ಯಲ್ಲಾಪುರದಲ್ಲಿ ಬಸ್ ಕಂಡಕ್ಟರ್‌ಗೆ ಕೊರೋನಾ ಸೋಂಕು
ಯಲ್ಲಾಪುರ ತಾಲೂಕಿನಲ್ಲಿ ಸೋಮವಾರ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿಗೆ ಹೋಗಿ ಬಂದ ಬಸ್ ನಿರ್ವಾಹಕರೊಬ್ಬರಿಗೆ ಪಾಸಿಟಿವ್ ಬಂದಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ(ಜೂ.23): ಯಲ್ಲಾಪುರ ತಾಲೂಕಿನಲ್ಲಿ ಸೋಮವಾರ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿಗೆ ಹೋಗಿ ಬಂದ ಬಸ್ ನಿರ್ವಾಹಕರೊಬ್ಬರಿಗೆ ಪಾಸಿಟಿವ್ ಬಂದಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಕಂಡಕ್ಟರ್ ಜೂ. 11ರಂದು ಬೆಂಗಳೂರಿಗೆ ಡ್ಯೂಟಿಗೆ ತೆರಳಿ 13ರಂದು ವಾಪಸ್ ಬಂದಿದ್ದರು. 2-3 ದಿನದ ಬಳಿಕ ಅವರಲ್ಲಿ ತೀವ್ರ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದರಿಂದ ಜೂ. 16 ರಂದು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, 18ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಸೋಮವಾರ ವರದಿ ಬಂದಿದ್ದು ಸೋಂಕು ದೃಢಪಟ್ಟಿದೆ.
29 ದಿನಗಳ ನಂತರ ಕೊಡಗಿನಲ್ಲಿ ಕೊರೋನಾ ಸಕ್ರಿಯ..! ಮತ್ತೆ ಹೆಚ್ಚಿದ ಆತಂಕ
ಇವರು ಪಟ್ಟಣದ ನೂತನ ನಗರದ ಮನೆಯೊಂದರಲ್ಲಿ ಇಬ್ಬರು ಚಾಲಕರು, ಐವರು ಕಂಡಕ್ಟರ್ ಜೊತೆ ಬಾಡಿಗೆ ರೂಮಿನಲ್ಲಿದ್ದರು. ಇವರನ್ನೆಲ್ಲ ಇಂದು ಮೊರಾರ್ಜಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಡ್ರೈವರ್ ಹಾಗೂ ಕಂಡಕ್ಟರ್ ಎಲ್ಲೆಲ್ಲಿ ಓಡಾಡಿದ್ದರು ಅವರ ಸಂಪರ್ಕಿತರು ಯಾರು ಎಂಬ ಬಗ್ಗೆ ವರದಿ ಪಡೆಯಲಾಗುತ್ತಿದೆ.
ಈ ಎಲ್ಲ 6 ಜನ ಸಾರಿಗೆ ಸಿಬ್ಬಂದಿ ಚಲನ-ವಲನಗಳ ಮಾಹಿತಿಯನ್ನು ತಾಲೂಕು ಆರೋಗ್ಯ ಇಲಾಖೆ ಸಂಗ್ರಹಿಸಿದೆ. ಆ ಕುರಿತು ಎಚ್ಚರಿಕೆ-ಸೂಚನೆಗಳನ್ನು ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟತಿಳಿಸಿದ್ದಾರೆ.
KSRTC ಕಂಡಕ್ಟರ್, ಡ್ರೈವರ್ ಭದ್ರತಾ ಕಾರ್ಯಕ್ಕೆ!
ಕಿರವತ್ತಿ ಬಿಸಿಎಂ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿದ್ದ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯ ಕುಟುಂಬದ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಗೂ ಸೋಮವಾರ ಸೋಂಕು ದೃಢಪಟ್ಟಿದೆ.