ಮಾಸ್ಟರ್ ಸ್ಟ್ರೋಕ್; ನಿವೃತ್ತ ಸಾರಿಗೆ ಸಿಬ್ಬಂದಿ ಬಸ್ ಓಡಿಸಲಿದ್ದಾರೆ!
ಸಾರಿಗೆ ಮುಷ್ಕರದ ಹಿನ್ನೆಲೆ: ನಿವೃತ್ತ ಚಾಲಕ, ನಿರ್ವಾಹಕರನ್ನು ಕೆಲಸಕ್ಕೆ ಕರೆದ ಕೆಎಸ್‌ಆರ್‌ಟಿಸಿ/ ತಾತ್ಕಾಲಿಕ ಒಪ್ಪಂದದ ಆಧಾರದ ಮೇಲೆ ಕೆಲಸಕ್ಕೆ ನಿಯೋಜಿಸಲು ಈಶಾನ್ಯ ಸಾರಿಗೆ ಮಹತ್ವದ ನಿರ್ಧಾರ/ ಎರಡು ದಿನಗಳಿಂದ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಬಂದಿಲ್ಲ
ಕಲಬುರಗಿ(ಏ. 08) ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಮಹತ್ವದ ಬೆಳವಣಿಗೆಯೊಂದರಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ನಿವೃತ್ತ ಚಾಲಕ, ನಿರ್ವಾಹಕರನ್ನು ಮರಳಿ ಕೆಲಸಕ್ಕೆ ಬರುವಂತೆ ಆಹ್ವಾನಿಸಿದೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಲ್ಲಿ ನಿವೃತ್ತಿ ಹೊಂದಿ ವಯೋಮಿತಿ 62 ವರ್ಷದೊಳಗಿನ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಸಂಸ್ಥೆಯಲ್ಲಿ ಒಪ್ಪಂದದ ಆಧಾರದ ಮೇಲೆ ಷರತ್ತು ಹಾಗೂ ನಿಬಂಧನೆಗೊಳಪಟ್ಟು ನಿಯೋಜಿಸಲಾಗುತ್ತಿದೆ ಎಂದು ಕಲಬುರಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮಾರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನವೀಯತೆ ಮೆರೆದ ಕನ್ನಡ ಪ್ರಭ ಪೋಟೋಗ್ರಾಫರ್
ನಿವೃತ್ತ ನೌಕರರನ್ನು ಅವರು ನಿವೃತ್ತಿ ಹೊಂದಿದ ವಿಭಾಗ ಅಥವಾ ವಾಸಸ್ಥಳಕ್ಕೆ ಹತ್ತಿರದ ವಿಭಾಗಗಳಲ್ಲಿ ನಿಯೋಜಿಸಲಾಗುತ್ತದೆ. ಇದಕ್ಕಾಗಿ ಕೆಲವು ಷರತ್ತುಗಳನ್ನು ಸಂಸ್ಥೆ ವಿಧಿಸಿದೆ, ಷರತ್ತುಗಳಿಗೆ ಒಪ್ಪಿ ಕರ್ತವ್ಯ ನಿರ್ವಹಿಸಲು ಆಸಕ್ತಿಯಿರುವ ನಿವೃತ್ತ ಚಾಲನಾ ಸಿಬ್ಬಂದಿಗಳು ತಾವು ನಿವೃತ್ತಿ ಹೊಂದಿದ ವಿಭಾಗದಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬಹುದಾಗಿದೆ.
ಷರತ್ತು ಮತ್ತು ನಿಬಂಧನೆಗಳು ಇಂತಿವೆ:
ದೈಹಿಕವಾಗಿ ಚಾಲನಾ / ನಿರ್ವಾಹಕ ವೃತ್ತಿ ಮಾಡಲು ಸಮರ್ಥರಿರುವ ಬಗ್ಗೆ ಸಂಸ್ಥೆಯಲ್ಲಿ ನಿಗದಿಪಡಿಸಿರುವ ದೈಹಿಕ, ದೃಷ್ಟಿ ಸಾಮರ್ಥ್ಯ ಪ್ರಮಾಣಪತ್ರ ಹಾಗೂ ಕೋವಿಡ್-19 ನೆಗೆಟಿವ್ ವರದಿ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣಪತ್ರ ಪಡೆಯಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಭಾರೀ ವಾಹನ / ನಿರ್ವಾಹಕ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ. ಪ್ರತಿ ದಿನದ ಕರ್ತವ್ಯಕ್ಕೆ ಚಾಲಕರಿಗೆ 800 ರು, ನಿರ್ವಾಹಕರಿಗೆ 700 ರು ಗಳಂತೆ ಗೌರವ ಧನ ನೀಡಲಾಗುವುದು. ಈ ಸಿಬ್ಬಂದಿಗೆ ವಾರದ ರಜೆ ಹೊರತುಪಡಿಸಿ ಬೇರೆ ಯಾವುದೇ ರಜೆ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ. ಒಪ್ಪಂದದ ಅವಧಿಯನ್ನು ಯಾವುದೇ ಹೆಚ್ಚುವರಿ ಆರ್ಥಿಕ/ಸೇವಾ ಸೌಲಭ್ಯಗಳಿಗೆ ಪರಿಗಣಿಸುವುದಿಲ್ಲ.
ಈಗಾಗಲೇ ಮುಷ್ಕರದಲ್ಲಿ ಪಾಲ್ಗೊಂಡಿರುವ ಈ ಸಾರಿಗೆ ಸಂಸ್ಥೆಯ ಸಿಬ್ಬಂದಿ ಈ ಮುಷ್ಕರವನ್ನು ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಂಸ್ಥೆಯ ಸಿಬ್ಬಂದಿಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ಮನವಿ ಮಾಡಿದ್ದಾರೆ.