ಧಾರವಾಡ (ನ.23):  ನಗರದ ಗಣೇಶನಗರ ತಪೋವನದ ಬಳಿಯಿರುವ ರೈಲ್ವೆ ಗೇಟ್‌ನ ಹಳಿಯ ಮೇಲೆಯೇ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ವೊಂದು ಕೆಟ್ಟು ನಿಂತು ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಬಳಿಕ ಸಾರ್ವಜನಿಕರು ಬಸ್‌ನ್ನು ತಳ್ಳಿ ಹಳಿಯಿಂದ ಪಕ್ಕಕ್ಕೆ ಸರಿಸಿದರು.

ಧಾರವಾಡದಿಂದ ದಾಂಡೇಲಿಗೆ ಸಾರಿಗೆ ಸಂಸ್ಥೆಯ ಬಸ್‌ ಸಂಚರಿಸುತ್ತಿತ್ತು. 25 ಪ್ರಯಾಣಿಕರಿದ್ದರು. ಗಣೇಶನಗರದ ರೈಲ್ವೆ ಗೇಟ್‌ ಬಳಿ ಬರುತ್ತಿದ್ದಂತೆ ಹಳಿ ಮೇಲೆಯೇ ಬಸ್‌ ಕೆಟ್ಟು ನಿಂತಿತು. ಈ ಸಮಯದಲ್ಲಿ ಯಾವುದೇ ಟ್ರೈನ್‌ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿತು. ಆದರೆ ಬಸ್‌ ಹಿಂದೆಯೂ ಹೋಗದೇ ಮುಂದೆಯೂ ಚಲಿಸದೇ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರಲ್ಲಿ ದೊಡ್ಡ ಆತಂಕವನ್ನುಂಟು ಮಾಡಿತ್ತು.

ಬಳಿಕ ಪ್ರಯಾಣಿಕರು ಹಾಗೂ ಸಾರ್ವಜನಿಕರು ಬಸ್‌ನ್ನು ತಳ್ಳುವ ಮೂಲಕ ಹಳಿ ಮೇಲಿಂದ ರಸ್ತೆ ಮೇಲೆ ತಂದರು. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಯಿತು. ಇದರಿಂದ ಕೆಲಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು. ಳಿಕ ಬೇರೆ ಬಸ್‌ನ್ನು ತರಿಸಿ ಪ್ರಯಾಣಿಕರನ್ನು ಕಳುಹಿಸಲಾಯಿತು. ಇನ್ನಾದರೂ ಮಾರ್ಗ ಮಧ್ಯೆ ಕೆಟ್ಟು ನಿಲ್ಲುವ, ತಳ್ಳುವ ಗಾಡಿಗಳನ್ನು ಕಳುಹಿಸದೇ ಉತ್ತಮವಾಗಿರುವ ಬಸ್‌ಗಳನ್ನಷ್ಟೇ ಓಡಿಸಲು ಸಾರಿಗೆ ಸಂಸ್ಥೆ ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಆಗ್ರಹ.