯುವ ಹೆಚ್ಚಿನ ಪ್ರಮಾಣದ ಕಬ್ಬನ್ನು ನುರಿಸುವ ಆ ಭಾಗದ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಮತ್ತು ರೈತರ ನಡುವಿನ ಸಂಬಂಧಗಳು ಕಬ್ಬು ನುರಿಸುವ ಸಂದರ್ಭದಲ್ಲಿ ಮಾತ್ರ ವಿಕೋಪಕ್ಕೆ ತಿರುಗುತ್ತವೆ. ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣ ನೀಡದೇ ಇರುವುದು, ಹೊಸ ದರ ನಿಗದಿ ಪಡಿಸುವಲ್ಲಿ ಪರಸ್ಪರ ಮಾತುಕತೆ ನಡೆಸದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿವೆ. ರೈತರನ್ನು ಪ್ರತಿನಿಧಿಸುವ ಮುಂಚೂಣಿ ನಾಯಕರು ತೆಗೆದುಕೊಳ್ಳುವ ನಿರ್ಧಾರದಲ್ಲಿನ ವಿಳಂಬ ಕೂಡ ಕಬ್ಬು ಬೆಳೆಗಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲು ಇನ್ನೊಂದು ಮುಖ್ಯ ಕಾರಣವಾಗಿದೆ. ಈ ಬಾರಿಯೂ ಇದೇ ಸಮಸ್ಯೆ ಎದುರಾಗಿದೆ.

ಮುಧೋಳದಲ್ಲಿ ಏಕೆ ಈ ಸಮಸ್ಯೆ:

ಮುಧೋಳ ಪ್ರಮುಖವಾಗಿ ಈ ಭಾಗದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುವ ಪ್ರಮುಖ ಮಾರ್ಗ. ಅದರಲ್ಲೂ ಸಮೀರವಾಡಿ, ನಿರಾಣಿ, ಪ್ರಭುಲಿಂಗೇಶ್ವರ, ಶಾಮನೂರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುವ ರೈತರು ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಈ ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿ ಕಬ್ಬು ಬೆಳೆಗಾರರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ. ಹೀಗಾಗಿ, ಕಬ್ಬುಬೆಳೆಗಾರರು ಹಾಗೂ ಕಾರ್ಖಾನೆಗಳ ಮಾಲೀಕರ ನಡುವೆ ಸಮಸ್ಯೆಗಳೇನಾದರೂ ಉಂಟಾದರೆ ಈ ಮಾರ್ಗದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭಟನೆ, ರಸ್ತೆತಡೆಗಳು ನಡೆಯುತ್ತವೆ.

ಕಾಣದ ಕೈಗಳ ಕೈವಾಡದಿಂದ ಸಕ್ಕರೆ ಕಾರ್ಖಾನೆಯ ಆಸ್ತಿ-ಪಾಸ್ತಿಗೂ ಹಾನಿ:

ಕಬ್ಬುಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿ ಒಮ್ಮತದ ನಿರ್ಧಾರ ವಿಳಂಬವಾದಾಗ ಕೆಲ ಹೋರಾಟಗಾರರು ಸಕ್ಕರೆ ಕಾರ್ಖಾನೆಗಳ ಆವರಣದಲ್ಲಿನ ವಾಹನಗಳು, ಆಸ್ತಿ-ಪಾಸ್ತಿಗೂ ಹಾನಿ ಮಾಡಿದ ಪ್ರಕರಣಗಳು ಕೂಡ ಈಚೆಗೆ ನಡೆದಿದ್ದು, ಈ ಕುರಿತು ಸಮಗ್ರ ತನಿಖೆಗೆ ಕಾರ್ಖಾನೆ ಮಾಲೀಕರು ಆಗ್ರಹಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ನಿಲ್ಲದ ಮೊಸಳೆ ಆತಂಕ: ಭಯಭೀತರಾದ ಜನತೆ..!

ಕೆಲ ಕಾಣದ ಕೈಗಳ ಕೈವಾಡದಿಂದ ನಡೆಯುವ ಇಂಥ ಘಟನೆಗಳಿಂದ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಭಿನ್ನಾಭಿಪ್ರಾಯಗಳು ಮತ್ತಷ್ಟುಹೆಚ್ಚುತ್ತಿವೆ. ನಮಗಾದ ಹಾನಿಗೆ ಹೊಣೆ ಯಾರು ಎಂದು ಕಾರ್ಖಾನೆಯ ಮಾಲೀಕರು ಪ್ರಶ್ನಿಸುವಂತಾಗಿದೆ.

ಸದ್ಯ ಆಗಬೇಕಾದದ್ದು ಇದು:

ಪ್ರತಿ ವರ್ಷವೂ ತಲೆದೋರುವ ಈ ಸಂಘರ್ಷವನ್ನು ತಪ್ಪಿಸಲು ಕಬ್ಬು ನುರಿಸುವ ಹಂಗಾಮು ಆರಂಭವಾಗುವ ಮುನ್ನವೇ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ನಡುವೆ ಒಮ್ಮತದ ಅಭಿಪ್ರಾಯ ಮೂಡುವ ನಿಟ್ಟಿನಲ್ಲಿ ಮಾತುಕತೆಗಳು ಯಶಸ್ವಿಯಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕಾರ್ಖಾನೆ ಪ್ರತಿನಿಧಿಗಳು ಹಾಗೂ ರೈತ ಮುಖಂಡರು ಕರ್ತೃತ್ವಶಕ್ತಿ ಪ್ರದರ್ಶಿಸಿ ಸಮನ್ವಯ ಮಾರ್ಗವನ್ನು ಕಂಡುಕೊಳ್ಳಬೇಕಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿವೆ. ಪಕ್ಕದ ಬೆಳಗಾವಿ, ವಿಜಯಪುರ ಅಲ್ಲದೇ ಬಾಗಲಕೊಟೆ ಜಿಲ್ಲೆಯ ಉಳಿದ ತಾಲೂಕಿನ ಕಾರ್ಖಾನೆಗಳು ಕೂಡ ಕಬ್ಬು ನುರಿಸುವ ಹಂಗಾಮ ಪ್ರಾರಂಭಿಸಿವೆ. ಆದರೆ, ಮುಧೋಳ ತಾಲೂಕು ಹಾಗೂ ಸುತ್ತಮುತ್ತಲಿನ ಕಾರ್ಖಾನೆಗಳ ಪ್ರಾರಂಭಕ್ಕೆ ಮಾತ್ರ ಗ್ರಹಣ ಹಿಡಿದಿದ್ದು, ಬೆಳೆದ ಪೈರು ರೈತನ ಪಾಲಿಗೆ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ ಆಗಿದೆ ಅಂತ ನೊಂದ ರೈತರ ಆಕ್ರೋಶದ ನುಡಿಗಳು. 
 

Latest Videos
Follow Us:
Download App:
  • android
  • ios