ಬೆಂಗಳೂರು :  ಬಿಬಿಎಂಪಿಯ ಎರಡು ವಾರ್ಡುಗಳಿಗೆ ಮೇ 29ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸಗಾಯ್‌ರಾಯಪುರ ವಾರ್ಡ್‌ನಲ್ಲಿ 14 ಅಭ್ಯರ್ಥಿಗಳು ಮತ್ತು ಕಾವೇರಿಪುರ ವಾರ್ಡ್‌ನಿಂದ ಐವರು ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ವಾಪಸ್‌ ಪಡೆಯಲು ಗುರುವಾರ ಕೊನೆಯ ದಿನವಾಗಿತ್ತು. ಅದರಂತೆ ಸಗಾಯ್‌ ರಾಯಪುರ ವಾರ್ಡ್‌ನಲ್ಲಿ ಈ ಮೊದಲು 16 ಜನರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಇಬ್ಬರು ಪಕ್ಷೇತರರು ನಾಮಪತ್ರ ವಾಪಸ್‌ ಪಡೆದು 14 ಜನ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಕಾವೇರಿಪುರ ವಾರ್ಡ್‌ನಲ್ಲಿ ನಾಮಪತ್ರ ಸಲ್ಲಿಸಿದ್ದ 10 ಜನರ ಪೈಕಿ ಐವರು ನಾಮಪತ್ರ ವಾಪಸ್‌ ಪಡೆದಿದ್ದರಿಂದ ಐವರು ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಸಗಾಯರಾಯಪುರ ವಾರ್ಡ್‌ನ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಸದಸ್ಯ ಏಳುಮಲೈ ಹಾಗೂ ಕಾವೇರಿಪುರ ವಾರ್ಡ್‌ನ ಜೆಡಿಎಸ್‌ ಸದಸ್ಯೆ ರಮೀಳಾ ಉಮಾಶಂಕರ್‌ ಅವರ ನಿಧನದಿಂದ ತೆರವಾಗಿದ್ದ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಬಿಜೆಪಿ-ಮೈತ್ರಿ ಅಭ್ಯರ್ಥಿಗಳಿಗೆ ಬಂಡಾಯ ಬಿಸಿ

ಕಾವೇರಿ ಪುರ ವಾರ್ಡ್‌ನಲ್ಲಿ ಬಿಜೆಪಿಗೆ, ಸಗಾಯರಾಯಪುರ ವಾರ್ಡ್‌ನಲ್ಲಿ ಮೈತ್ರಿ ಅಭ್ಯರ್ಥಿಗೆ ಬಂಡಾಯದ ಬಂಡಾಯದ ಬಿಸಿ ಎದುರಾಗಿದೆ. ಸಗಾಯರಾಯಪುರ ವಾರ್ಡ್‌ನಿಂದ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಏಳುಮಲೈ ಸಹೋದರಿ ಪಳನಿಯಮ್ಮ ಅವರು ಸ್ಪರ್ಧಿಸಿದ್ದಾರೆ. ಆದರೆ, ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಡಿ ಪರಾಭವಗೊಂಡಿದ್ದ ಮಾರಿಮುತ್ತು ಜೆಡಿಎಸ್‌ನಿಂದ ಮತ್ತೆ ಟಿಕೆಟ್‌ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಎ.ಜೀಯೇರೀಮ್‌ ಅಂತಿಮ ಕಣದಲ್ಲಿದ್ದಾರೆ.

ಇನ್ನು, ಕಾವೇರಿಪುರ ವಾರ್ಡ್‌ನಲ್ಲಿ ಬಿಜೆಪಿಯಿಂದ ಅಧಿಕೃತ ಬಿ ಫಾರಂ ಪಡೆದು ಸಿ. ಪಲ್ಲವಿ ಕಣಕ್ಕಿಳಿದಿದ್ದಾರೆ. ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ಅರ್ಪಿತಾ.ಕೆ. ಬಿಜೆಪಿಯಿಂದ ಬಿ ಫಾರಂ ಸಿಗದಿದ್ದರೂ ಬಿಜೆಪಿಯಿಂದಲೇ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಇವರ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತವಾಗುವ ಸಾಧ್ಯತೆ ಇದೆ. ಇನ್ನು, ಜೆಡಿಎಸ್‌ನಿಂದ ಸುಶೀಲ.ಎಸ್‌. ಅವರು ನಾಮಪತ್ರ ಸಲ್ಲಿಸಿದ್ದಾರೆ.