ಹುಬ್ಬಳ್ಳಿ(ಆ.21): ಅಪಘಾತದ ಸಾಕ್ಷ್ಯಕ್ಕಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯೂ ಬಸ್‌ಗಳ ಮುಂಭಾಗದಲ್ಲಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಎಲ್ಲ ಬಸ್‌ಗಳಲ್ಲೂ ಕ್ಯಾಮೆರಾಗಳು ರಾರಾಜಿಸಲಿವೆ.

ಎಲ್ಲಿಯಾದರೂ ಅಪಘಾತ ಸಂಭವಿಸಿದರೆ, ತಪ್ಪು ಇರಲಿ ಬಿಡಲಿ, ಸಾರಿಗೆ ಸಂಸ್ಥೆಗೇ ಹಾನಿ ಆಗುತ್ತಿದೆ. ಕೆಲವೊಮ್ಮೆ ಸಾಕ್ಷ್ಯ ಆಧಾರಗಳ ಕೊರತೆಯಿಂದಾಗಿ ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡಬೇಕಾಗುತ್ತೆ. ಇದು ಸಾರಿಗೆ ಸಂಸ್ಥೆಗೆ ಅಕ್ಷರಶಃ ಹೊರೆಯಾಗಿ ಪರಿಣಮಿಸುತ್ತಿದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯೇ ಪ್ರತಿವರ್ಷ ಸುಮಾರು  40 ರಿಂದ 45 ಕೋಟಿ ಪರಿಹಾರದ ಮೊತ್ತವನ್ನು ತೆರಬೇಕಾದಂತಹ ಪರಿಸ್ಥಿತಿಯೂ ಬಂದೊದಗುತ್ತಿದೆ. ಈ ಹೊರೆಯನ್ನು ತಗ್ಗಿಸಲು ವಾಯವ್ಯ ಸಾರಿಗೆ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿರುವ ಬಸ್‌ಗಳ ಮುಂಭಾಗ ಕ್ಯಾಮೆರಾಗಳನ್ನು ಅಳವಡಿಸಲು ಚಿಂತನೆ ನಡೆಸಿದೆ.

BSNL ಲ್ಯಾಂಡ್‌ಲೈನ್‌ ರಿಪೇರಿಗಾಗಿ ಪ್ರಧಾನಿ ಮೊರೆ ಹೋದ ಹಿರಿಯ ನಾಗರಿಕ!

ಪ್ರಮುಖವಾಗಿ ಸಾರಿಗೆ ಸಂಸ್ಥೆ ತನ್ನ ವ್ಯಾಪ್ತಿಯ ವಾಹನಗಳಿಗೆ ಸ್ವ ವಿಮಾ ಯೋಜನೆ ಹೊಂದಿರುವುದರಿಂದ ಪ್ರತಿವರ್ಷ ಅಪಘಾತ ಪ್ರಕರಣಗಳಲ್ಲಿ ಸುಮಾರು  40 ರಿಂದ 45 ಕೋಟಿ ಪರಿಹಾರವನ್ನು ಕೋರ್ಟ್‌ ಆದೇಶದಂತೆ ಪಾವತಿಸುತ್ತಿದೆ. ಆರ್ಥಿಕ ಸಂಕಷ್ಟದಿಂದಾಗಿ ಸಕಾಲಕ್ಕೆ ಪರಿಹಾರ ಪಾವತಿ ಮಾಡದೇ ಇರುವ ಪರಿಣಾಮ ಕೆಲ ಪ್ರಕರಣಗಳಲ್ಲಿ ಅಸಲಿನಷ್ಟೇ ಬಡ್ಡಿ ಪಾವತಿಸಿರುವ ಉದಾಹರಣೆಗಳಿವೆ. ದೊಡ್ಡ ಮಟ್ಟದ ಪರಿಹಾರ ಪಾವತಿಸದಿದ್ದಾಗ ಕೋರ್ಟ್‌ ಮೂಲಕ ವಾಹನ ಜಪ್ತಿ ಆದೇಶ ಹೊರಬಿದ್ದಾಗ ಬಸ್‌ಗಳನ್ನು ಜಪ್ತಿ ಮಾಡಲಾಗುತ್ತಿದೆ. ಅಲ್ಲದೆ ಓರ್ವ ವ್ಯಕ್ತಿಯ ಸಾವಿಗೆ ಕೋರ್ಟ್‌ನಿಂದ ಬಂದ ಆದೇಶದ ಪ್ರಕಾರ ಸುಮಾರು ಎರಡು ಕೋಟಿ ರೂಪಾಯಿ ಪರಿಹಾರ ಪಾವತಿಸುವ ಸಂದರ್ಭ ಬಂದೊದಗುವುದರಿಂದ ಸಂಸ್ಥೆಗೆ ಈ ಅಪಘಾತ ಪ್ರಕರಣಗಳಿಂದಾಗಿ ಪರಿಹಾರ ಒದಗಿಸುವುದು ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ.

ಹೀಗಾಗಿ ಈ ಎಲ್ಲ ಹೊರೆಗಳನ್ನು ತಗ್ಗಿಸುವ ಉದ್ದೇಶದಿಂದ ಇದೀಗ ಸಾಕ್ಷ್ಯಾಧಾರಗಳನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಇದೀಗ ವಿನೂತನ ತಂತ್ರ ರೂಪಿಸಿದೆ. ಈ ಕಾರಣದಿಂದಾಗಿ ಬಸ್‌ಗಳಿಗೆ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಮೊದಲಿಗೆ ದೂರದೂರಿಗೆ ತೆರಳುವ, ರಾತ್ರಿ ಸಂಚರಿಸುವ ಬಸ್‌ಗಳಿಗೆ, ರಾಜಹಂಸ, ವೇಗದೂತ, ಐರಾವತ ಸೇರಿದಂತೆ ಮತ್ತಿತರರ ಬಸ್‌ಗಳಿಗೆ ಅಳವಡಿಸಲಾಗುವುದು. ನಂತರ ಉಳಿದ ಬಸ್‌ಗಳಿಗೂ ಕ್ಯಾಮೆರಾ ಅಳವಡಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ ತಿಳಿಸಿದ್ದಾರೆ.