4 ತಿಂಗಳ ಬಳಿಕ ಚೆನೈ, ಮುಂಬೈಗೆ ಬಸ್ ಸಂಚಾರ ಪುನಾರಂಭ
* ಮುಂಗಡ ಬುಕ್ಕಿಂಗ್ ರಿಯಾಯಿತಿ
* ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಬಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳ
* ಪ್ರಯಾಣಿಕರಿಗೆ ಕೋವಿಡ್ ವರದಿ ಕಡ್ಡಾಯ
ಹುಬ್ಬಳ್ಳಿ(ಆ.27): ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಚೆನೈಗೆ ವೋಲ್ವೊ ಮತ್ತು ಮುಂಬೈಗೆ ಸ್ಲೀಪರ್ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಬಸ್‌ಗಳನ್ನು ಹೆಚ್ಚಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಕೋವಿಡ್ ಪ್ರಕರಣಗಳು ತಗ್ಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಿಂದ ತಮಿಳುನಾಡಿಗೆ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಿದ್ದು, ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಚೆನೈಗೆ ವೋಲ್ವೋ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಬರುವ ಪ್ರಯಾಣಿಕರಿಗೆ ಕೋವಿಡ್ ವರದಿ ಕಡ್ಡಾಯವಾಗಿದೆ. ಹುಬ್ಬಳ್ಳಿಯಿಂದ ರಾತ್ರಿ 10.30ಕ್ಕೆ ಹೊರಡುತ್ತದೆ. ಮರುದಿನ ಮಧ್ಯಾಹ್ನ 1.30ಕ್ಕೆ ಚೆನೈ ತಲುಪುತ್ತದೆ. ಮಧ್ಯಾಹ್ನ 3.15ಕ್ಕೆ ಚೆನೈದಿಂದ ಹೊರಟು ಮರುದಿನ ಬೆಳಿಗ್ಗೆ 7ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರಯಾಣ ದರ ಹುಬ್ಬಳ್ಳಿಯಿಂದ ಚೆನೈಗೆ .1440 ಹುಬ್ಬಳ್ಳಿಯಿಂದ ಬೆಂಗಳೂರಿಗೆ .840, ಬೆಂಗಳೂರಿನಿಂದ ಚೆನೈಗೆ .560 ಮುಂಬೈಗೆ ತೆರಳುವ ಎಸಿ ಸ್ಲೀಪರ್ ಬಸ್ ಹುಬ್ಬಳ್ಳಿಯಿಂದ ರಾತ್ರಿ 8.30ಕ್ಕೆ ಹೊರಡುತ್ತದೆ. ಮರುದಿನ ಬೆಳಿಗ್ಗೆ 8ಕ್ಕೆ ಮುಂಬೈ ತಲುಪುತ್ತದೆ. ರಾತ್ರಿ 8.30ಕ್ಕೆ ಅಲ್ಲಿಂದ ಬಿಟ್ಟು ಮರುದಿನ ಬೆಳಿಗ್ಗೆ 8ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ.
ಪ್ರಯಾಣ ದರ ಹುಬ್ಬಳ್ಳಿಯಿಂದ ಮುಂಬೈಗೆ .1132, ಪುಣೆಗೆ .931. ಬೆಳಗಾವಿಯಿಂದ ಮುಂಬೈಗೆ .972, ಪುಣೆಗೆ .760 ಇದರೊಂದಿಗೆ ಈಗಾಗಲೆ ಕಾರ್ಯಾಚರಣೆಯಲ್ಲಿರುವ ಹುಬ್ಬಳ್ಳಿಯಿಂದ ಪಿಂಪ್ರಿಗೆ ತೆರಳುವ ಎಸಿ ಸ್ಲೀಪರ್ ಬಸ್ ಹುಬ್ಬಳ್ಳಿಯಿಂದ ರಾತ್ರಿ 9.30ಕ್ಕೆ ಹೊರಡುತ್ತದೆ. ಮರುದಿನ ಬೆಳಿಗ್ಗೆ 6.30ಕ್ಕೆ ಪಿಂಪ್ರಿ ತಲುಪುತ್ತದೆ. ಅಲ್ಲಿಂದ ರಾತ್ರಿ 9.30ಕ್ಕೆ ಬಿಟ್ಟು ಮರುದಿನ ಬೆಳಿಗ್ಗೆ 6.30ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರಯಾಣ ದರ ಹುಬ್ಬಳ್ಳಿಯಿಂದ ಪುಣೆಗೆ .965 ಮತ್ತು ಬೆಳಗಾವಿಯಿಂದ ಪುಣೆಗೆ .782. ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಶಿರಡಿ ಮತ್ತಿತರ ಸ್ಥಳಗಳಿಗೆ ಐಷಾರಾಮಿ ಬಸ್ ಸಂಚಾರ ಆರಂಭಿಸಲಾಗುತ್ತದೆ.
ವಾಯವ್ಯ ಸಾರಿಗೆಯಿಂದ ಸ್ಪೆಷಲ್ ಪ್ಯಾಕೇಜ್ ಟೂರ್
ಮೀರಜ್, ಇಚಲಕರಂಜಿ, ಸೊಲ್ಲಾಪುರ, ಬಾರ್ಸಿ, ಔರಂಗಾಬಾದ್, ಪಂಡರಾಪುರ, ತುಳಜಾಪುರ ಮತ್ತಿತರ ಸ್ಥಳಗಳಿಗೆ ವೇಗದೂತ ಬಸ್ ಸಂಚಾರ ಮತ್ತೆ ಆರಂಭವಾಗಿದೆ. ಮೀರಜ್ ಮತ್ತು ಈಚಲಕರಂಜಿ ಬಸ್ಸುಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. ಇನ್ನುಳಿದ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ. ಗೋವಾ ರಾಜ್ಯದ ವಾಸ್ಕೋ ಮತ್ತು ಮಡಗಾಂವ್‌ಗೆ ಬಸ್ ಸಂಚಾರ ಮತ್ತೆ ಆರಂಭಗೊಂಡಿದೆ. ಪಣಜಿಗೆ ಸಂಚರಿಸುವ ಬಸ್‌ಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂಗಡ ಬುಕ್ಕಿಂಗ್ ರಿಯಾಯಿತಿ:
ಅಂತಾರಾಜ್ಯ ಹಾಗೂ ರಾಜ್ಯದೊಳಗಿನ ದೂರದ ಮಾರ್ಗದ ಸಾರಿಗೆಗಳಿಗೆ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅಥವಾ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿನ ಕೌಂಟರ್‌ನಲ್ಲಿ ಹಾಗೂ ಪ್ರಾಂಚೈಸಿ ಕೇಂದ್ರಗಳಲ್ಲಿ ಮುಂಗಡ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಿಗೆ ನಾಲ್ಕು ಅಥವಾ ಹೆಚ್ಚಿನ ಆಸನಗಳನ್ನು ಒಂದೇ ಟಿಕೆಟ್‌ನಲ್ಲಿ ಕಾಯ್ದಿರಿಸಿದರೆ ಮೂಲ ಪ್ರಯಾಣ ದರದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣಕ್ಕೆ ಒಮ್ಮೆಗೆ ಮುಂಗಡ ಬುಕ್ಕಿಂಗ್ ಮಾಡಿದರೆ ಬರುವಾಗಿನ ಪ್ರಯಾಣದ ಮೂಲ ಟಿಕೆಟ್ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತದೆ.