ಮಂಡ್ಯ[ಅ.23]: ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಎದುರಿಸುತ್ತಿರುವ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿಗೆ ಗೆಲುವಿನ ಗುರಿಯೊಂದೇ ಹೆಣಗಾಟಕ್ಕೆ ದಾರಿ ಮಾಡಿದೆ.

ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿರುವ ಶಿವರಾಮೇ ಗೌಡರಿಗೂ ಈ ಗೆಲವು ಅನಿವಾರ್ಯವಾಗಿದೆ. ಆದರೆ ಬಿಜೆಪಿ ಮಂಡ್ಯದಲ್ಲಿ ಖಾತೆ ಆರಂಭಿಸುವ ಹಾಗೂ ಕೇಂದ್ರ ಸರ್ಕಾರದ ಮರ್ಯಾದೆ ಉಳಿಸಿಕೊಳ್ಳಲು ಈ  ಚುನಾವಣೆಯನ್ನು ಗೆಲ್ಲಲೇ ಬೇಕಾಗಿದೆ.

ಇಂತಹ ಕಾರಣಗಳಿಗಾಗಿ ಈ ಉಪ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳ ನಾಯಕರು,ಅಭ್ಯರ್ಥಿಗಳು ಮಾತ್ರವಲ್ಲ ಈ ಬಾರಿ ಪಕ್ಷೇತರ ಅಭ್ಯರ್ಥಿಗಳು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆಂಬುದು ವಿಶೇಷ ಸಂಗತಿ. ಜೆಡಿಎಸ್ ಸ್ಥಳೀಯ ನಾಯಕರು ಪ್ರಚಾರದ ಅಖಾಡಕ್ಕೆ ಇಳಿದ್ದಾರೆ. ಕಾಂಗ್ರೆಸ್ ನಾಯಕರೂ ಯಾರೂ ಪ್ರಚಾರ ಕಣಕ್ಕೆ ಸುಳಿದಿಲ್ಲ. ಬಿಜೆಪಿಯ ಪ್ರಮುಖ ನಾಯಕರು ಜಿಲ್ಲೆಯಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಗೆಲುವಿನ ಹೊಣೆ ಈ ಬಾರಿ ಸಾಮೂಹಿಕ ನಾಯಕತ್ವದಲ್ಲಿ ಅಡಗಿದೆ. ಇಬ್ಬರು ಸಚಿವರು 8 ಮಂದಿ ಜೆಡಿಎಸ್ ಶಾಸಕರು ಈ ಗೆಲುವಿಗೆ ಪಾಲುದಾರರಾಗಲಿದ್ದಾರೆ. ಸರ್ಕಾರವಿದೆ. ಮಂಡ್ಯ ಜೆಡಿಎಸ್ ಭದ್ರ ಕೋಟೆಯಾಗಿರುವುದರಿಂದ ಗೆಲುವು ಸುಲಭ ತುತ್ತು ಎಂದು ಭಾವಿಸಿ ನಿರ್ಲಕ್ಷ್ಯ ತೋರದೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಮತದಾರರ ಮನ ಗೆದ್ದು ನಮ್ಮ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದು ಜಿಲ್ಲಾ ಮಂತ್ರಿ ಪುಟ್ಟರಾಜು ಪ್ರಚಾರದ ವೇಳೆ
ಹೇಳುವ ಮಾತಿನಲ್ಲಿ ತೂಕವಿದೆ.

13 ದಿನ ಬಾಕಿ: ಉಪ ಚುನಾವಣೆಯ ಮತದಾನಕ್ಕೆ ಇನ್ನೂ 13 ದಿನಗಳು ಮಾತ್ರ ಉಳಿದಿವೆ. ಮತದಾನಕ್ಕೆ ಎರಡು ದಿನ ಮೊದಲೇ(ನ.1) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಕಡಮೆ ಅವಧಿಯಲ್ಲಿ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪ್ರತಿ ಹಳ್ಳಿಗಳನ್ನೂ ಸುತ್ತಿ ಮತ ಹಾಕುವಂತೆ ಕೋರುವ ಅಗತ್ಯತೆ ಇದೆ. ಹೀಗಾಗಿ ಗೆಲ್ಲುವ ಗುರಿ ಹೊಂದಿದ ನಾಯಕರೆಲ್ಲರೂ ಉಸಿರು ಬಿಗಿ ಹಿಡಿದುಕೊಂಡು ಪ್ರಚಾರದ ಅಖಾಡಕ್ಕೆ ಇಳಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯನವರ ಪರವಾಗಿ ಮಾಜಿ ಸಿಎಂ ಬಿ. ಎಸ್.ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಮಾಜಿ ಸಚಿವರಾದ ಆರ್.ಅಶೋಕ್, ಸಿ.ಪಿ.ಯೋಗೇಶ್ವರ್, ಎಂ.ಶಿವಣ್ಣ ಸೇರಿದಂತೆ ಹಲವು ನಾಯಕರು ಜಿಲ್ಲೆಯಲ್ಲಿ ಒಂದು ಸುತ್ತು ಪ್ರಚಾರ ನಡೆಸಿ ಹೋಗಿದ್ದಾರೆ.

ಕೆ.ಆರ್.ಪೇಟೆ ಮತ್ತು ಮಂಡ್ಯ ನಗರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ಚುನಾವಣಾ ಪ್ರಚಾರ ನಡೆಸಿದರು. ಪಾಂಡವಪುರ ತಾಲೂಕಿನಲ್ಲಿ ಮೈಸೂರು ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ, ಸಂದೇಶ ಸ್ವಾಮಿ ಸೇರಿದಂತೆ ಹಲವರು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ತೊಡಗಿರುವುದು ಕಂಡು ಬಂದಿದೆ. ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದ ಬೂದನೂರು, ಕೀಲಾರ, ಬಸರಾಳು, ಹಲ್ಲೇಗೆರೆ, ಕೆರಗೋಡು ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದರು.

ಇಂದು ಬಿವೈಎಸ್ ಪ್ರಚಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಜಿಲ್ಲೆಯ ಹಲವೆಡೆ ಪ್ರಚಾರ ನಡೆಸಲಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 282 ಮಂದಿ ಸಂಸತ್ ಸದಸ್ಯರಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿರುವಂತೆ ಬಿಜೆಪಿ ಎಂದಿಗೂ ನಾಶವಾಗುವುದಿಲ್ಲ. ಜೆಡಿಎಸ್ ಕರ್ನಾಟಕದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ಆದರೆ, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದೆ. ದೇಶವನ್ನು ಉತ್ತಮವಾಗಿ ನಡೆಸುತ್ತಿದೆ ಎಂಬ ಅಂಶಗಳನ್ನು ಬಿಜೆಪಿ ನಾಯಕರು ತಮ್ಮ ಪ್ರಚಾರದಲ್ಲಿ ಹೇಳುತ್ತಿದ್ದಾರೆ.

ಬಿಜೆಪಿ ಚುನಾವಣಾ ಉಸ್ತುವಾರಿ ಇ.ಅಶ್ವತ್ ನಾರಾಯಣ್, ಮುಖಂಡರಾದ ಎನ್.ಶಿವಣ್ಣ, ಎಚ್. ಪಿ.ಮಹೇಶ್, ಕೃಷ್ಣ ಅಂಕಪ್ಪ, ಶಿವಕುಮಾರ್,ಆರಾಧ್ಯ, ರಾಜೇಗೌಡ ಪ್ರಚಾರದಲ್ಲಿ ಭಾಗವಹಿಸಿದ್ದಾರೆ.

(ಸಂಗ್ರಹ ಚಿತ್ರ)