ಕಾಲೇಜುಗಳ ಬಳಿ ಹುಡುಗಿಯರಿಗೆ ಕೀಟಲೆ ಮಾಡುವುದು, ರ್ಯಾಶ್‌ ಡ್ರೈವಿಂಗ್‌ ಮಾಡುತ್ತಾರೆ, ಬಸ್‌ ನಿಲ್ದಾಣದ ಬಳಿ ಸಿಗರೆಟ್‌ ಸೇದುತ್ತಾರೆ, ಬೆಳಗ್ಗೆ ಕಾಲೇಜಿಗೆ ಬರುವಾಗ ಹಾಗೂ ಸಂಜೆ ಮನೆಗೆ ಹೋಗುವಾಗ ಪೋಲಿಗಳ ಕಾಟ ಜಾಸ್ತಿಯಾಗಿದೆ.

ಬೆಂಗಳೂರು (ಜೂ.25): ಕಾಲೇಜುಗಳ ಬಳಿ ಹುಡುಗಿಯರಿಗೆ ಕೀಟಲೆ ಮಾಡುವುದು, ರ್ಯಾಶ್‌ ಡ್ರೈವಿಂಗ್‌ ಮಾಡುತ್ತಾರೆ, ಬಸ್‌ ನಿಲ್ದಾಣದ ಬಳಿ ಸಿಗರೆಟ್‌ ಸೇದುತ್ತಾರೆ, ಬೆಳಗ್ಗೆ ಕಾಲೇಜಿಗೆ ಬರುವಾಗ ಹಾಗೂ ಸಂಜೆ ಮನೆಗೆ ಹೋಗುವಾಗ ಪೋಲಿಗಳ ಕಾಟ ಜಾಸ್ತಿಯಾಗಿದೆ... ಹೀಗೆಂದು ಮಲ್ಲೇಶ್ವರ ಭಾಗದಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರ ಮುಂದೆ.

ಮಾರ್ಗೋಸಾ ರಸ್ತೆಯ ಜಲಮಂಡಳಿಯ ಎಸ್‌ಎಸ್‌ಬಿ ಸಭಾಂಗಣದಲ್ಲಿ ಶನಿವಾರ ಮೊದಲ ಮಾಸಿಕ ಜನ ಸಂಪರ್ಕ ಸಭೆ ನಡೆಸಿ ಸ್ಥಳೀಯ ನಿವಾಸಿಗಳಿಂದ ಆಯುಕ್ತ ಬಿ.ದಯಾನಂದ್‌ ಅಹವಾಲು ಆಲಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಕಾಲೇಜು ವಿದ್ಯಾರ್ಥಿಗಳು, ಮಲ್ಲೇಶ್ವರ ವ್ಯಾಪ್ತಿಯಲ್ಲಿ ಪೋಲಿಗಳ ಕಾಟ ತಪ್ಪಿಸುವಂತೆ ವಿನಂತಿಸಿದರು. ಈ ದೂರಿಗೆ ಸ್ಪಂದಿಸಿದ ಆಯುಕ್ತರು, ಕಾಲೇಜುಗಳ ಬಳಿ ಬೆಳಗ್ಗೆ ಹಾಗೂ ಸಂಜೆ ಹೊಯ್ಸಳ ವಾಹನಗಳ ಗಸ್ತು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನೊಂದು ವಾರದಲ್ಲಿ 3500 ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕ: ಸಚಿವ ಪರಮೇಶ್ವರ್‌

‘ಕಾಲೇಜು ಬೆಳಗ್ಗೆ 9ಕ್ಕೆ ಆರಂಭವಾಗಿ ಮಧ್ಯಾಹ್ನ 3ಕ್ಕೆ ಮುಗಿಯಲಿದೆ. ಬೆಳಗ್ಗೆ ಹಾಗೂ ಸಂಜೆ ಕಾಲೇಜಿಗೆ ಹೋಗುವಾಗ ಹಾಗೂ ಬರುವಾಗ ನಮ್ಮ ಕಾಲೇಜು ಬಳಿ ಹುಡುಗರ ಸುತ್ತಾಟ ಹೆಚ್ಚಿದೆ. ಕಾಲೇಜು ಬಳಿ ವ್ಹೀಲಿಂಗ್‌ ಮಾಡೋದು, ರಾರ‍ಯಶ್‌ ಡ್ರೈವಿಂಗ್‌ ಮಾಡುತ್ತಾರೆ. ಈ ಬಗ್ಗೆ ದೂರು ನೀಡಿದ ಬಳಿಕ ಕಾಲೇಜು ಹತ್ತಿರ ಬಿಟ್ಟು ಬಸ್‌ ನಿಲ್ದಾಣಕ್ಕೆ ಸಾಗುವ ದಾರಿಯಲ್ಲಿ ಹುಡುಗರ ಹಾವಳಿ ಶುರುವಾಯಿತು. ನಮಗೆ (ಹುಡುಗಿಯರು) ಬೈಕ್‌ಗಳಲ್ಲಿ ಗುದ್ದೋಕ್ಕೆ ಬರೋದು, ಹಿಂಬಾಲಿಸೋದು ಹಾಗೂ ಮಾತನಾಡಿಸಲು ಯತ್ನಿಸೋದು ಮಾಡುತ್ತಾರೆ. ಅಲ್ಲದೆ ಬಸ್‌ ನಿಲ್ದಾಣದ ಬಳಿ ಧೂಮಪಾನ ಮಾಡುತ್ತಾರೆ. 

ಹುಡುಗಿಯರ ಮೈಂಡ್‌ ವಾಶ್‌ ಮಾಡಲು ಕೆಲವರು ಯತ್ನಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ‘ನೀವು ಕರೆಕ್ಟಾಗಿರಿ’ ಎನ್ನುತ್ತಾರೆ. ನಮ್ಮ ದೃಷ್ಟಿಯಲ್ಲಿ ನಾವು ಸರಿಯಾಗಿರುತ್ತೇವೆ. ಆದರೆ ಬೇರೆಯವರ ದೃಷ್ಟಿಯಲ್ಲಿ ನಾವೇ ಕೆಟ್ಟವರಾಗಿ ಕಾಣುತ್ತೇವೆ. ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಮಲ್ಲೇಶ್ವರದ 18ನೇ ಕ್ರಾಸ್‌ನ ಬಾಲಕಿಯರ ಕಾಲೇಜಿನ ವಿದ್ಯಾರ್ಥಿ ಸಂಜನಾ ಮನವಿ ಮಾಡಿದರು. ಇನ್ನು ಸಭೆಯಲ್ಲಿ ಕೆಲವರು ಸಂಚಾರ ಸಮಸ್ಯೆಗಳ ಬಗ್ಗೆ ದೂರುಗಳು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸಂಚಾರ ವಿಷಯವಾಗಿ ಪ್ರತ್ಯೇಕವಾಗಿ ಜನ ಸ್ಪಂದನ ಸಭೆ ನಡೆಸುವುದಾಗಿ ಹೇಳಿದರು.

ಸರ್ಕಾರ ವೇತನ ಕೊಡಲ್ವಾ: ಜನರಿಂದ ಲಂಚ ಕೇಳುವ ಪೊಲೀಸರಿಗೆ ಸರ್ಕಾರ ಸೂಕ್ತವಾದ ವೇತನ ಕೊಡಲ್ವಾ. ವೇತನ ಕೊಟ್ಟಿದ್ದರೆ ಪೊಲೀಸರು ಕೇಳುತ್ತಿರಲಿಲ್ಲ ಎಂದು ವಿದ್ಯಾರ್ಥಿ ನಯಾಜ್‌ ಪಾಷ ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಆಯುಕ್ತರು, ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟರೆ ಅಧಿಕಾರಿಗಳ ಗಮನಕ್ಕೆ ತಂದರೆ ಕ್ರಮ ಜರುಗಿಸಲಾಗುತ್ತದೆ ಎಂದರು.

ರಸ್ತೆಯಲ್ಲಿ ಹಾಡಹಗಲೇ ಎಣ್ಣೆಪಾರ್ಟಿ: ಮೂವರು ಪೊಲೀಸರು ಅಮಾನತು

ಓಬವ್ವ ಪಡೆ ರಚನೆ: ಮಲ್ಲೇಶ್ವರ ವ್ಯಾಪ್ತಿ ವಿವಿಧ ಕಾಲೇಜುಗಳಲ್ಲಿ 3 ರಿಂದ 4 ಸಾವಿರ ಬಾಲಕಿಯರು ಓದುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಪೋಲಿಗಳ ಕಾಟ ತಪ್ಪಿಸುವ ಸಲುವಾಗಿ ಕಾಲೇಜು ಶುರು ಹಾಗೂ ಮುಕ್ತಾಯದ ಅವಧಿಯಲ್ಲಿ ಮಲ್ಲೇಶ್ವರ ಠಾಣೆಯ 5 ಹೊಯ್ಸಳ ವಾಹನಗಳ ಪೈಕಿ ಮೂರನ್ನು ಕಾಲೇಜು ಬಳಿ ನಿಲ್ಲಿಸಲಾಗುತ್ತದೆ. ಅದೇ ರೀತಿ ಸಬ್‌ ಇನ್‌ಸ್ಪೆಕ್ಟರ್‌ ನೇತ್ರಾವತಿ ನೇತೃತ್ವದಲ್ಲಿ ಓಬವ್ವ ಪಡೆ ರಚಿಸಲಾಗುತ್ತದೆ. ಈ ಪಡೆ ಕಾಲೇಜುಗಳ ಬಳಿ ಮಫ್ತಿಯಲ್ಲಿದ್ದು, ಪುಂಡರ ಮೇಲೆ ನಿಗಾವಹಿಸಲಿದೆ ಎಂದು ಡಿಸಿಪಿ ಶಿವಪ್ರಕಾಶ್‌ ದೇವರಾಜ್‌ ತಿಳಿಸಿದರು.