ಬೆಂಗಳೂರು [ಜು.08]: ಪತ್ನಿ ಮೃತಪಟ್ಟಿದ್ದರಿಂದ ನೊಂದಿದ್ದ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಪಿ.ಎಸ್.ಕಾಲೋನಿ ನಿವಾಸಿ ಪ್ರಕಾಶ್ (38) ಆತ್ಮಹತ್ಯೆ ಮಾಡಿಕೊಂಡ ಚಾಲಕ. ಪ್ರಕಾಶ್ ಕಾರು ಚಾಲಕರಾಗಿದ್ದು, ಆರೇಳು ವರ್ಷಗಳ ಹಿಂದೆ ವಿವಾಹವಾಗಿದ್ದರು. 

ಐದು ವರ್ಷಗಳ ಹಿಂದೆ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿ ಮೃತಪಟ್ಟ ಬಳಿಕ ಪ್ರಕಾಶ್ ಮದ್ಯದ ಚಟಕ್ಕೆ ಬಿದ್ದಿದ್ದರು. ತಾಯಿ ಜತೆ ಪಿ.ಎಸ್.ಕಾಲೋನಿಯಲ್ಲಿ ವಾಸವಿದ್ದ ಪ್ರಕಾಶ್ ನಿತ್ಯ ಕುಡಿದು ಬಂದ ತಾಯಿ ಜತೆ ಜಗಳವಾಡುತ್ತಿದ್ದರು. 

ಶನಿವಾರ ರಾತ್ರಿ 11  ಗಂಟೆ ಸುಮಾರಿಗೆ ತಾಯಿ ಪುತ್ರ ಪ್ರಕಾಶ್‌ನನ್ನು ಊಟ ಮಾಡಲೆಂದು ಎದ್ದೇಳಿಸಲು ಕೊಠಡಿಗೆ ತೆರಳಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಜೆ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.