Asianet Suvarna News Asianet Suvarna News

ಉತ್ತರಕನ್ನಡಕ್ಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ : ಕಾರವಾರ ಕುಮಟಾ ಮಧ್ಯೆ ಪೈಪೋಟಿ

ಉಡುಪಿಯ ಶಿರೂರಿನಲ್ಲಿ ನಡೆದ ಭೀಕರ ಅಪಘಾತದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲೇಬೇಕೆಂದು ಹೋರಾಟ ಹಾಗೂ ಟ್ವಿಟ್ಟರ್ ಅಭಿಯಾನ ನಡೆದಿದೆ. ಇದಕ್ಕೆ ರಾಜಕೀಯ ನಾಯಕರು ಬೆಂಬಲ ಸೂಚಿಸಿದ್ದಾರೆ. ಆದರೆ ಈ ಬೆಂಬಲದ ಬಗ್ಗೆ ಜನ ಅನುಮಾನ ವ್ಯಕ್ತಪಡಿಸಿದ್ದಾರೆ.

campaign for Multi speciality hospital for Uttara kannada, people suspects leaders support akb
Author
Karwar, First Published Jul 26, 2022, 11:59 PM IST

ಕಾರವಾರ: ಉಡುಪಿಯ ಶಿರೂರಿನಲ್ಲಿ ನಡೆದ ಭೀಕರ ಅಪಘಾತದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲೇಬೇಕೆಂದು ಹೋರಾಟ ಹಾಗೂ ಟ್ವಿಟ್ಟರ್ ಅಭಿಯಾನ ನಡೆದಿದೆ. ಇಷ್ಟು ವರ್ಷಗಳಿಂದ ಬೇಡಿಕೆಯಿದ್ದರೂ, ಘಟನೆಯ ಬಳಿಕ ಹೋರಾಟದ ಫಲವಾಗಿ ಜಿಲ್ಲೆಯ ಸಚಿವರು ಹಾಗೂ ಶಾಸಕರು ತಮ್ಮ ಬೆಂಬಲವನ್ನು ಕೂಡಾ ಸೂಚಿಸಿದ್ದಾರೆ. ಆದರೆ, ರಾಜಕೀಯ ಮುಖಂಡರ ಬೆಂಬಲ ಘೋಷಣೆ ಅಭಿಯಾನಕ್ಕೆ ತಡೆ ಹಾಕಲು ಎಂಬ ಆರೋಪ ವ್ಯಕ್ತವಾಗಿರುವುದಲ್ಲದೇ, ಒಂದೆಡೆ ಕಾರವಾರ, ಮತ್ತೊಂದೆಡೆ ಕುಮಟಾದಲ್ಲಿ ಈ ಆಸ್ಪತ್ರೆ ನಿರ್ಮಾಣಕ್ಕಾಗಿ ಟಗ್ ಆಫ್ ವಾರ್ ಪ್ರಾರಂಭಗೊಂಡಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ..

ರಾಜ್ಯದ ಎರಡನೇ ಅತೀ ದೊಡ್ಡ ಜಿಲ್ಲೆಯಾಗಿರುವ ಉತ್ತರಕನ್ನಡ ಜಿಲ್ಲೆ 12 ತಾಲೂಕುಗಳನ್ನು ಹೊಂದಿದೆ. ಖಾಸಗಿ ಆಸ್ಪತ್ರೆಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಕಾರಣ, ಜನರು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. ಇಷ್ಟೊಂದು ದೊಡ್ಡದಾಗಿರುವ ಈ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಈ ಕಾರಣದಿಂದಲೇ ಜಿಲ್ಲೆಯಲ್ಲಿ ಯಾವುದೇ ಅವಘಡಗಳು ನಡೆದರೂ ಮಣಿಪಾಲ ಅಥವಾ ಗೋವಾಕ್ಕೆ ಕರೆದುಕೊಂಡು ಹೋಗಬೇಕು. ಆದರೆ, ಮೊನ್ನೆಯಷ್ಟೇ ಜಿಲ್ಲೆಯ ಹೊನ್ನಾವರದಿಂದ ಉಡುಪಿಗೆ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಕೊಂಡೊಯ್ದಿದ್ದ ಆ್ಯಂಬುಲೆನ್ಸ್ ಶಿರೂರು ಟೋಲ್‌ಗೇಟ್‌ನಲ್ಲಿ ಅಪಘಾತಕ್ಕೀಡಾದ ಬಳಿಕ ಜನರ ಆಕ್ರೋಶ ದುಪ್ಪಟ್ಟಾಗಿದೆ. 

ಉತ್ತರಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಆಗಿಲ್ಲ? ಗಂಭೀರ ಕಾರಣ ಕೊಟ್ಟ ರೂಪಾಲಿ ನಾಯ್ಕ

ನಾಯಕರ ಬೆಂಬಲದ ಮೇಲೆಯೂ ಜನರ ಅನುಮಾನ
ಈ ಕಾರಣದಿಂದಲೇ ಜನರು ಪ್ರತಿಭಟನೆಯೊಂದಿಗೆ ಟ್ವಿಟ್ವರ್ ಅಭಿಯಾನ ಕೂಡಾ ನಡೆಸಿದ್ದರಿಂದ ಜನರ ಬೇಡಿಕೆ ಕೇಂದ್ರ ಸರಕಾರದವರೆಗೆ ತಲುಪಿದೆ. ಅಭಿಯಾನ ಪ್ರಾರಂಭವಾದ ಬಳಿಕ ಜಿಲ್ಲೆ ಸಚಿವರು, ಶಾಸಕರು ಹಾಗೂ ಇತರ ರಾಜಕೀಯ ಮುಖಂಡರು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಆದರೆ, ಜನಪ್ರತಿನಿಧಿಗಳು ತೋರಿರುವ ಈ ಬೆಂಬಲ ಅಭಿಯಾನವನ್ನು ತಡೆ ಹಿಡಿಯಲು ಎಂಬ ಆರೋಪ ವ್ಯಕ್ತವಾಗಿದೆ. ಇಷ್ಟು ವರ್ಷಗಳ ಕಾಲ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆಯಿದ್ದರೂ ಈ ಬಗ್ಗೆ ಹೆಚ್ಚಿನ ಧ್ವನಿ ಎತ್ತದ ಜನಪ್ರತಿನಿಧಿಗಳು ಇದೀಗ ಅವಘಡದ ಬಳಿಕ ಬೆಂಬಲ ಸೂಚಿಸಿರುವುದು ಜಿಲ್ಲೆಯ ಬಗ್ಗೆ ಅವರ ನಿರ್ಲಕ್ಷ್ಯ ತೋರ್ಪಡಿಸುತ್ತದೆ. ಬಿರುಸಿನಲ್ಲಿ ಸಾಗುವ ಅಭಿಯಾನ ದೊಡ್ಡ ಅಲೆಯಾಗಿ ಹೊಡೆಯುವ ಮೊದಲೇ ಬೆಂಬಲ ಸೂಚಿಸಿದರೆ ಸದ್ಯಕ್ಕೆ ಇದಕ್ಕೆ ತಡೆ ಬೀಳುತ್ತದೆ ಎಂಬುದು ಅವರ ಉದ್ದೇಶ. ಮುಂದಿನ ದಿನಗಳಲ್ಲಿ ಜನರು ಮತ್ತೆ ಶಾಂತರಾಗುತ್ತಾರೆ. ಬಳಿಕ ಯಾವಾಗ ಆಸ್ಪತ್ರೆ ಯಾವಾಗ ನಿರ್ಮಾಣವಾಗುತ್ತದೆ ಹಾಗೂ ಅದರ ಬಗ್ಗೆ ಫಾಲೋಅಪ್ ಯಾರೂ ಮಾಡಲ್ಲ ಎಂದು ಜನರು ಆರೋಪಿಸಿದ್ದಾರೆ.

ಇನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾವ ಕ್ಷೇತ್ರದಲ್ಲಿ ಆಗಬೇಕೆಂಬ ಪ್ರಶ್ನೆಯೂ ಸಾಕಷ್ಟು ಮೂಡಿದೆ. ಯಾಕಂದ್ರೆ ಹಲವರು ಭಟ್ಕಳದಿಂದ ಕಾರವಾರದವರೆಗೆ ಎರಡೂ ಕಡೆಯಿಂದ ಬರುವ ಜನರಿಗೆ ಕುಮಟಾವೇ ಹತ್ತಿರವಾಗುತ್ತದೆ. ಈ ಕಾರಣದಿಂದ ಕುಮಟಾದಲ್ಲೇ ಮಾಡಿದ್ರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಕುಮಟಾದ ಹೃದಯಭಾಗದಲ್ಲಿ 15ರಿಂದ 20 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ತಿಂಗಳಾಂತ್ಯದಲ್ಲಿ ಜಿಲ್ಲೆಯ ಸಚಿವರು, ಶಾಸಕರ ಜತೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು ಎಂದಿದ್ದಾರೆ. ಆದರೆ, ಮತ್ತಷ್ಟು ಜನರು ಜಿಲ್ಲೆಯ ಪ್ರಮುಖ ಕೇಂದ್ರವಾದ ಕಾರವಾರದಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಒತ್ತಾಯಿಸುತ್ತಿದ್ದಾರೆ.

ಉತ್ತರ ಕನ್ನಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ: ಪ್ರಧಾನಿ ಮೋದಿಗೆ ರಕ್ತದಿಂದ ಪತ್ರ ಬರೆಯಲು ನಿರ್ಧಾರ

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ ಇರೋದ್ರಿಂದ ಅಗತ್ಯಕ್ಕೆ ಬೇಕಾದ ವೈದ್ಯರು, ಸಿಬ್ಬಂದಿ ಎಲ್ಲವೂ ಇಲ್ಲೇ ಸಿಗುತ್ತಾರೆ. ಮೊದಲೇ ವೈದ್ಯರು ಉತ್ತರಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಲು ಹಿಂಜರಿಯುವುದರಿಂದ ಕುಮಟಾದಲ್ಲಿ ಆಸ್ಪತ್ರೆ ಮಾಡಿದಲ್ಲಿ ಸಿಬ್ಬಂದಿ ಕೊರತೆ ಕಾಣಬಹುದು.‌‌ ಇದನ್ನು ಸರಿತೂಗಿಸಲು ಕಾರವಾರದಲ್ಲೇ ಆಸ್ಪತ್ರೆ ಮಾಡಿದಲ್ಲಿ ಉತ್ತಮ ಎಂದು ಇನ್ನಷ್ಟು ಜನರು ಆಗ್ರಹಿಸುತ್ತಿದ್ದಾರೆ. ಇದೇ ವಿಚಾರವಾಗಿ ಜನಪ್ರತಿನಿಧಿಗಳ ನಡುವೆಯೂ ಟಗ್ ಆಫ್ ವಾರ್ ನಡೆಯುತ್ತಿದ್ದು, ಆಸ್ಪತ್ರೆ ನಿರ್ಮಾಣ ವಿಚಾರದಲ್ಲೂ ರಾಜಕೀಯ ಕಾಲಿಟ್ಟಿದೆ‌. ಇದೇ ಕಾರಣದಿಂದ ಹಿರಿಯ ರಾಜಕಾರಣಿಗಳು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಾಗಿದ್ದು, ಯೋಗ್ಯ ಸ್ಥಳದಲ್ಲಿ ನಿರ್ಮಾಣ ಮಾಡಿದಲ್ಲಿ ಉತ್ತಮ ಎಂದು ಹೇಳಿಕೆ ನೀಡುವ ಮೂಲಕ ಅತ್ತ ಕಾರವಾರ, ಇತ್ತ ಕುಮಟಾ ಎಂದು ಹೇಳದೆ ತಮ್ಮ ಅಭಿಪ್ರಾಯವನ್ನು ನಡುವಿನಲ್ಲಿರಿಸಿದ್ದಾರೆ. 

ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಾಗಿದ್ದು, ರಾಜಕೀಯ ನಾಯಕರು ಮಾತ್ರ ತಮ್ಮ ತಮ್ಮ ಕ್ಷೇತ್ರದಲ್ಲಿ ಮಾಡಿಸಬೇಕೆಂದು ತೊಡೆ ತಟ್ಟಿ ನಿಂತಿದ್ದಾರೆ. ಆದರೆ, ಬಹು ಜನರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಯಾವ ಕ್ಷೇತ್ರದಲ್ಲಿ ಘೋಷಣೆ ಮಾಡುತ್ತಾರೆಂದು ಕಾದು ನೋಡಬೇಕಷ್ಟೇ.

ಭರತ್‌ರಾಜ್ ಕಲ್ಲಡ್ಕ ಜತೆ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ
 

Follow Us:
Download App:
  • android
  • ios