ಉಡುಪಿ(ಮೇ 13): ಲಾಕ್‌ಡೌನ್‌ ಸಡಿಲಿಕೆಯ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಜನರ ಬಹಳ ಒತ್ತಾಯದ ಬೇಡಿಕೆಯಾಗಿದ್ದ ಬಸ್‌ ಸಂಚಾರ ವ್ಯವಸ್ಥೆಗೆ ಜಿಲ್ಲಾಡಳಿತ ಇಂದಿನಿಂದ ಒಪ್ಪಿಗೆ ನೀಡಿದೆ.

ಕೆಲವು ನಿರ್ಬಂಧಗಳೊಂದಿದೆ ಕೆಲವು ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಬಸ್‌ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕೂರಿಸುವಂತಿಲ್ಲ, ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಪಾಡುವುದು ಬಸ್‌ ನಿರ್ವಾಹಕರ ಮತ್ತು ಪ್ರಯಾಣಿಕರ ಕರ್ತವ್ಯವಾಗಿದೆ, ಇದನ್ನು ಪಾಲಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದ್ದಾರೆ.

ಸಾಹಿತಿ, ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ನಿಧನ

ಅಲ್ಲದೆ ಪ್ರತಿಯೊಬ್ಬ ಪ್ರಯಾಣಿಕರು, ಬಸ್ಸು ನಿರ್ವಾಹಕರು, ಚಾಲಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಮಾಸ್ಕ್‌ಗಳನ್ನು ತೋರಿಕೆಗಾಗಿ ತಲೆ ಮೇಲೆ ಕಟ್ಟುವುದು, ಕುತ್ತಿಗೆಗೆ ನೇತಾಡಿಸುವುದು ಕಂಡರೆ ಗಂಭೀರ ಕ್ರಮ ಕೈಗೊಳ್ಳಲಾಗುದು ಎಂದೂ ಡಿಸಿ ಎಚ್ಚರಿಸಿದ್ದಾರೆ.

ಚೆಕ್‌ಪೋಸ್ವ್‌ ತಪ್ಪಿಸಿ ಬಂದರೆ ಹುಷಾರ್‌:

ಚೆಕ್‌ಪೋಸ್ವ್‌ಗಳನ್ನು ತಪ್ಪಿಸಿ ಜಿಲ್ಲೆಯನ್ನು ಪ್ರವೇಶಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಇದೆ. ಅಂತಹ ದೂರುಗಳು ಬಂದರೆ ಗುರುತಿಸಿ, ಕಡ್ಡಾಯ ಕ್ವಾರಂಟೈನ್‌ ಮಾಡುತ್ತೇವೆ ಎಂದು ಡಿಸಿ ಹೇಳಿದ್ದಾರೆ. ಗ್ರಾ.ಪಂ. ಕಾರ್ಯಪಡೆಗೆ ಕ್ವಾರಂಟೈನ್‌ ಜವಾಬ್ದಾರಿ ನೀಡಲಾಗಿದೆ. ನಗರದ ಚೆಕ್‌ ಪೋಸ್ವ್‌ಗಳಿಗೆ ಬಾರದೆ ಹಳ್ಳಿಗಳನ್ನು ಪ್ರವೇಶಿಸುವವರನ್ನು ಈ ಕಾರ್ಯಪಡೆ ಪತ್ತೆ ಮಾಡುತ್ತದೆ. ನಗರ ಪ್ರದೇಶದಲ್ಲಿ ಕಮಿಷನರ್‌ ಕ್ವಾರಂಟೈನ್‌ ಮಾಡುತ್ತಾರೆ. ಹೊರರಾಜ್ಯಗಳಿಂದ ತಪ್ಪಿಸಿ ಬಂದವರ ಬಗ್ಗೆ ಸಾರ್ವಜನಿಕರು ಸ್ಥಳೀಯಾಡಳಿಕ್ಕೆ ಮಾಹಿತಿ ನೀಡಬೇಕು ಎಂದು ಡಿಸಿ ಹೇಳಿದ್ದಾರೆ.