ಕಳಪೆ ಕಾಮಗಾರಿಯನ್ನು ಮುಚ್ಚಿಹಾಕಲು ಬಿಜೆಪಿ ಪ್ರಯತ್ನ, ನಾರಾಯಣಗೌಡ ಪಕ್ಷ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ: ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ 

ಮಂಡ್ಯ(ಮಾ.10): ನೂತನ ದಶಪಥ ಹೆದ್ದಾರಿ ರಸ್ತೆ ಕಳಪೆಯಾಗಿದೆ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಚುನಾವಣೆಯನ್ನು ಮುಂದಿಟ್ಟುಕೊಂಡು ಪ್ರಧಾನಿಯವರಿಂದ ಲೋಕಾರ್ಪಣೆ ಮಾಡಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಕೂಡಲೇ ಮೋದಿ ಅವರು ಹೆದ್ದಾರಿ ಲೋಕಾರ್ಪಣೆ ಕಾರ್ಯಕ್ರಮ ರದ್ದು ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಒತ್ತಾಯಿಸಿದರು.

ತರಾತುರಿಯಲ್ಲಿ ಹೆದ್ದಾರಿ ಲೋಕಾರ್ಪಣೆ ಮಾಡುತಿರುವುದು ಕಳಪೆ ಕಾಮಗಾರಿ ಮುಚ್ಚುವ ಪ್ರಯತ್ನವಾಗಿದೆ. ಮಂಡ್ಯ ಬೈಪಾಸ್‌ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ ಮಾಡುತ್ತಿರುವುದು ನೋವುಂಟುಮಾಡಿದೆ. ಪ್ರಧಾನಿ ಬರುತ್ತಾರೆಂಬ ಕಾರಣಕ್ಕೆ ಹತ್ತು ಕೋಟಿ ರು. ವೆಚ್ಚದ ಕಾಮಗಾರಿಯನ್ನು ಟೆಂಡರ್‌ ಕರೆಯದೆ ಮಾಡುತ್ತಿದ್ದಾರೆ. ಮೋದಿ ರೋಡ್‌ ಶೋ ಮಾಡುವ ಒಂದು ಪಥದ ರಸ್ತೆಗೆ ಡಾಂಬರು ಹಾಕಲಾಗುತ್ತಿದೆ. ಇಂತಹ ಕೆಟ್ಟವ್ಯವಸ್ಥೆಯಲ್ಲಿ ಪ್ರಧಾನಿಯಿಂದ ಹೆದ್ದಾರಿ ಲೋಕಾರ್ಪಣೆಯಾಗಬೇಕಾ?. ಇದಕ್ಕೆ ರಾಜ್ಯ ಸರ್ಕಾರ ಕಾರಣನೋ, ಆರ್‌ಎಸ್‌ಎಸ್‌ ಕಾರಣನೋ, ಚುನಾವಣೆಗಾಗಿ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮಾ.12ರಂದು ದಶಪಥ ಹೆದ್ದಾರಿ ಉದ್ಘಾಟನೆ: ಮಂಡ್ಯ ಮಾರ್ಗದ ವಾಹನ ಸಂಚಾರ ಬದಲಾವಣೆ

ಇನ್ನೂ ಕಾಲ ಮಿಂಚಿಲ್ಲ. ಈ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮವನ್ನು ರದ್ದು ಮಾಡಿ. ಮೋದಿ ಅವರಿಗೆ ಈಗಲಾದರೂ ಗೌರವ ಸಿಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರುವ ವಿಶ್ವಾಸವಿದೆ. ಆ ವೇಳೆ ಹೆದ್ದಾರಿ ನಿರ್ಮಾಣದಲ್ಲಿ ನಡೆದಿರುವ ಕಳಪೆ ಕಾಮಗಾರಿ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದರು.

ಮೋದಿ ರೋಡ್‌ ಶೋಗಾಗಿ ಮರಗಳ ಮಾರಣ ಹೋಮ ನಡೆಸಿರುವುದಕ್ಕೆ ಕಿಡಿಕಾರಿದ ಚಲುವರಾಯಸ್ವಾಮಿ, ಪರಿಸರ ನಿಯಂತ್ರಣ ಮಂಡಳಿ ಏನು ಮಾಡುತ್ತಿದೆ?, ಅರಣ್ಯ ಇಲಾಖೆ ಏಕೆ ಮೌನ ವಹಿಸಿದೆ. ಈ ಪರಿಸರ ನಾಶಕ್ಕೆ ಯಾರು ಕಾರಣ. ರೋಡ್‌ ಶೋಗಾಗಿ ಮರಗಳನ್ನು ಕಡಿಯಬೇಕಾದ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ನನಗೆ ಗೊತ್ತಿಲ್ಲ:

ಸಚಿವ ನಾರಾಯಣಗೌಡರು ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ಕೇಳಿದಾಗ, ನಾರಾಯಣಗೌಡರು ಸಿಎಲ್‌ಪಿ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತನಾಡಿದ್ದಾರೆ ಎಂಬ ಸುದ್ದಿ ಕೇಳಿದ್ದೇನೆ. ಆ ವಿಚಾರ ಇನ್ನೂ ನನ್ನ ಗಮನಕ್ಕೆ ಬಂದಿಲ್ಲ. ಅದರ ವಾಸ್ತವತೆ ಬಗ್ಗೆ ನನಗೆ ಗೊತ್ತಿಲ್ಲ, ಹಾಗಾಗಿ ಆ ವಿಚಾರದ ಬಗ್ಗೆ ನಾನು ಮಾತನಾಡೋಲ್ಲ ಎಂದರು.

ಒಕ್ಕಲಿಗರು ಒಗ್ಗಟ್ಟಿನಿಂದ ಕಾಂಗ್ರೆಸ್‌ ಬೆಂಬಲಿಸಿ: ಸಂಸದ ಡಿ.ಕೆ.ಸುರೇಶ್‌

ಕೆ.ಆರ್‌.ಪೇಟೆಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌ಗೆ ಬಳೆ ಕೊಟ್ಟು, ಕಾರಿಗೆ ಮೊಟ್ಟೆಎಸೆದ ವಿಚಾರವಾಗಿ, ಘಟನೆ ಕುರಿತಂತೆ ಕೆಪಿಸಿಸಿಯಿಂದ ವರದಿ ಕೇಳಲಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರ ಬಗ್ಗೆ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳುತ್ತದೆ ಎಂದರು.

ಸುಮಲತಾ ಬಿಜೆಪಿ ಸೇರ್ಪಡೆ ಕುರಿತು, ಈ ವಿಚಾರವಾಗಿ ಅವರು ನನ್ನ ಜೊತೆ ಚರ್ಚೆ ಮಾಡಿಲ್ಲ, ನಾನೂ ಅವರ ಜೊತೆ ಚರ್ಚೆ ಮಾಡಿಲ್ಲ. ಸುಮಲತಾ ಬಿಜೆಪಿ ಸೇರುವ ವಿಷಯ ಕೂಡ ನನ್ನ ಗಮನಕ್ಕೆ ಬಂದಿಲ್ಲ. ಸಂಸದೆ ಸುಮಲತಾ ಸ್ವತಂತ್ರರಿದ್ದಾರೆ. ಯಾವ ಪಕ್ಷ ಸೇರಬೇಕೆಂಬುದು ಅವರಿಗೆ ಬಿಟ್ಟವಿಚಾರ. ನಾವು ಅವರಿಗೆ ಒತ್ತಡ ಹೇರಲಾಗುವುದಿಲ್ಲ ಎಂದಷ್ಟೇ ಹೇಳಿದರು.