ಬೇಲೂರು [ಜ.12]:  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಯಾವುದೇ ಜಾತಿ ಧರ್ಮಕ್ಕೆ ಸಂಬಂಧಪಟ್ಟಿಲ್ಲ ಎಂದು ಜಿಲ್ಲಾ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬೆಣ್ಣೂರು ರೇಣುಕುಮಾರ್‌ ಹೇಳಿದರು.

ಪಟ್ಟಣದ ನೆಹರು ನಗರದಿಂದ ಬಸವೇಶ್ವರ ವೃತ್ತದವರೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ  ನಡೆದ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯಿದೆಗೆಯನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಕೆಟ್ಟಹೆಸರು ತರಲು ಪಿತೂರಿ ನಡೆಸುತ್ತಿವೆ ಎಂದು ಟೀಕಿಸಿದರು.

ಇದು ಬಿಜೆಪಿ ಪಕ್ಷ ಮಾಡಿದ ಕಾನೂನಲ್ಲ. ಹಿಂದೆ ಇದ್ದಂತ ಆಲಿಖತ್‌ ಹಾಗೂ ಜವಾಹರಲಾಲ್‌ ನೆಹರು ಅವರು ಮಾಡಿಕೊಂಡ ಒಪ್ಪಂದ ಅನುಷ್ಠಾನಕ್ಕೆ ಬಂದಿದೆ. ಆದರೆ, ಅದೇ ಪಕ್ಷದ ಮುಖಂಡರು ಹಾಗೂ ನಾಯಕರು ಅಸಹ್ಯ ಬರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇವರೆ ಮಾಡಿರುವ ಕಾನೂನನ್ನು ಇವರೇ ಮರೆತಿರುವ ಹಾಗಿದೆ. ನಮ್ಮ ಪಕ್ಷದವರು ಹೇಳುವ ಮಾತು ಒಂದೇ, ಈ ದೇಶದಲ್ಲಿ ಇರುವ ಮುಸಲ್ಮಾನ್‌ರೂ ಭಾರತೀಯರೇ. ದಯವಿಟ್ಟು ಕಿಡಿಗೇಡಿಗಳ ಮಾತಿಗೆ ಬೆಲೆಕೊಡದೆ ಪೌರತ್ವ ಕಾಯಿದೆಯನ್ನು ಒಪ್ಪಿಕೊಳ್ಳಿ ಎಂದು ಹೇಳಿದರು.

‘ಕುಮಾರಸ್ವಾಮಿ ಕ್ಯಾಸೆಟ್‌ ಮನುಷ್ಯ : ಇದು ಅವರಿಗೆ ಹೊಸತಲ್ಲ’.

ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯಿದೆ ಹೊಸ ಕಾಯಿದೆ ಅಲ್ಲ. ಕಾಯಿದೆಯ ಪ್ರಕಾರ ಭಾರತಕ್ಕೆ ವಲಸೆ ಬಂದಿರುವಂತಹ ಯಾರೇ ವಿದೇಶಿ ಪ್ರಜೆಯಾದರೂ ಅವರು 12 ವರ್ಷಗಳ ಕಾಲ ಭಾರತದಲ್ಲಿ ವಾಸ ಮಾಡಿ ನಂತರ ಪೌರತ್ವಕ್ಕೆ ಅರ್ಜಿ ಹಾಕಬಹುದಾಗಿತ್ತು. ಇಂದಿಗೂ ಕೂಡ ಆ ಕಾನೂನು ವ್ಯವಸ್ಥೆ ಇದೆ ಎಂದು ಹೇಳಿದರು.

ಹಾಸನ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುಲ್ಲಳ್ಳಿ ಸುರೇಶ್‌ ಮಾತನಾಡಿ, ಉತ್ತಮವಾಗಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರ ಎಲ್ಲಾ ರೀತಿಯ ರೈತಪರವಾಗಿ ಉತ್ತಮ ಸೌಲಭ್ಯ ಕೊಡುತ್ತಿದೆ. ಆದರೆ, ಪ್ರತಿಪಕ್ಷಗಳಿಗೆ ಪೌರತ್ವ ವಿಚಾರ ಒಂದೇ ಗೊತ್ತು. ಜನರಿಗೆ ತಪ್ಪು ಸಂದೇಶವನ್ನು ತಲುಪಿಸುವ ಮುಖಾಂತರ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೊರಟಿಗೆರೆ ಪ್ರಕಾಶ್‌, ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌, ಬಿಜೆಪಿ ಮುಖಂಡರಾದ ತೆಂಡೇಕೆರೆ ರಮೇಶ್‌, ಕೆಳೆಹಳ್ಳಿ ರಾಜು, ದರ್ಶನ್‌, ಸಚಿನ್‌, ವಿಜಯಲಕ್ಷ್ಮೇ ಇತರರು ಇದ್ದರು.