ಗದಗ(ಮೇ.12): ಮುಂಡರಗಿಯಲ್ಲಿ ವೆಂಟಿಲೇಟರ್‌ ಸೌಲಭ್ಯ ಇಲ್ಲದೇ ನಾಲ್ವರು ಅಸುನೀಗಿದ ಬೆನ್ನಲ್ಲೇ ಸರ್ಕಾರ ಗದಗ ಜಿಲ್ಲೆಯ ಆಸ್ಪತ್ರೆಗಳಿಗೆ ಹೊಸದಾಗಿ 50 ವೆಂಟಿಲೇಟರ್‌ಗಳನ್ನು ಅಳವಡಿಸಲು ಮುಂದಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಜಿಲ್ಲಾ ಉಸ್ತುವರಿ ಸಚಿವ ಸಿ.ಸಿ. ಪಾಟೀಲ, ಜಿಲ್ಲೆಗೆ 50 ಹೊಸ ವೆಂಟಿಲೇಟರ್‌, 5890 ಎಲ್‌ಪಿಎಂ ಆಕ್ಸಿಜನ್‌ ಉತ್ಪಾದನಾ ಘಟಕ ಮಂಜೂರಾಗಿವೆ ಎಂದು ತಿಳಿಸಿದ್ದಾರೆ. 1000 ಎಲ್‌ಪಿಎಂ ಉತ್ಪಾದನಾ ಘಟಕವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಿಎಸ್‌ಆರ್‌ ಫಂಡ್‌ನಲ್ಲಿ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯಲ್ಲಿ 5,890 ಎಲ್‌ಪಿಎಂ ಆಮ್ಲಜನಕ ಉತ್ಪಾದನಾ ಘಟಕ ಆರಂಭಕ್ಕೆ ಅನುಮತಿ ದೊರೆತಿದೆ. ಕೇಂದ್ರ ಗಣಿ ಭೂ ವಿಜ್ಞಾನ ಇಲಾಖೆಯಿಂದ 1000 ಎಲ್‌ಪಿಎಂ, ರಾಜ್ಯ ಸರ್ಕಾರದಿಂದ 3000 ಎಲ್‌ಪಿಎಂ, ಜಿಲ್ಲೆಗೊಂದು ಘಟಕ ಯೋಜನೆಯಡಿ 1,500 ಎಲ್‌ಪಿಎಂ, ನರಗುಂದ ಆಸ್ಪತ್ರೆಗೆ 390 ಎಲ್‌ಪಿಎಂ ಉತ್ಪಾದನಾ ಘಟಕಗಳು ಮಂಜೂರಾಗಿದ್ದು, ಶೀಘ್ರವೇ 3000 ಎಲ್‌ಪಿಎಂ ಆಕ್ಸಿಜನ್‌ ಉತ್ಪಾದನಾ ಆರಂಭವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

"

ಜಿಲ್ಲೆಯಲ್ಲಿ 200 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ನ್ನು ಗದಗನ ಮೊರಾರ್ಜಿ ವಸತಿ ಶಾಲೆ ಹಾಗೂ ಪಶು ವೈದ್ಯಕೀಯ ಕಾಲೇಜಿನಲ್ಲಿ ಆರಂಭಿಸಲು ಸಿದ್ಧತೆ ನಡೆದಿವೆ. ಸಧ್ಯದಲ್ಲೇ ಕಾರ್ಯಾರಂಭ ಮಾಡುವ ಮೂಲಕ ಸೋಂಕಿತರಿಗೆ ಚಿಕಿತ್ಸೆ ಒದಗಿಸಲಿದೆ ಎಂದರು.

ಗದಗನಲ್ಲೂ ಆಕ್ಸಿಜನ್‌ಗೆ ಹಾಹಾಕಾರ: ವೆಂಟಿಲೇಟರ್‌ ಸಿಗದೆ ಮೂವರ ಸಾವು

2450 ಕೋವ್ಯಾಕ್ಸಿನ್‌ ಲಸಿಕೆ ಹಾಗೂ 16500 ಕೋವಿ ಶೀಲ್ಡ್‌ ಲಸಿಕೆ ಲಭ್ಯವಿದೆ. 18 ವಯೋಮಾನದ ಮೇಲ್ಪಟ್ಟ ಆನ್‌ ಲೈನ್‌ ಮೂಲಕ ನೋಂದಾಯಿತ ಅರ್ಹರಿಗೆ ಲಸಿಕೆ ನೀಡಲು ಪ್ರಾರಂಭಿಸಿದೆ. 6500 ಕೋವಿಶೀಲ್ಡ್‌ ಲಸಿಕೆಯನ್ನು 18 ರಿಂದ 45 ವಯೋಮಾನದ ಅರ್ಹರಿಗೆ ನೀಡಲು ಮೀಸಲಿಟ್ಟಿದೆ. 45 ವಯೋಮಾನದ ಮೇಲ್ಪಟ್ಟವರು ಮೊದಲನೇ ಡೋಸ್‌ ಪಡೆದ ಅರ್ಹರಿಗೆ ಆದ್ಯತೆ ಮೇರೆಗೆ ಎರಡನೇ ಡೋಸ್‌ ಲಸಿಕೆ ನೀಡಲಾಗ್ತುದೆ ಎಂದು ಹೇಳಿದರು.

ಸೋಂಕು ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕು. ಸ್ಥಳೀಯ ವೈದ್ಯರು ಅಂತವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಕಂಡು ಬಂದಲ್ಲಿ ತಾಲೂಕು ಆಸ್ಪತ್ರೆಗೆ ಕಳುಹಿಸಿಕೊಡಬೇಕು. ವಿನಾಕಾರಣ ಸೋಂಕಿತರು ಮನೆಯಲ್ಲಿ ಕಾಲಹರಣ ಮಾಡದೇ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಜೀವ ಹಾನಿ ತಪ್ಪಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಎಸ್‌.ವಿ. ಸಂಕನೂರ, ಜಿಲ್ಲಾಧಿಕಾರಿ ಎಂ. ಸುಂದರೇಶ್‌ಬಾಬು, ಜಿಪಂ ಸಿಇಒ ಭರತ್‌ ಎಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್‌ ಎಂ ಇದ್ದರು.
ಕೋರೋನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ 14 ದಿನಗಳ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಅನಗತ್ಯ ಸಂಚಾರ ಮಾಡದೇ ಮನೆಯಲ್ಲಿಯೇ ಇರಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕಿನ ಸರಪಳಿಯನ್ನು ತುಂಡರಿಸುವಲ್ಲಿ ಸಹಕಾರ ನೀಡಬೇಕು ಎಂದು ಸಿ.ಸಿ. ಪಾಟೀಲ ಹೇಳಿದ್ದಾರೆ.

ಜಿಮ್ಸ್‌ನಲ್ಲೇ ವೆಂಟಿಲೇಟರ್‌ ಸೌಲಭ್ಯ:

ರಾಜ್ಯ ಸರ್ಕಾರ ಗದಗ ಜಿಮ್ಸ್‌ ಆಸ್ಪತ್ರೆಗೆ 50 ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ 38 ವೆಂಟಿಲೇಟರ್‌ಗಳಿವೆ. ಹೆಚ್ಚುವರಿ ವೆಂಟಿಲೇಟರ್‌ಗಳು ಅಗತ್ಯವಿದೆಯೆಂದು ಬೇಡಿಕೆಯಿತ್ತು. ದೀಗ ಈಡೇರಿದೆ. ಇವುಗಳಲ್ಲಿ 10 ವೆಂಟಿಲೇಟರ್‌ ಅಳವಡಿಸಲಾಗಿದೆ. ಉಳಿದವುಗಳ ಅಳವಡಿಕೆ ಶೀಘ್ರ ಆಗಲಿದೆ. ಒಟ್ಟು 88 ವೆಂಟಿಲೇಟರ್‌ ಸೌಲಭ್ಯವುಳ್ಳ ಬೆಡ್‌ಗಳನ್ನು ಜಿಮ್ಸ್‌ ಹೊಂದಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona