ಬೆಂಗಳೂರು [ಸೆ.18]:  ಇತ್ತೀಚೆಗೆ ಟಿವಿಎಸ್‌ ಶೋ ರೂಮ್‌ ಮಾಲಿಕ ಸಿದ್ದರಾಜು ಅವರ ಪುತ್ರ ಹಾಗೂ ಕಾರು ಚಾಲಕನನ್ನು ಅಪಹರಿಸಿ 3 ಕೋಟಿ ರು. ಬೇಡಿಕೆ ಇಟ್ಟು ಆತಂಕ ಸೃಷ್ಟಿಸಿದ್ದ ಮೂವರು ದುಷ್ಕರ್ಮಿಗಳಿಗೆ ಬೆಂಗಳೂರು ಗ್ರಾಮಾಂತರ ಪೊಲೀಸರು ಗುಂಡು ಹೊಡೆದು ಮಂಗಳವಾರ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ಕಡಬಗೆರೆ ಸಮೀಪ ಈ ಗುಂಡಿನ ದಾಳಿ ನಡೆದಿದೆ. ಗುಂಡೇಟಿನಿಂದ ಗಾಯಗೊಂಡಿರುವ ಉಲ್ಲಾಳದ ಪ್ರಶಾಂತ್‌, ನವೀನ್‌ ಹಾಗೂ ತಮಿಳುನಾಡಿನ ತಂಗಬಾಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿ ಸಿದ್ದರಾಜು ಮಳಿಗೆ ಕೆಲಸಗಾರ ಸೇರಿದಂತೆ ನಾಲ್ವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಅಪಹರಣಕಾರರಿಂದ ಉದ್ಯಮಿ ಪುತ್ರ ಹೇಮಂತ್‌ ಮತ್ತು ಕಾರು ಚಾಲಕ ಕೇಶವ್‌ ರೆಡ್ಡಿಯನ್ನು ರಕ್ಷಿಸಿ ಪೋಷಕರ ಮಡಲಿಗೆ ಪೊಲೀಸರು ಒಪ್ಪಿಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳ ದಾಳಿಯಿಂದ ಪೆಟ್ಟಾಗಿರುವ ಸಬ್‌ ಇನ್‌ಸ್ಪೆಕ್ಟರ್‌ ಹೇಮಂತ್‌, ಹೆಡ್‌ ಕಾನ್‌ಸ್ಟೇಬಲ್‌ ಮಧು ಹಾಗೂ ಕಾನ್‌ಸ್ಟೇಬಲ್‌ ಮುರಳೀಧರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಯಲಹಂಕದಲ್ಲಿ ಟಿವಿಎಸ್‌ ಮಾರಾಟ ಮಳಿಗೆ ಹೊಂದಿರುವ ಉದ್ಯಮಿ ಸಿದ್ದರಾಜು ಅವರು, ತಮ್ಮ ಇಬ್ಬರು ಮಕ್ಕಳು ಮತ್ತು ಪತ್ನಿ ಜತೆ ಮಾದನಾಯಕನಹಳ್ಳಿ ಸಮೀಪ ನೆಲೆಸಿದ್ದಾರೆ. ಅವರ ಪುತ್ರ ಹೇಮಂತ್‌, ರಾಜಾನುಕುಂಟೆ ಹತ್ತಿರದ ಆರ್‌.ಟಿ.ನಗರ ಪಬ್ಲಿಕ್‌ ಶಾಲೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಪ್ರತಿ ದಿನ ಕಾರಿನಲ್ಲಿ ಮಾಲಿಕರ ಮಗನನ್ನು ಕಾರು ಚಾಲಕ ಕೇಶವ್‌ ರೆಡ್ಡಿ, ಕಾಲೇಜಿಗೆ ಕರೆದುಕೊಂಡು ಹೋಗಿ ಬರುತ್ತಿದ್ದ. ಎಂದಿನಂತೆ ಆ.26ರ ಸಂಜೆ ಚಾಲಕ, ಹೇಮಂತ್‌ನನ್ನು ಕರೆತರಲು ಬಂದಿದ್ದ. ಆಗ ಕಾಲೇಜಿನಿಂದ ಹೊರಬಂದು ಹೇಮಂತ್‌, ಕಾರು ಹತ್ತುವ ವೇಳೆಗೆ ಮತ್ತೊಂದು ಕಾರಿನಲ್ಲಿ ಆರೋಪಿಗಳ ಬಂದಿದ್ದಾರೆ.

ಆಗ ತಮ್ಮ ಕಾರಿನೊಳಗೆ ಬಲವಂತವಾಗಿ ಅವರನ್ನು ಎಳೆದುಕೊಂಡು ಅಪಹರಿಸಿದ್ದರು. ಕಾಲೇಜಿಗೆ ಹೋದ ಮಗ ಸಂಜೆಯಾದರೂ ಬಾರದೆ ಹೋದಾಗ ಕಂಗಲಾದ ಸಿದ್ದರಾಜು, ತಕ್ಷಣ ಕಾರು ಚಾಲಕನಿಗೆ ಕರೆ ಮಾಡಿದ್ದಾರೆ. ಆದರೆ ಆತನ ಮೊಬೈಲ್‌ ಸಹ ಸ್ವಿಚ್‌ಆಫ್‌ ಆಗಿದ್ದನ್ನು ಕಂಡು ಅವರಿಗೆ ಮತ್ತಷ್ಟುಆತಂಕವಾಗಿದೆ. ಕೆಲ ಹೊತ್ತಿಗೆ ಸಿದ್ದರಾಜು ಅವರಿಗೆ ಕರೆ ಮಾಡಿದ ಅಪಹರಣಕಾರರು, ‘ನಿಮ್ಮ ಮಗ ಜೀವಂತವಾಗಿ ಮನೆ ಸೇರಬೇಕಾದರೆ .3 ಕೋಟಿ ನೀಡಬೇಕು’ ಎಂಬ ಬೇಡಿಕೆ ಇಟ್ಟಿದ್ದರು. ಈ ಕರೆ ಹಿನ್ನೆಲೆಯಲ್ಲಿ ಭೀತಿಗೊಳಗಾದ ಸಿದ್ದರಾಜು, ಕೊನೆಗೆ ರಾಜಾನುಕುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್ಚಂದ್ರ ಅವರು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚಿಸಿದ್ದರು. ಇತ್ತ ಅಪಹರಣಕಾರರನ್ನು, ಬೇರೆಡೆ ಒತ್ತೆಯಾಳುಗಳನ್ನು ಇಟ್ಟಿದ್ದರು. ಹೀಗಾಗಿ ಪೊಲೀಸರಿಗೆ ಪ್ರಕರಣವು ಸವಾಲಾಗಿ ಪರಿಣಮಿಸಿತು.

ಹಣದ ಮೊತ್ತ ಇಳಿಸಿದರು!:

ಎರಡು ದಿನಗಳ ಹಿಂದೆ ಸಿದ್ದರಾಜು ಅವರಿಗೆ ಮತ್ತೆ ಕರೆ ಮಾಡಿದ ಆರೋಪಿಗಳು, ನೀವು ಮೂರು ಕೋಟಿ ಪೈಕಿ .1.8 ಕೋಟಿ ನೀಡಿದರೆ ಮಗನನ್ನು ಬಿಡುಗಡೆಗೊಳಿಸುವುದಾಗಿ ಹೇಳಿದ್ದರು. ಅದರಂತೆ ಮಾಗಡಿ ರಸ್ತೆ ಕಡಬಗೆರೆಯ ನೈಸ್‌ ರಸ್ತೆ ಜಂಕ್ಷನ್‌ನಲ್ಲಿ ಮಂಗಳವಾರ ಮಧ್ಯರಾತ್ರಿ 2ರ ಹೊತ್ತಿಗೆ ಹಣ ನೀಡುವುದಾಗಿ ಆರೋಪಿಗಳಿಗೆ ಸಿದ್ದರಾಜು ಮೂಲಕ ಪೊಲೀಸರು ಕರೆ ಮಾಡಿಸಿದ್ದರು. ಆಗ ಮಫ್ತಿಯಲ್ಲಿ ಸಿದ್ದರಾಜು ಜತೆ ಪೊಲೀಸರು ತೆರಳಿದ್ದರು. ಪೂರ್ವನಿಗದಿತ ಸ್ಥಳದಲ್ಲಿ ಹಣ ತುಂಬಿದ್ದ ಬ್ಯಾಗ್‌ ಅನ್ನು ಅವರು ಎಸೆದಿದ್ದಾರೆ. ತಕ್ಷಣವೇ ಬೇರೊಂದು ವಾಹನದಿಂದ ಬಂದ ನವೀನ್‌, ಆ ಬ್ಯಾಗ್‌ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಪೊಲೀಸರ ಪ್ರವೇಶವಾಗಿದೆ. ಈ ಅನಿರೀಕ್ಷಿತ ಪೊಲೀಸರ ಆಗಮನದಿಂದ ಆತಂಕಗೊಂಡ ಆರೋಪಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಡಿವೈಎಸ್ಪಿ ಎಸ್‌.ಬಿ.ಸಕ್ರಿ ಗುಂಡು ಹಾರಿಸಿದ್ದಾರೆ. ಗುಂಡು ಮೊಣಕೈಗೆ ಹೊಕ್ಕು ಆರೋಪಿ ಕುಸಿದು ಬಿದ್ದಿದ್ದಾನೆ.

ಇದಾದ ನಂತರ ನವೀನ್‌ ಮೂಲಕ ಇನ್ನುಳಿದವರಿಗೆ ಕರೆ ಮಾಡಿಸಿದ ಪೊಲೀಸರು, ಮಾದನಾಯಕನಹಳ್ಳಿಯ ನೀಲಗಿರಿ ತೋಪಿನಲ್ಲಿ ಪ್ರಶಾಂತ್‌ ಮತ್ತು ತಂಗಬಾಲು ಇರುವ ಮಾಹಿತಿ ಸಿಕ್ಕಿತ್ತು. ಕೂಡಲೇ ಆ ಜಾಗಕ್ಕೆ ಇನ್‌ಸ್ಪೆಕ್ಟರ್‌ಗಳಾದ ಸತ್ಯನಾರಾಯಣ ಹಾಗೂ ರಾಘವೇಂದ್ರ ನೇತೃತ್ವದ ತಂಡ ತೆರಳಿದೆ. ಆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಓಡಿ ಹೋಗಲು ಯತ್ನಿಸುತ್ತಿದ್ದಂತೆ ಇನ್‌ಸ್ಪೆಕ್ಟರ್‌ಗಳು, ಆ ಇಬ್ಬರಿಗೆ ಗುಂಡು ಹೊಡೆದಿದ್ದಾರೆ. ಈ ವೇಳೆ ಹೆಡ್‌ ಕಾನ್‌ಸ್ಟೇಬಲ್‌ ಮುರಳೀಧರ್‌ ಮತ್ತು ಮಧು ಅವರಿಗೆ ಪೆಟ್ಟಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕಿಡ್ನಾಪ್‌ ಹಿಂದೆ ನೌಕರನ ನೆರಳು

ಉದ್ಯಮಿ ಸಿದ್ದರಾಜು ಪುತ್ರ ಮತ್ತು ಕಾರು ಚಾಲಕನ ಅಪಹರಣ ಹಿಂದೆ ಅವರ ಕೆಲಸಗಾರನೊಬ್ಬರನ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ತನ್ನ ಮಾಲಿಕನ ಹಣಕಾಸು ವಹಿವಾಟಿನ ಬಗ್ಗೆ ತಿಳಿದುಕೊಂಡಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಪುತ್ರನ ಅಪಹರಣಕ್ಕೆ ತನ್ನ ಸ್ನೇಹಿತರ ಜೊತೆ ಸೇರಿ ಸಂಚು ರೂಪಿಸಿದ್ದ. ಈಗ ತಲೆಮರೆಸಿಕೊಂಡಿರುವ ನಾಲ್ವರ ಬಂಧನ ಬಳಿಕ ನೌಕರನ ಹೆಸರು ಬಹಿರಂಗಪಡಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಉಲ್ಲಾಳದಲ್ಲಿ ಬಾಡಿಗೆ ಮನೆ

ಉದ್ಯಮಿ ಪುತ್ರನ ಅಪಹರಣಕ್ಕೆ ಪೂರ್ವ ಯೋಜಿತವಾಗಿಯೇ ಆರೋಪಿಗಳು ಸಂಚು ರೂಪಿಸಿದ್ದರು. ಅಪಹರಿಸಿದ ಬಳಿಕ ಒತ್ತೆಯಾಳುಗಳನ್ನು ಇಡಲು ಎರಡೂವರೆ ತಿಂಗಳ ಹಿಂದೆಯೇ ಅವರು, ಉಲ್ಲಾಳದಲ್ಲಿ ಬಾಡಿಗೆಗೆ ಮನೆ ಪಡೆದಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಅಪಹೃತರಿಗೆ ಆರೋಪಿಗಳು ಕಿರುಕುಳ ನೀಡಿದ್ದಾರೆ. ಬೆಂಗಳೂರು ನಗರ ಹೊರವಲಯದಲ್ಲೇ ಅವರನ್ನು ಒತ್ತೆಯಾಗಿಟ್ಟಿದ್ದರು. ಬಹಳ ಜಾಗ್ರತೆವಹಿಸಿ ತನಿಖೆ ನಡೆಸಲಾಯಿತು.

-ಕೆ.ವಿ.ಶರತ್ಚಂದ್ರ, ಐಜಿಪಿ, ಕೇಂದ್ರ ವಲಯ.

ನೋಟುಗಳ ಕಲರ್‌ ಜೆರಾಕ್ಸ್‌!

ಅಪಹರಣಕಾರರಿಗೆ ನೀಡಲು ನೋಟುಗಳನ್ನು ಪೊಲೀಸರು ಕಲರ್‌ ಜೆರಾಕ್ಸ್‌ ಮಾಡಿಸಿದ್ದರು. .2000, .500 ನೋಟುಗಳನ್ನು ಕಲರ್‌ ಜೆರಾಕ್ಸ್‌ ಮಾಡಿಸಿ, ಬ್ಯಾಗ್‌ನಲ್ಲಿಟ್ಟು ಅಪಹರಣಕಾರರು ಹೇಳಿದ ಜಾಗಕ್ಕೆ ಕೊಂಡೊಯ್ದು ಎಸೆದಿದ್ದರು.

ಇನ್ನು ಉದ್ಯಮಿ ಪುತ್ರನ ಅಪಹರಣದಲ್ಲಿ ಕಾರು ಚಾಲಕನ ಮೇಲೆ ಆರಂಭದಲ್ಲಿ ತೀವ್ರ ಅನುಮಾನವಿತ್ತು. ಆದರೆ ಚಾಲಕ ಮುಗ್ದನಾಗಿದ್ದ. ಅಪಹರಿಸಿದ ದಿನದಿಂದ ಉಲ್ಲಾಳದಲ್ಲಿ ಬಾಡಿಗೆಗೆ ಪಡೆದಿದ್ದ ಮನೆಯೊಂದರಲ್ಲಿ ಕಾರು ಚಾಲಕ ಕೇಶವ ರೆಡ್ಡಿ ಮತ್ತು ಉದ್ಯಮಿ ಪುತ್ರ ಹೇಮಂತ್‌ ಅಪಹರಣಕಾರರು ಕೂಡು ಹಾಕಿದ್ದರು. ಮಂಗಳವಾರವಷ್ಟೇ ಅವರು ಹೊರಗಿನ ಪ್ರಪಂಚ ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದರು.