ಬೆಂಗಳೂರು (ಅ.06): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಮೂರನೇ ಹಂತದ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು ವಿವಿಧ ಬಡಾವಣೆಗಳ 402 ಮೂಲೆ ನಿವೇಶನಗಳ ಪೈಕಿ 286 ನಿವೇಶನಗಳು ಇ-ಹರಾಜಿನ ಮೂಲಕ ಮಾರಾಟವಾಗಿವೆ. ಇದರಿಂದಾಗಿ ಬಿಡಿಎ 266.31 ಕೋಟಿ ರು. ಆದಾಯ ಗಳಿಸಿದೆ.

ಇ-ಹರಾಜಿಗಿಟ್ಟಮೂಲೆ ನಿವೇಶನಗಳ ಪೈಕಿ ವಿವಿಧ ಕಾರಣಾಂತರಗಳಿಂದ 40 ನಿವೇಶನಗಳನ್ನು ಹರಾಜಿನಿಂದ ಹಿಂಪಡೆಯಲಾಗಿತ್ತು. ಹರಾಜಿಗಿದ್ದ 362 ನಿವೇಶನಗಳಲ್ಲಿ 286 ನಿವೇಶಗಳು ಮಾರಾಟವಾಗಿದ್ದು, 55 ನಿವೇಶನಗಳಿಗೆ ಯಾವುದೇ ಪ್ರಕ್ರಿಯೆ ಬಂದಿಲ್ಲ. 21 ನಿವೇಶನಗಳಿಗೆ ಶೇ.5ಕ್ಕಿಂತ ಕಡಿಮೆ ಮೊತ್ತ ದಾಖಲಿಸಿದ್ದರಿಂದ ಹರಾಜಿನಿಂದ ಕೈಬಿಡಲಾಗಿತ್ತು. ಹೀಗೆ ಹರಾಜಿನಲ್ಲಿ ಒಟ್ಟು 1673 ಬಿಡ್ಡುದಾರರು ಭಾಗವಹಿಸಿದ್ದರು.

3 ಪಟ್ಟು ಬಿಡ್‌:

ಅರ್ಕಾವತಿ ಬಡಾವಣೆಯ ನಿವೇಶನ ಸಂಖ್ಯೆ 1355ಕ್ಕೆ ಬಿಡ್‌ ಚದರ ಮೀಟರ್‌ಗೆ 44,400 ರು. ನಿಗದಿಪಡಿಸಲಾಗಿತ್ತು. ಆದರೆ, ಗ್ರಾಹಕರೊಬ್ಬರು ಮೂರುಪಟ್ಟು ಅಂದರೆ 1,54,900 ರು.ಗಳಿಗೆ ಬಿಡ್‌ ಮಾಡಿ ಖರೀದಿಸಿದ್ದಾರೆ. ಎಚ್‌ಎಸ್‌ಆರ್‌ 3ನೇ ಸೆಕ್ಟರ್‌ ನಿವೇಶನ ಸಂಖ್ಯೆ 213/3ಕ್ಕೆ ಚದರ ಮೀಟರ್‌ಗೆ 1.50 ಲಕ್ಷ ನಿಗದಿ ಪಡಿಸಿದ್ದು, 2.71 ಲಕ್ಷ ರು.ಗಳಿಗೆ ಬಿಡ್‌ ಮಾಡಿ ಗ್ರಾಹಕರೊಬ್ಬರು ಖರೀದಿಸಿದ್ದಾರೆ ಎಂದು ಬಿಡಿಎ ತಿಳಿಸಿದೆ.

ಸಾರ್ವಜನಿಕ ವಲಯದ ನೌಕರರಿಗೆ ಮಹತ್ವದ ಸೂಚನೆ ಹೊರಡಿಸಿದ ರಾಜ್ಯ ಸರ್ಕಾರ ..

286 ಮೂಲೆ ನಿವೇಶನಗಳ ಒಟ್ಟು ಮೂಲ ಬೆಲೆ 180.45 ಕೋಟಿ ರು. ಆಗಿದ್ದು, 266.31 ಕೋಟಿ ರು.ಗೆ ಮಾರಾಟ ಮಾಡಲಾಗಿದೆ. ಇದರೊಂದಿಗೆ ಮೂಲ ಬೆಲೆಗಿಂತ ಹೆಚ್ಚುವರಿಯಾಗಿ ಸುಮಾರು 85.86 ಕೋಟಿ ರು. ಬಂದಿದೆ.

12ರಿಂದ 4ನೇ ಹಂತದ ಹರಾಜು

3ನೇ ಹಂತದ ಹರಾಜು ಪ್ರಕ್ರಿಯೆ ಮುಕ್ತಾಯದ ಬೆನ್ನಲ್ಲೇ ಬಿಡಿಎ ನಾಲ್ಕನೇ ಹಂತದ ಅಧಿಸೂಚನೆಯನ್ನು ಹೊರಡಿಸಿದೆ.

ಬನಶಂಕರಿ, ಸರ್‌.ಎಂ.ವಿಶ್ವೇಶ್ವರಯ್ಯ, ಜೆ.ಪಿ.ನಗರ, ಅರ್ಕಾವತಿ ಬಡಾವಣೆ, ಬಿಟಿಎಂ ಬಡಾವಣೆಗಳಲ್ಲಿ ವಿವಿಧ ಅಳತೆಯ ಒಟ್ಟು 448 ನಿವೇಶನಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಅ.12ರಿಂದ ಬಿಡ್ಡಿಂಗ್‌ ಪ್ರಾರಂಭವಾಗಲಿದ್ದು, ನ.3ರಿಂದ ನ.9ರವರೆಗೆ ಆರು ಹಂತಗಳಲ್ಲಿ ಬಿಡ್ಡಿಂಗ್‌ ನಡೆಯಲಿದೆ. ಹರಾಜಿಗೆ ಇಟ್ಟಿರುವ ನಿವೇಶನಗಳಿಗೆ ಜಿಯೋ ಟ್ಯಾಗ್‌ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಗ್ರಾಹಕರು ಆನ್‌ಲೈನ್‌ ಮೂಲಕ ನಿವೇಶನಗಳನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.