ಬೆಂಗಳೂರು ಜಲಮಂಡಳಿ 'ಜಲಮಂಡಳಿ ಅನ್ನಪೂರ್ಣ ಯೋಜನೆ'ಯಡಿ 700+ ನೈರ್ಮಲ್ಯೀಕರಣ ಕಾರ್ಮಿಕರಿಗೆ ಉಪಹಾರಕ್ಕಾಗಿ ಮಾಸಿಕ ₹1500 ಒದಗಿಸುತ್ತಿದೆ. ಈ ಯೋಜನೆಯು ಕಾರ್ಮಿಕರ ಆರೋಗ್ಯ ಮತ್ತು ಗೌರವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಬೆಂಗಳೂರು (ಆ.31): ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (Bangalore Water Supply and Sewerage Board-BWSSB) ತನ್ನ 700ಕ್ಕೂ ಹೆಚ್ಚು ನೈರ್ಮಲ್ಯೀಕರಣ ಕಾರ್ಮಿಕರ ಜೀವನ ಗುಣಮಟ್ಟ ಹೆಚ್ಚಿಸುವ ಮತ್ತು ಅವರಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ 'ಜಲಮಂಡಳಿ ಅನ್ನಪೂರ್ಣ ಯೋಜನೆ'(Water Board Annapoorna Scheme) ಯನ್ನು ಜಾರಿಗೊಳಿಸುತ್ತಿದೆ. ಈ ವಿನೂತನ ಯೋಜನೆಯಡಿ, ಕಾರ್ಮಿಕರಿಗೆ ಉಪಹಾರಕ್ಕಾಗಿ ಪ್ರತಿದಿನ ₹50ರಂತೆ ಮಾಸಿಕ ₹1500 ಅನ್ನು ಸ್ಮಾರ್ಟ್ ಕಾರ್ಡ್‌ಗಳ ಮೂಲಕ ನೇರವಾಗಿ ಪಾವತಿಸಲಾಗುತ್ತದೆ.

ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾದ್ ಮನೋಹರ್ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿ, 'ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪಿಸಲಾಗಿದೆ. ಕಾರ್ಮಿಕರ ಆರೋಗ್ಯ, ಗೌರವ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು ನಮ್ಮ ಮುಖ್ಯ ಉದ್ದೇಶ' ಎಂದು ಎಂದು ತಿಳಿಸಿದ್ದಾರೆ.

ದೇಶದ ಇತರೇ ಮೆಟ್ರೋಪಾಲಿಟನ್‌ ಸಿಟಿಗಳಲ್ಲಿಯೂ ಜಲಮಂಡಳಿ ಸ್ವಚ್ಛತಾ ಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಆದರೆ, ನಮ್ಮ ಮಂಡಳಿ ವತಿಯಿಂದ ನಮ್ಮ ಕಾರ್ಮಿಕರು ತಮಗೆ ಇಷ್ಟವಾದಂತಹ ಉಪಹಾರವನ್ನು ಪಡೆದುಕೊಳ್ಳಲಿ ಎನ್ನುವ ಉದ್ದೇಶ ಹೊಂದಿದ್ದೇವೆ. ನಮ್ಮ ನಗರವನ್ನು ಸ್ವಚ್ಛವಾಗಿ ಇಡಲು ಹಗಲು-ರಾತ್ರಿ ಶ್ರಮಿಸುತ್ತಿರುವ ಕಾರ್ಮಿಕರಿಗೆ, ಅನ್ನಪೂರ್ಣ ಯೋಜನೆಯ ಮೂಲಕ ಅವರ ಶ್ರಮವನ್ನು ಗೌರವಿಸುತ್ತಿದ್ದೇವೆ. ಎಲ್ಲ ಕಾರ್ಮಿಕರ ದಿನದ ಆರಂಭ ಆರೋಗ್ಯಪೂರ್ಣವಾಗಿರಲಿ ಎಂಬ ಆಶಯ ಹೊಂದಿದ್ದೇವೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಆಕ್ಸಿಸ್ ಬ್ಯಾಂಕ್‌ನ ಸಹಯೋಗದೊಂದಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದ್ದು, ಇದು ದೇಶದಲ್ಲಿಯೇ ಇಂತಹ ತಂತ್ರಜ್ಞಾನ ಆಧಾರಿತ ನೇರ ಹಣ ವರ್ಗಾವಣೆ ಮಾಡುವ ಮೊದಲ ಯೋಜನೆಯಾಗಿದೆ. ಜಲಮಂಡಳಿಯ ಈ ಯೋಜನೆಯನ್ನು ಸ್ಮಾರ್ಟ್ ನಗರದ - ಮಾನವೀಯ ವಿಸ್ತರಣೆ ಎಂದು ಪರಿಗಣಿಸುತ್ತಿದೆ. ತಂತ್ರಜ್ಞಾನ ಮತ್ತು ಮಾನವೀಯತೆಯ ಸಮ್ಮಿಲನದ ಮೂಲಕ, ಈ ಯೋಜನೆ ಇತರೆ ನಗರಗಳ ಪಾಲಿಗೆ ಮಾದರಿಯೂ ಆಗಬಹುದಾಗಿದೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು.

ಯೋಜನೆಯ ಪ್ರಮುಖ ಅಂಶಗಳು:

  • ಸ್ಮಾರ್ಟ್ ಕಾರ್ಡ್ ಮೂಲಕ ನೇರ ಹಣ ವರ್ಗಾವಣೆ
  • ಪ್ರತಿದಿನದ ಉಪಾಹಾರಕ್ಕಾಗಿ ತಿಂಗಳಿಗೆ ₹1500 ಭತ್ಯೆ
  • ಜಲಮಂಡಳಿ 700+ ಕಾರ್ಮಿಕರಿಗೆ ಲಾಭ
  • ಆರೋಗ್ಯ, ಪೌಷ್ಟಿಕತೆಗೆ ಆದ್ಯತೆ ನೀಡಲು ಕ್ರಮ

ಈ ಯೋಜನೆಯು ಕಾರ್ಮಿಕರ ಶ್ರಮಕ್ಕೆ ಗೌರವ ಸೂಚಿಸುವ ಮತ್ತು ಅವರ ದಿನದ ಆರಂಭ ಆರೋಗ್ಯಪೂರ್ಣವಾಗಿರಲಿ ಎಂಬುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಜಲಮಂಡಳಿ ಚಿಂತನೆ ನಡೆಸಿದೆ ಎಂದು ಅವರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.