ಬೆಂಗಳೂರು(ನ.09): ನಿರಂತರ ಮಳೆಯಿಂದಾಗಿ ಈ ಬಾರಿ ಎರಡು ತಿಂಗಳ ಕಾಲ ಬೆಳೆ ತಡವಾದ್ದರಿಂದ ಹಾಗೂ ಇಳುವರಿ ಕಡಿಮೆ ಆಗಿದ್ದರಿಂದ ಬ್ಯಾಡಗಿ ಮೆಣಸಿನಕಾಯಿ ದರ ದಾಖಲೆ ಮಟ್ಟಕ್ಕೇರಿದೆ. ಕಳೆದ ಮಂಗಳವಾರ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮೆಣಸಿನಕಾಯಿ 1 ಕ್ವಿಂಟಾಲ್‌ಗೆ 44 ಸಾವಿರ ರು.ನಂತೆ ಮಾರಾಟವಾಗಿದೆ.

ಕ್ವಿಂಟಾಲ್‌ಗೆ ಹೆಚ್ಚೆಂದರೆ 10 ಸಾವಿರದಿಂದ 15 ಸಾವಿರ ಇರುತ್ತಿದ್ದ ದರ ಇಷ್ಟೊಂದು ಏರಿರುವುದು ಬೆಳೆಗಾರರಿಗೆ ಖುಷಿ ತಂದಿದೆ. ಇನ್ನು ಗುಣಮಟ್ಟಆಧರಿಸಿ ಕ್ವಿಂಟಾಲ್‌ಗೆ 16 ಸಾವಿರದಿಂದ 32 ಸಾವಿರ ರು.ವರೆಗೆ ಮಾರಾಟವಾಗಿದೆ.
ಮಾಚ್‌ರ್‍ ತಿಂಗಳಿಂದ ಬೆಲೆ ಸ್ವಲ್ಪ ಏರುಗತಿಯಲ್ಲಿದ್ದರೂ 15 ದಿನಗಳಿಂದೀಚೆಗೆ ಪ್ರತಿ ಕೆ.ಜಿ. ಮೇಲೆ 50-60 ರು.ವರೆಗೆ ಏರಿಕೆಯಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ದರ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಮಳೆಗೆ ಬೆಳೆ ನೆಲಕಚ್ಚಿದೆ. ಇದರಿಂದ ಸಮಯಕ್ಕೆ ಅನುಗುಣವಾಗಿ ಬೆಳೆ ಬರುವುದು ತಡವಾದ್ದರಿಂದ ಚಳಿಗಾಲದಲ್ಲೇ ಏರಿಕೆಯಾಗಿದೆ.

20 ದಿನದಿಂದ ಏರಿಕೆ:

ಸಗಟು ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ (ಉತ್ತಮ) ಕೆ.ಜಿ. 325ರಿಂದ 350 ರು., ಕಡ್ಡಿ ರಹಿತ ಬ್ಯಾಡಗಿ ಮೆಣಸಿನಕಾಯಿ 300-450 ರು., (10 ಕೆ.ಜಿ. 3000-4500 ರು.), ಗುಂಟೂರು ಮೆಣಸಿನಕಾಯಿ ಕೆ.ಜಿ. 150-160 ರು.ವರೆಗೆ ಬೆಲೆ ನಿಗದಿಯಾಗಿದೆ.

ಬ್ಯಾಡಗಿ ಮೆಣಸಿನಕಾಯಿ ಬೆಲೆ ಡಬಲ್ : ಹೊಸ ದಾಖಲೆ

‘ಕ್ವಿಂಟಾಲ್‌ಗೆ ಹೆಚ್ಚೆಂದರೆ 10 ಸಾವಿರದಿಂದ 15 ಸಾವಿರ ರು. ಇರುತ್ತಿದ್ದ ಬ್ಯಾಡಗಿ ಮೆಣಸಿನ ದರ, ಕಳೆದ 20 ದಿನಗಳಿಂದ ಏರುತ್ತಲೇ ಸಾಗಿದೆ. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 16 ಸಾವಿರದಿಂದ 32 ಸಾವಿರದಷ್ಟಿದೆ. ಉತ್ತಮ ಗುಣಮಟ್ಟದ ಬ್ಯಾಡಗಿ ಮೆಣಸು ಮಂಗಳವಾರ ಕ್ವಿಂಟಲ್‌ಗೆ 44 ಸಾವಿರದಂತೆ ಮಾರಾಟವಾಯಿತು. ದೀಪಾವಳಿ ನಂತರ ದರ ಕಡಿಮೆಯಾಗಬಹುದು’ ಎನ್ನುತ್ತಾರೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಪಿಸಿಎಸ್‌ ಟ್ರೇಡ​ರ್‍ಸ್ ಮಾಲೀಕ ಎನ್‌. ಪ್ರಭಾಕರ್‌.

‘ಬ್ಯಾಡಗಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 300 ರು.ಗೆ ನಿಗದಿಯಾಗಿದೆ. ಕ್ವಿಂಟಾಲ್‌ಗೆ 16 ಸಾವಿರದಿಂದ 30 ಸಾವಿರ ರು. ಇದೆ. ನಮ್ಮಲ್ಲಿ ಬ್ಯಾಡಗಿ ಮೆಣಸಿನಕಾಯಿ (ಉತ್ತಮ) ಕೆ.ಜಿ. 325, ಮಧ್ಯಮ ಕೆ.ಜಿ. 300, ದ್ವಿತೀಯ ದರ್ಜೆ ಕೆ.ಜಿ. 280 ರು.ಗೆ ಖರೀದಿಯಾಗುತ್ತಿದೆ. ತಮಿಳುನಾಡಿನ ರಾಮ್‌ನಾಡ್‌ ಮೆಣಸಿನಕಾಯಿ ಕೆ.ಜಿ. 200, ಮಧ್ಯಮ 180 ರು., ಗುಂಟೂರು ಮೆಣಸಿನಕಾಯಿ ಕೆ.ಜಿ. 160 ರು.ಗೆ ಖರೀದಿಯಾಗುತ್ತಿದೆ’ ಎಂದು ಮಂಗಳೂರು ಎಸ್‌ವಿಕೆ ಟ್ರೇಡ​ರ್‍ಸ್ ಮಾಲೀಕ ಸುರೇಶ್‌ ಕಾಮತ್‌ ಮಾಹಿತಿ ನೀಡಿದರು.

ಈ ಹಿಂದೆ ಲಾಕ್‌ಡೌನ್‌ ಸಮಯದಲ್ಲಿ ಬೇಡಿಕೆ ಇರಲಿಲ್ಲ. ಆದರೆ, ಇದೀಗ ದೇಶದ ಇತರೆ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟು ಚುರುಕುಗೊಂಡಿರುವುರಿಂದ ಬಹುಬೇಡಿಕೆ ಉಂಟಾಗಿದೆ. ಡಿಸೆಂಬರ್‌ನಲ್ಲಿ ಬೆಲೆ ಇಳಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಬ್ಯಾಡಗಿ ಮೆಣಸಿನಕಾಯಿ ಕಡುಕೆಂಪು ಬಣ್ಣದಿಂದ ಕೂಡಿರುತ್ತದೆ. ಖಾರ ತುಸು ಕಡಿಮೆ. ಉಳಿದ ಮೆಣಸಿನಕಾಯಿಗಳಂತೆ ಬೇಗನೆ ಹಾಳಾಗುವುದಿಲ್ಲ. ಈ ಎಲ್ಲ ವೈಶಿಷ್ಟ್ಯಗಳಿಂದ ಇತರ ಮೆಣಸಿನಕಾಯಿಗಳ ದರಕ್ಕಿಂತ ಬ್ಯಾಡಗಿ ದರ ಜಾಸ್ತಿ ಎನ್ನುತ್ತಾರೆ ಎಪಿಎಂಸಿ ವರ್ತಕ ಶಂಭುಲಿಂಗ.