ಹುಬ್ಬಳ್ಳಿ(ಜ.26): ಸರಕು ಸಾಗಾಣಿಕೆ ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಗದಗ ಮೂಲದ ಡಾ.ವಿಜಯ ಸಂಕೇಶ್ವರ್‌ ಭಾರತ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟ್ರೇಡ್‌ ಮತ್ತು ಉದ್ಯಮ ವಿಭಾಗದಲ್ಲಿನ ಗಣನೀಯ ಸೇವೆಗಾಗಿ ಸಂಕೇಶ್ವರ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ವಿಆರ್‌ಎಲ್‌ ಬ್ರ್ಯಾಂಡ್‌ಗೆ ಮತ್ತೊಂದು ಗರಿ ಮೂಡಿದಂತಾಗಿದೆ.

ಉತ್ತರ ಕರ್ನಾಟಕದ ಸಣ್ಣ ನಗರದಲ್ಲೊಂದಾದ ಗದಗದಲ್ಲಿ ಜನಿಸಿ, ಹುಬ್ಬಳ್ಳಿಯನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ವಿಜಯ ಸಂಕೇಶ್ವರ್‌ ಅವರ ಯಶೋಗಾಥೆ ಬಹುದೊಡ್ಡದು. ಉದ್ಯಮ, ಪತ್ರಿಕೋದ್ಯಮ, ರಾಜಕೀಯ ಹೀಗೆ ಎಲ್ಲ ರಂಗಗಳಲ್ಲೂ ಮಿಂಚಿದವರು ವಿಜಯ ಸಂಕೇಶ್ವರ್‌.

2020ರ ಪದ್ಮ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಾಧಕರ ಪಟ್ಟಿ!

ಬಿಕಾಂ ಪದವೀಧರರಾದ ವಿಜಯ ಸಂಕೇಶ್ವರ್‌, ಪದವಿ ಮುಗಿದ ಮೇಲೆ ಉದ್ಯಮ ನಡೆಸುವ ಉತ್ಕಟಾಸೆ ಹೊಂದಿದ್ದರು. ಸಾಲ- ಸೋಲ ಮಾಡಿ ಒಂದು ಲಾರಿ ಖರೀದಿಸಿ ಆ ಮೂಲಕ ವಿಆರ್‌ಎಲ್‌ ಸರಕು ಸಾಗಾಣಿಕೆಯ ಬೃಹತ್‌ ಉದ್ಯಮ ಕಟ್ಟಿದರು. ಮುಂದೆ ಬಸ್‌ ಖರೀದಿಸಿ ಟ್ರಾವೆಲ್ಸ್‌ ಪ್ರಾರಂಭಿಸಿದ ಅವರು, ಮತ್ತೆಂದೂ ಹಿಂದುರಗಿ ನೋಡಲೇ ಇಲ್ಲ. ಬರೋಬ್ಬರಿ 3579 ವಾಹನಗಳು (488 ಟ್ರಾವೆಲ್ಸ್‌ ಹಾಗೂ 3091 ಸರಕು ಸಾಗಾಣಿಕೆ) ಒಡೆಯರೆನಿಸಿಕೊಂಡಿರುವ ಸಂಕೇಶ್ವರ್‌, ದೇಶದಲ್ಲೇ ಅತ್ಯಂತ ದೊಡ್ಡ ಉದ್ಯಮವನ್ನು ಹೊಂದಿದ್ದಾರೆ. ಇದರ ಜತೆ ಓಂಕಾರ್‌ ಮಿನರಲ್‌ ವಾಟರ್‌, ಕೋರಿಯರ್‌, ಮಾಧ್ಯಮ ಹೀಗೆ ಬಗೆ ಬಗೆಯ ಕ್ಷೇತ್ರಗಳಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಸಂಸ್ಥೆಯ ಸಿಬ್ಬಂದಿಗೆ ಸಂದ ಗೌರವ

ಪದ್ಮಶ್ರೀ ಪ್ರಶಸ್ತಿ ಬರುತ್ತದೆ ಎಂಬ ನಿರೀಕ್ಷೆಯಿರಲಿಲ್ಲ. ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಸಾರಿಗೆ ಸೇರಿದಂತೆ ವಿಆರ್‌ಎಲ್‌ ಸಮೂಹ ಸಂಸ್ಥೆಯಲ್ಲಿನ ಪ್ರತಿಯೊಬ್ಬರಿಗೂ ಈ ಗೌರವ ಸಲ್ಲುತ್ತದೆ ಎಂದು ಉದ್ಯಮಿ ಡಾ.ವಿಜಯ ಸಂಕೇಶ್ವರ ಅವರು ಹೇಳಿದ್ದಾರೆ.