ಬೆಂಗಳೂರು: ಬಿಎಂಟಿಸಿ 840 ಹೊಸ ಬಸ್ ಖರೀದಿ ಸಲೀಸು
ಹೊಸ ಬಸ್‌ಗಳ ಖರೀದಿಗೆ ಬಿಬಿಎಂಟಿಸಿ ಹೊರಡಿಸಿದ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರಿನ ಅಂಗವಿಕಲ ಸುನೀಲ್ ಕುಮಾರ್ ಜೈನ್ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಬೆಂಗಳೂರು(ಮಾ.14): ಹೊಸದಾಗಿ 840 ಬಸ್‌ಗಳನ್ನು ಖರೀದಿಸುವ ಸಂಬಂಧ ಕಾರ್ಯಾದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಹೈಕೋರ್ಟ್ ಅನುಮತಿ ನೀಡಿ ಆದೇಶಿಸಿದೆ. ಹೊಸ ಬಸ್‌ಗಳ ಖರೀದಿಗೆ ಬಿಬಿಎಂಟಿಸಿ ಹೊರಡಿಸಿದ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರಿನ ಅಂಗವಿಕಲ ಸುನೀಲ್ ಕುಮಾರ್ ಜೈನ್ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಬಿಎಂಟಿಸಿ ಪರ ವಕೀಲರು, ಖರೀದಿಸಲು ಉದ್ದೇಶಿಸಿರುವ ಬಸ್‌ಗಳು ಅಂಗವಿಕಲರ ಸ್ನೇಹಿಯಾಗಿಲ್ಲ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ. ಆದರೆ, ಬಸ್‌ನಲ್ಲಿ ಅಂಗವಿಕಲರ ಪ್ರಯಾಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಬಸ್‌ನಲ್ಲಿ ಅಂಗವಿಕಲರಿಗೆ ನಾಲ್ಕು (ಮಹಿಳೆ/ಪುರುಷರಿಗೆ ತಲಾ ಎರಡು) ಸೀಟು ಮೀಸಲಿರಿಸಲಾಗಿದೆ. ಕಾರ್ಯಚರಣೆಯಲ್ಲಿರುವ ಬಿಎಂಟಿಸಿ ಬಸ್‌ಗಳ ಪೈಕಿ ಶೇ.21ರಷ್ಟು ಬಸ್‌ಗಳಲ್ಲಿ ಗಾಲಿಕುರ್ಚಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
1 ರೂಪಾಯಿ ಚಿಲ್ಲರೆ ಕೊಡದ ಕಂಡಕ್ಟರ್‌ಗೆ 3 ಸಾವಿರ ರೂ. ದಂಡ: ಬಿಎಂಟಿಸಿ ಸಿಬ್ಬಂದಿಗೆ ಕೋರ್ಟ್ ತರಾಟೆ
ಅದನ್ನು ಪರಿಗಣಿಸಿದ ನ್ಯಾಯಪೀಠ, ಹೊಸ ಬಸ್‌ಗಳು ಗಾಲಿಕುರ್ಚಿ ಪ್ರಯಾಣಿಕರ ಸ್ನೇಹಿಯಾಗಿವೆ ಎಂಬುದು ಬಿಎಂಟಿಸಿ ಸಲ್ಲಿಸಿರುವ ಫೋಟೋಗಳಿಂದ ತಿಳಿದು ಬರುತ್ತದೆ. ಅಂಗವಿಕಲರ ಪ್ರಯಾಣಕ್ಕೆ ಅನುಕೂಲಕರವಾದ ಸೌಲಭ್ಯ ಕಲ್ಪಿಸಲು ಬಿಎಂಟಿಸಿ ವಿವಿಧ ಕ್ರಮ ಅನುಸರಿಸಲಾಗುತ್ತಿದೆ. ಅರ್ಜಿದಾರರು ಬಯಸಿದಂತೆ ಒಂದೇ ಬಾರಿಗೆ ಎಲ್ಲ ಕ್ರಮ ಕೈಗೊಳ್ಳಬೇಕೆಂದು ನಿರೀಕ್ಷಿಸಲು ಅಸಾಧ್ಯ. ಆದ್ದರಿಂದ ಹಂತ-ಹಂತವಾಗಿ ಕ್ರಮ ತೆಗೆದುಕೊಳ್ಳಲು ಬಿಎಂಟಿಸಿಗೆ ಸ್ವಲ್ಪ ಸಮಯ ನೀಡಬೇಕು ಎಂದು ತಿಳಿಸಿ ಹೊಸ ಬಸ್‌ಗಳ ಖರೀದಿಗೆ ಕಾರ್ಯಾದೇಶ ಹೊರಡಿಸಲು ಅನುಮತಿ ನೀಡಿ ಆದೇಶಿಸಿತು.
ಬಸ್‌ನ ಎತ್ತರ ಬಗ್ಗೆ ಆಕ್ಷೇಪ
ಬಿಎಂಟಿಸಿ 840 ಹೊಸ ಬಸ್‌ಗಳ ಖರೀದಿಗೆ ಟೆಂಡರ್ ಆಹ್ವಾನಿಸಿ 2022ರ ಅ.28ರಂದು ಹೊರಡಿಸಿದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಖರೀದಿಸಲು ಉದ್ದೇಶಿಸಿರುವ ಬಸ್‌ಗಳ ಚಾಸಿಸ್‌ನ (ತಳಕಟ್ಟು) ಎತ್ತರ 1000 ಮಿಲಿ ಮೀಟರ್ ಇರಬೇಕು ಎಂದು ಅಧಿಸೂಚನೆಯಲ್ಲಿ ಬಿಎಂಟಿಸಿ ಹೇಳಿದೆ. ಅದರೆ, ಅದು ಮೋಟಾರು ವಾಹನ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಬಸ್‌ನ ನೆಲಮಟ್ಟದಿಂದ ಎತ್ತರದ 400 ಮಿಲಿ ಮೀಟರ್‌ನಿಂದ 650 ಮಿಮೀ ಇರುವ ಮತ್ತು ಬಾಗಿಲು ಮೂಲಕ ಗಾಲಿ ಕುರ್ಚಿಗಳಿಂದ ಹತ್ತಿಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಇರುವ (ವ್ಹೀಲ್ ಚೇರ್ ಬೋಡಿಂಗ್‌ರ್ ಡಿವೈಸ್) ಬಸ್‌ಗಳನ್ನು ಖರೀದಿ ಮಾಡಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.