ಬ್ಯಾಡಗಿ(ಮೇ.22): ಕೊರೋನಾ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಮೆಣಸಿನಕಾಯಿ ವಹಿವಾಟು ಎಂದಿನಂತೆ ಆರಂಭವಾಗಿದ್ದು ಮೊದಲ ದಿನವೇ 60 ಸಾವಿರಕ್ಕೂ ಅಧಿಕ ಚೀಲ ಆವಕವಾಗಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಮಾರುಕಟ್ಟೆವಹಿವಾಟು ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ಕುರಿತು ಮುಂಜಾಗ್ರತಾ ಕ್ರಮಗಳು ಯಶಸ್ವಿ ಪಾಲನೆ ಸೇರಿದಂತೆ ವಿವಿಧ ಷರತ್ತುಗಳನ್ನು ವಿಧಿಸಿದ್ದ ಎಪಿಎಂಸಿ ಆಡಳಿತ ಮಂಡಳಿಯ ನಿಬಂಧನೆಗಳಿಗೆ ಒಪ್ಪಿ ವಹಿವಾಟು ನಡೆಸಲು ವ್ಯಾಪಾರಸ್ಥರು ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಎಂದಿನಂತೆ ಇ-ಟೆಂಡರ್‌ ಮೂಲಕ ಮೆಣಸಿನಕಾಯಿ ವಹಿವಾಟು ಆರಂಭಿಸಿದರು.

ಕೊರೋನಾ ಭೀತಿ: 'ಮೇ 31 ರವರೆಗೆ ನಿಷೇಧಾಜ್ಞೆ ಮುಂದುವರಿಕೆ'

ಮಾರುಕಟ್ಟೆಯ ಮುಖ್ಯದ್ವಾರದಿಂದ ಆಗಮನ ಮತ್ತು ನಿರ್ಗಮನ, ಅಂಗಡಿಗೆ ಇಬ್ಬರಂತೆ ಪಾಸ್‌ ವಿತರಣೆ, ಕಡ್ಡಾಯ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಕೆ, ಟೆಂಡರ್‌ ಹಾಕುವ ವರ್ತಕರಲ್ಲೂ ಸಾಮಾಜಿಕ ಅಂತರ ಕಾಪಾಡುವಿಕೆ, ಹೊರಜಿಲ್ಲೆ ಮತ್ತು ರಾಜ್ಯದಿಂದ ಬಂದ ವಾಹನಗಳ ಚಾಲಕರು ಮತ್ತು ಕ್ಲೀನ​ರ್‍ಸ್ಗಳನ್ನು ಎಪಿಎಂಸಿ ಹಳೇ ಕಟ್ಟಡದಲ್ಲಿ ವಾಸ್ತವ್ಯ, ಪ್ಯಾಕ್‌ ಮಾಡಿದ ಊಟ ಮತ್ತು ಉಪಾಹಾರ ಸರಬರಾಜು, ಅಲ್ಲಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜನೆಯಿಂದ ಸ್ಥಳೀಯ ಎಪಿಎಂಸಿಯಲ್ಲಿ ಭದ್ರತಾ ವ್ಯವಸ್ಥೆ ಅತ್ಯಂತ ಯಶಸ್ವಿಯಾಯಿತು.

ಬೃಹತ್‌ ಸಂಖ್ಯೆಯಲ್ಲಿ ರೈತರು ಸೇರುವ ಅನುಮಾನದಿಂದ ಲಾಕ್‌ಡೌನ್‌ ನಿಯಮ ಪಾಲನೆ ಕಷ್ಟಸಾಧ್ಯವೆಂಬ ತೀರ್ಮಾನಕ್ಕೆ ಬಂದಿದ್ದ ಆಡಳಿತ ಮಂಡಳಿಯು ಯಾವುದೇ ಒತ್ತಡಕ್ಕೆ ಮಣಿಯದೇ ವಹಿವಾಟು ಆರಂಭಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಎಪಿಎಂಸಿ ವಿಧಿಸಿದ ಷರತ್ತುಗಳಿಗೆ ವರ್ತಕರು ಒಪ್ಪಿ ಪಾಲನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಗುರುವಾರ ಎಲ್ಲ ವರ್ತಕರು ಷರತ್ತುಗಳಿಗೆ ತಕ್ಕಂತೆ ವಹಿವಾಟು ನಡೆಸಿದರು.

ಕಳೆದೆರಡು ತಿಂಗಳಿಂದ ಜನರಿಲ್ಲದೇ ಬಿಕೋ ಎನ್ನುತ್ತಿದ್ದ ಎಪಿಎಂಸಿಯಲ್ಲಿ ಗುರುವಾರ ಎಲ್ಲೆಲ್ಲೂ ಕೆಂಪನೆಯ ಬಣ್ಣದ ಮೆಣಸಿನಕಾಯಿ ಕಂಗೊಳಿಸಿತು. ಪ್ರತಿ ಅಂಗಡಿಗಳ ಮುಂಭಾಗದಲ್ಲೂ ರೈತರಿಗಾಗಿ ಸ್ಯಾನಿಟೈಸರ್‌ ಸೇರಿದಂತೆ ಮಾಸ್ಕ್‌ ವಿತರಣೆಗೆ ಕ್ರಮ, ಪ್ರಾಂಗಣದ ಒಳಭಾಗದಲ್ಲಿ ಪಾನ್‌, ಗುಟ್ಕಾ ತಂಬಾಕು ಉಗುಳುವುದನ್ನು ನಿಷೇಧಿಸಲಾಗಿತ್ತು.

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಪ್ರಾಂಗಣಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ತಹಸೀಲ್ದಾರ್‌ ಶರಣಮ್ಮ ಕಾರಿ, ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್‌. ನಾಯ್ಕರ, ಕಾರ‍್ಯದರ್ಶಿ ಎಸ್‌.ಬಿ.ನ್ಯಾಮಗೌಡ ಸೇರಿದಂತೆ ಸರ್ವ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರ ಮತ್ತು ವ್ಯಾಪಾರಸ್ಥರ ಅಹವಾಲು ಸ್ವೀಕರಿಸಿದರು.

ಸಾರ್ವಜನಿಕರ ಸಹಕಾರವಿದ್ದರೆ ಏನೆಲ್ಲ ಉತ್ತಮ ಕಾರ್ಯ ಮಾಡಬಹುದು ಎಂಬುದಕ್ಕೆ ಮಾರುಕಟ್ಟೆವಹಿವಾಟು ಆರಂಭವೇ ಸಾಕ್ಷಿ. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಹೆಸರಿಗೆ ಕಪ್ಪಚುಕ್ಕೆ ಬಾರದಂತೆ ಲಾಕ್‌ಡೌನ್‌ ಯಶಸ್ವಿಗೊಳಿಸಿದ್ದು ಹಾಗೂ ವಹಿವಾಟು ಆರಂಭಕ್ಕೆ ಸಹಕರಿಸಿದ ಸ್ಥಳೀಯ ವರ್ತಕರು ರೈತರು ಹಾಗೂ ಕಾರ‍್ಯದರ್ಶಿಗೆ ಅಭಿನಂದನೆ ಎಂದು ಬಳ್ಳಾರಿ ಶಾಸಕ ವಿರೂಪಾಕ್ಷಪ್ಪ ಅವರು ಹೇಳಿದ್ದಾರೆ.

ಸೋಪ್‌, ಸ್ವಾನಿಟೈಸರ್‌ ವ್ಯವಸ್ಥೆ, ಹೊರಗಿನಿಂದ ವಾಹನಗಳಲ್ಲಿ ಬಂದ ರೈತರಿಗೆ ಊಟ, ಉಪಾಹಾರ ವ್ಯವಸ್ಥೆ ವರ್ತಕರಿಗೆ ಕಷ್ಟವೆನಿಸಿದರೂ ರೈತರಿಗೆ ಅನುಕೂಲವಾಗಲಿ ಎಂದು ಷರತ್ತುಗಳನ್ನು ವಿಧಿಸಲಾಗಿದೆ. ಕೊರೋನಾ ಮಹಾಮಾರಿ ಮಾರಕಟ್ಟೆಗೆ ವಕ್ಕರಿಸದಿರಲಿ ಎಂಬ ಉದ್ದೇಶದಿಂದ ಈ ರೀತಿ ಷರತ್ತು ಹಾಕಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್‌.ಬಿ. ನ್ಯಾಮಗೌಡ್ರ ತಿಳಿಸಿದ್ದಾರೆ.  

ಬ್ಯಾಡಗಿ ಬೃಹತ್‌ ಮಾರುಕಟ್ಟೆ. ವಹಿವಾಟು ಆರಂಭಿಸಿದಲ್ಲಿ ರೆಡ್‌ ಜೋನ್‌ಗಳಿಂದ ರೈತರು ಆಗಮಿಸುವ ಹಿನ್ನೆಲೆಯಲ್ಲಿ ಕೊರೋನಾ ವೈರಸ್‌ ನಿಯಂತ್ರಣ ಒಂದು ಸವಾಲಾಗಿತ್ತು. ಇದಕ್ಕೆ ಸಹಕರಿಸಿದ ರೈತರು ಹಾಗೂ ಎಪಿಎಂಸಿ ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದು ವರ್ತಕರ ಸಂಘದ ಅಧ್ಯಕ್ಷ  ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ತಿಳಿಸಿದ್ದಾರೆ.