Asianet Suvarna News Asianet Suvarna News

ಮಲ್ಲೇಶ್ವರಂನಲ್ಲಿ ವಾಟರ್‌ ಮ್ಯೂಸಿಯಂ ಸೃಷ್ಟಿ!

ನೀರಿನ ಮಹತ್ವ ಹಾಗೂ ಸಂರಕ್ಷಣೆ ಮೊದಲಾದ ವಿಚಾರಗಳ ಬಗ್ಗೆ ಮಾಹಿತಿ ಒದಗಿಸುವ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿಯು ಮಲ್ಲೇಶ್ವರಂನಲ್ಲಿ ‘ವಾಟರ್‌ ಮ್ಯೂಸಿಯಂ’ ನಿರ್ಮಿಸಲು ನಿರ್ಧರಿಸಿದೆ. 

BWSSB Plans To Water Museum in Malleshwaram
Author
Bengaluru, First Published Sep 2, 2019, 9:10 AM IST
  • Facebook
  • Twitter
  • Whatsapp

ಮೋಹನ ಹಂಡ್ರಂಗಿ

ಬೆಂಗಳೂರು [ಸೆ.02]:  ರಾಜಧಾನಿಯ ಕುಡಿಯುವ ನೀರಿನ ಇತಿಹಾಸ, ನೀರು ಪಂಪಿಂಗ್‌ ವ್ಯವಸ್ಥೆ, ನೀರು ಪೂರೈಕೆ ಜಾಲ, ನೀರಿನ ಮಹತ್ವ ಹಾಗೂ ಸಂರಕ್ಷಣೆ ಮೊದಲಾದ ವಿಚಾರಗಳ ಬಗ್ಗೆ ಮಾಹಿತಿ ಒದಗಿಸುವ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿಯು ‘ವಾಟರ್‌ ಮ್ಯೂಸಿಯಂ ಮತ್ತು ಹೆರಿಟೇಜ್‌ ಪಾರ್ಕ್’ ನಿರ್ಮಿಸಲು ನಿರ್ಧರಿಸಿದೆ.

ನಗರದ ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿರುವ ಜಲಮಂಡಳಿಯ 45 ಎಕರೆ ಜಾಗದ ಪೈಕಿ 5 ಎಕರೆ ಜಾಗದಲ್ಲಿ 9 ಕೋಟಿ ರು. ವೆಚ್ಚದಲ್ಲಿ ಈ ‘ವಾಟರ್‌ ಮ್ಯೂಸಿಯಂ ಮತ್ತು ಹೆರಿಟೇಜ್‌ ಪಾರ್ಕ್’ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಟೆಂಡರ್‌ ಆಹ್ವಾನಿಸಲಾಗಿದೆ.

ಶತಮಾನದ ಹಿಂದೆ ಬೆಂಗಳೂರು ನಗರಕ್ಕೆ ಇಲ್ಲಿನ ಕೆರೆಗಳು ಹಾಗೂ ತೆರೆದ ಬಾವಿಗಳು ಕುಡಿಯುವ ನೀರಿನ ಮೂಲಗಳಾಗಿದ್ದವು. ಕಾಲ ನಂತರದಲ್ಲಿ ನಗರದಲ್ಲಿ ನೀರಿಗೆ ಬೇಡಿಕೆ ಹೆಚ್ಚಾದ್ದರಿಂದ ನೀರು ಪೂರೈಸಲು ಪರ್ಯಾಯ ನೀರಿನ ಮೂಲಗಳಿಗೆ ಶೋಧಿಸಲಾಯಿತು. ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಅಂದರೆ 1896ರಲ್ಲಿ ಮೊಟ್ಟಮೊದಲ ಬಾರಿಗೆ ಹೆಸರಘಟ್ಟಕೆರೆಯಿಂದ ಪೈಪ್‌ಲೈನ್‌ ಮೂಲಕ ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿರುವ ಜಲಾಗಾರಕ್ಕೆ ನೀರು ಹರಿಸಿ ಬಳಿಕ ನಗರಕ್ಕೆ ನೀರು ಪೂರೈಕೆ ಮಾಡಲಾಯಿತು.

ಶತಮಾನದ ಇತಿಹಾಸವಿರುವ ಈ ಜಲಾಗಾರ ಇಂದು ಶಿಥಿಲಾವಸ್ಥೆಯಲ್ಲಿದೆ. ಈ ಜಲಾಗಾರವನ್ನು ಬಲಪಡಿಸಿ ಹೆರಿಟೇಜ್‌ ಕಟ್ಟಡವಾಗಿ ಸಂರಕ್ಷಿಸಲು ತೀರ್ಮಾನಿಸಲಾಗಿದೆ. ಈ ಜಲಾಗಾರವೂ ಸೇರಿದಂತೆ ಮ್ಯೂಸಿಯಂ ಹಾಗೂ ಹೆರಿಟೇಜ್‌ ಪಾರ್ಕ್ ನಿರ್ಮಾಣವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಕಟ್ಟಡ ವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರ ಬಿ.ಎಂ.ಮಂಜುನಾಥ್‌ ಹೇಳಿದರು.

ಮ್ಯೂಸಿಯಂ ವಿಶೇಷತೆಗಳು:  ಈ ಮ್ಯೂಸಿಯಂ ಮತ್ತು ಹರಿಟೇಜ್‌ ಪಾರ್ಕ್ನಲ್ಲಿ ದೇಶದ ನದಿಗಳು, ನದಿ ಪ್ರದೇಶಗಳಲ್ಲಿ ನಾಗರಿಕತೆ ಬೆಳವಣಿಗೆ, ನೀರು ಮತ್ತು ಬದುಕು, ಬೆಂಗಳೂರು ನಗರದ ನೀರಿನ ಮೂಲಗಳು, ಪಂಪಿಂಗ್‌ ವ್ಯವಸ್ಥೆ, ನೀರಿನ ಶುದ್ಧೀಕರಣ, ಆರಂಭದಲ್ಲಿ ನೀರು ಶುದ್ಧೀಕರಣಕ್ಕೆ ಬಳಕೆ ಮಾಡಿದ್ದ ಯಂತ್ರೋಪಕರಣ, ತಂತ್ರಜ್ಞಾನ, ನಗರದ ನೀರು ಪೂರೈಕೆ ಜಾಲ, ಜಲಾಶಯಗಳು, ನದಿಗಳು, ಜಲಮಂಡಳಿಯ ನೀರು ಪೂರೈಕೆ ಯೋಜನೆಗಳು, ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ಇರಲಿದೆ. ಅಂತೆಯೆ ನೀರಿನ ಮಹತ್ವ ಸಾರುವ ಭಿತ್ತಿ ಪತ್ರಗಳು, ಫಲಕಗಳು, ನೀರಿನ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು ಮೊದಲಾದ ವಿಚಾರಗಳ ಮಾಹಿತಿ ಲಭ್ಯವಾಗಲಿದೆ.

ಯುವ ಜನರಿಗೆ ಅರಿವು:  ಇಂದಿನ ಯುವಪೀಳಿಗೆಗೆ ನೀರಿನ ಮಹತ್ವ ತಿಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಹಾಗಾಗಿ ಮ್ಯೂಸಿಯಂಗೆ ಹೊಂದಿಕೊಂಡಂತೆ ಕಿರು ಸಭಾಂಗಣ ನಿರ್ಮಾಣವಾಗಲಿದೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮಗಳ ಮುಖಾಂತರ ನೀರಿನ ಮಹತ್ವ ಕುರಿತಂತೆ ಅರಿವು ಮೂಡಿಸಲು ಉದ್ದೇಶಿಸಲಾಗಿದೆ. ಜಲಮಂಡಳಿಯೇ ಈ ಮ್ಯೂಸಿಯಂ ಹಾಗೂ ಹೆರಿಟೇಜ್‌ ಪಾರ್ಕ್ ನಿರ್ವಹಣೆ ಮಾಡಲಿದೆ. ಪ್ರತಿ ದಿನ ಬೆಳಗ್ಗೆಯಿಂದ ಸಂಜೆ ವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿ ಮಾಹಿತಿ ಒದಗಿಸಲು ತೀರ್ಮಾನಿಸಿದೆ.

ನಗರದ ನೀರಿನ ಇತಿಹಾಸ, ಜಲಮಂಡಳಿ ಯೋಜನೆಗಳು, ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವುದರ ಜತೆಗೆ ನೀರಿನ ಕೊರತೆ, ಮಹತ್ವ, ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ವಾಟರ್‌ ಮ್ಯೂಸಿಯಂ ಹಾಗೂ ಹೆರಿಟೇಜ್‌ ಪಾರ್ಕ್ನ ಪ್ರಮುಖ ಉದ್ದೇಶವಾಗಿದೆ.

-ಬಿ.ಎಂ.ಮಂಜುನಾಥ್‌, ಸಹಾಯಕ ಕಾರ್ಯಕಾರಿ ಅಭಿಯಂತರ, ಕಟ್ಟಡ ವಿಭಾಗ, ಜಲಮಂಡಳಿ.

Follow Us:
Download App:
  • android
  • ios