ಬೆಂಗಳೂರು ಜಲಮಂಡಳಿಯು ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ 'ಒನ್ ಟೈಮ್ ಸೆಟಲ್‌ಮೆಂಟ್' (OTS) ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ, ಅಸಲು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ಬಡ್ಡಿ ಮತ್ತು ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ.
ಬೆಂಗಳೂರು (ಡಿ.28): ದೀರ್ಘಕಾಲದಿಂದ ನೀರಿನ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರು ನಗರದ ಗ್ರಾಹಕರಿಗೆ ಜಲಮಂಡಳಿಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ಬಾಕಿ ಇರುವ ನೀರಿನ ಬಿಲ್ಲಿನ ಅಸಲು ಮೊತ್ತವನ್ನು (Principal Amount) ಏಕಕಾಲದಲ್ಲಿ ಪಾವತಿಸಿದರೆ, ಬಡ್ಡಿ ಮತ್ತು ದಂಡದ ಮೊತ್ತವನ್ನು ಶೇ.100 ರಷ್ಟು ಮನ್ನಾ ಮಾಡುವ 'ಒನ್ ಟೈಮ್ ಸೆಟಲ್‌ಮೆಂಟ್' (OTS) ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಸಚಿವ ಸಂಪುಟದ ಗ್ರೀನ್ ಸಿಗ್ನಲ್
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ನಗರಾಭಿವೃದ್ಧಿ ಇಲಾಖೆಯು ಈ ಯೋಜನೆಗೆ ಅಧಿಕೃತ ಆದೇಶ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, "ಗ್ರಾಹಕ ಸ್ನೇಹಿ ಉದ್ದೇಶದಿಂದ ಈ ರಿಯಾಯಿತಿ ಘೋಷಿಸಲಾಗಿದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಸೇರಿದಂತೆ ಒಟ್ಟು 3 ತಿಂಗಳ ಕಾಲ ಈ ಸುವರ್ಣಾವಕಾಶ ಲಭ್ಯವಿರಲಿದೆ' ಎಂದು ತಿಳಿಸಿದ್ದಾರೆ.
ಮಧ್ಯವರ್ತಿಗಳ ಕಾಟವಿಲ್ಲ, ಡಿಜಿಟಲ್ ವ್ಯವಸ್ಥೆ
ಈ ಯೋಜನೆಯಲ್ಲಿ ಪಾರದರ್ಶಕತೆ ಕಾಪಾಡಲು ಜಲಮಂಡಳಿ ವಿಶೇಷ ಕ್ರಮ ಕೈಗೊಂಡಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಗ್ರಾಹಕರು ನೇರವಾಗಿ ಜಲಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಆ್ಯಪ್ ಕೂಡ ಸಿದ್ಧವಾಗುತ್ತಿದ್ದು, ಗ್ರಾಹಕರು ಅಸಲು ಪಾವತಿಸುತ್ತಿದ್ದಂತೆಯೇ ತಂತ್ರಾಂಶದಲ್ಲಿ ಬಡ್ಡಿ ಮತ್ತು ದಂಡದ ಮೊತ್ತ ಸ್ವಯಂಚಾಲಿತವಾಗಿ ಮನ್ನಾ ಆಗಲಿದೆ.
ಹೈದರಾಬಾದ್ ಮಾದರಿ ಅನುಸರಣೆ
ಈಗಾಗಲೇ ಹೈದರಾಬಾದ್‌ನಲ್ಲಿ ಈ ಯೋಜನೆ ಎರಡು ಬಾರಿ ಅತ್ಯಂತ ಯಶಸ್ವಿಯಾಗಿ ಜಾರಿಯಾಗಿದೆ. ಅದೇ ಮಾದರಿಯನ್ನು ಇದೀಗ ಸಿಲಿಕಾನ್ ಸಿಟಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಸರ್ಕಾರಿ ಕಟ್ಟಡಗಳು ಮತ್ತು ದೊಡ್ಡ ವಾಣಿಜ್ಯ ಮಳಿಗೆಗಳಿಗೆ ಜಲಮಂಡಳಿಯ ವಿಶೇಷ ತಂಡವೇ ಖುದ್ದು ಭೇಟಿ ನೀಡಿ ಮಾಹಿತಿ ನೀಡಲಿದೆ. ಗೃಹ ಬಳಕೆದಾರರು ಆನ್‌ಲೈನ್ ಮೂಲಕವೇ ಈ ಸೌಲಭ್ಯ ಪಡೆಯಬಹುದು. ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಈ ಯೋಜನೆ ಅಧಿಕೃತವಾಗಿ ಜಾರಿಗೆ ಬರುವ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


