*  ಬಳ್ಳಾರಿ ಸಂಡೂರು ತಾಲೂಕಿನ ಬಂಡ್ರಿಯಲ್ಲಿ ಸುದೀಪ್‌ ಹುಟ್ಟುಹಬ್ಬ ನಿಮಿತ್ತ ಕೋಣಬಲಿ*  ಪ್ರಕರಣ ದಾಖಲಿಸಲು ಎಸ್ಪಿ ಸೂಚನೆ* ಸುದೀಪ್‌ ಅವರ 50ನೇ ವರ್ಷದ ಹುಟ್ಟುಹಬ್ಬ  

ಬಳ್ಳಾರಿ(ಸೆ.03): ನಟ ಸುದೀಪ್‌ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಅಭಿಮಾನಿಗಳು ಗುರುವಾರ ಕೋಣ ಬಲಿ ಕೊಟ್ಟಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಸುದೀಪ್‌ ಅವರ 50ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಗ್ರಾಮದ ‘ಕಿಚ್ಚ ಸುದೀಪ್‌ ಬಾಯ್ಸ್‌’ ತಂಡ ಬೃಹತ್‌ ಕಟೌಟ್‌ ನಿರ್ಮಿಸಿ, ಬೃಹತ್‌ ಹೂವಿನಹಾರ ಹಾಕಿ ಘೋಷಣೆಗಳನ್ನು ಕೂಗಿದ್ದಲ್ಲದೆ, ಬಳಿಕ ಕಟೌಟ್‌ ಮುಂದೆ ಕೋಣ ಬಲಿ ನೀಡಿದ್ದಾರೆ. ಕೋಣದ ರಕ್ತವನ್ನು ಕೈಯಲ್ಲಿ ಹಿಡಿದು ಸುದೀಪ್‌ ಕಟೌಟ್‌ಗೆ ಎರಚಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಜನ ಕೋಣ ಬಲಿ ನೀಡುವ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಕೋಣ ಬಲಿಕೊಡುವ ದೃಶ್ಯವನ್ನು ಸೆರೆಹಿಡಿದಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಾರೆ.

ದಿ ವಿಲನ್ ಯಶಸ್ಸಿಗಾಗಿ ಕೋಣ ಬಲಿಕೊಟ್ಟು ವಿಕೃತ ಅಭಿಮಾನ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅದಾವತ್‌, ಕೋಣ ಬಲಿಕೊಡುವುದು ತಪ್ಪು. ಇದು ಕಾನೂನು ಬಾಹಿರ ಕೃತ್ಯ. ಕೋಣಬಲಿ ಕಾರ‍್ಯದಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಈ ಸಂಬಂಧ ಠಾಣೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿದೆ ಎಂದು ತಿಳಿಸಿದ್ದಾರೆ.

ಕೋಣ ಬಲಿಕೊಡುವುದು ತಪ್ಪು. ಇದು ಕಾನೂನು ಬಾಹಿರ ಕೃತ್ಯ. ಕೋಣಬಲಿ ಕಾರ‍್ಯದಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಸೈದುಲು ಅದಾಯತ್‌ ತಿಳಿಸಿದ್ದಾರೆ.