ದಿ ವಿಲನ್ ಯಶಸ್ಸಿಗಾಗಿ ಕೋಣ ಬಲಿಕೊಟ್ಟು ವಿಕೃತ ಅಭಿಮಾನ
ಶಿವರಾಜಕುಮಾರ, ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿ ಜಗಳೂರು ಪಟ್ಟಣದಲ್ಲಿ ಮೇಕೆ ಹಾಗೂ ಯಾವುದೋ ಊರಿನಲ್ಲಿ ಕೋಣ ಬಲಿ ಕೊಟ್ಟು ಅದರ ರಕ್ತದ ಅಭಿಷೇಕವನ್ನು ಚಿತ್ರದ ಪೋಸ್ಟರ್ಗೆ ಸಿಡಿಸುವ ಮೂಲಕ ವಿಕೃತ ಅಭಿಮಾನ ಪ್ರದರ್ಶಿಸಿದ್ದಾರೆ.
ದಾವಣಗೆರೆ : ಶಿವರಾಜಕುಮಾರ, ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿ ಜಗಳೂರು ಪಟ್ಟಣದಲ್ಲಿ ಮೇಕೆ ಹಾಗೂ ಯಾವುದೋ ಊರಿನಲ್ಲಿ ಕೋಣ ಬಲಿ ಕೊಟ್ಟು ಅದರ ರಕ್ತದ ಅಭಿಷೇಕವನ್ನು ಚಿತ್ರದ ಪೋಸ್ಟರ್ಗೆ ಸಿಡಿಸುವ ಮೂಲಕ ವಿಕೃತ ಅಭಿಮಾನ ಪ್ರದರ್ಶಿಸಿರುವ ವೀಡಿಯೋಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ದಿ ವಿಲನ್ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜ ನಟರ ಅಭಿನಯದ ಸಿನಿಮಾ. ಸಹಜವಾಗಿಯೇ ಚಿತ್ರದ ಬಗ್ಗೆ ಸಾಕಷ್ಟುಕುತೂಹಲ, ನಿರೀಕ್ಷೆಯೂ ಇದ್ದು, ಇಂತಹ ಮಹತ್ವಾಕಾಂಕ್ಷೆಯ ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಜಗಳೂರು ನಟರಾಜ ಥಿಯೇಟರ್ ಬಳಿ ಕಿಚ್ಚ ಸುದೀಪ್ ಅಭಿಮಾನಿಗಳು ಮೇಕೆಯೊಂದರ ತಲೆಯನ್ನೇ ಕಡಿದು, ಅದರ ದೇಹ, ತಲೆಯಿಂದ ಸಿಡಿದ ಬಿಸಿ ನೆತ್ತರನ್ನು ಸುದೀಪ್ ಚಿತ್ರಕ್ಕೆ ಸಿಡಿಸುವ ಮೂಲಕ ವಿಕೃತ ಅಭಿಮಾನ ವ್ಯಕ್ತಪಡಿಸಿದ ವೀಡಿಯೋ ವೈರಲ್ ಆಗಿದೆ.
ಚಿತ್ರ ಬಿಡುಗಡೆಯ ದಿನದಂದು ಮೇಕೆಯನ್ನು ಬಲಿ ಕೊಡಲಾಗಿದೆ. ಯುವಕರ ತಂಡವೊಂದು ಮೇಕೆ ಕಾಲುಗಳನ್ನು ಹಿಡಿದರೆ, ಮತ್ತೊಬ್ಬ ಯುವಕ ಟವಲ್ನಿಂದ ಮೇಕೆ ಮುಖದ ಭಾಗವನ್ನು ಎಳೆದು ನಿಲ್ಲುತ್ತಾನೆ. ಆಗ ಲಾಂಗ್ ಹಿಡಿದ ಯುವಕನೊಬ್ಬ ಒಂದೇ ಹೊಡೆತಕ್ಕೆ ಮೂಕ ಪ್ರಾಣಿಯ ದೇಹದಿಂದ ರುಂಡವೇ ಕಿತ್ತು ಬರುವಂತೆ ಕತ್ತರಿಸಿ ಹಾಕುತ್ತಿರುವುದು ಎಂತಹವರ ಮನಸ್ಸನ್ನೂ ಒಂದು ಕ್ಷಣ ಚುರುಕು ಎನಿಸುವಂತಿದೆ.
ಮೇಕೆ ಬಲಿ ಕೊಡುತ್ತಿದಂತೆ ಅದರ ದೇಹದಿಂದ ಚಿಮ್ಮುತ್ತಿದ್ದ ಬಿಸಿ ಬಿಸಿ ರಕ್ತವನ್ನು ಯುವಕನೊಬ್ಬ ಪೋಸ್ಟರ್ನಲ್ಲಿದ್ದ ಸುದೀಪ್ ಚಿತ್ರಕ್ಕೆ ಸಿಡಿಸಿ ಸಂಭ್ರಮಿಸಿದರೆ, ಲಾಂಗ್ ಹಿಡಿದಿದ್ದ ಯುವಕ ಯಾವುದೋ ಯುದ್ಧ ಗೆದ್ದವನಂತೆ ವಿಕೃತವಾಗಿ ಸಂಭ್ರಮಿಸುತ್ತಿರುವುದು, ಮತ್ತೊಬ್ಬ ಮೇಕೆ ರುಂಡದಿಂದ ಚಿಮ್ಮುತ್ತಿದ್ದರಕ್ತವನ್ನು ಪೋಸ್ಟರ್ಗೆ ಹಚ್ಚಿ ಸಂಭ್ರಮಿಸುತ್ತಿರುವುದು ಈಗ ಎಲ್ಲೆಡೆ ತೀವ್ರ ಆಕ್ಷೇಪಕ್ಕೂ ಗುರಿಯಾಗಿದೆ.
ಮತ್ತೊಂದು ವೈರಲ್ ಆಗಿರುವ ವೀಡಿಯೋದಲ್ಲಿ ಉತ್ತರ ಕರ್ನಾಟಕದ ಯಾವುದೋ ಹಳ್ಳಿಯಲ್ಲಿ ಕೋಣವೊಂದನ್ನು ಯುವಕರ ಗುಂಪು ದಿ ವಿಲನ್ ಚಿತ್ರದ ಪೋಸ್ಟರ್ ಮುಂದೆ ತಂದು ನಿಲ್ಲಿಸಿ, ನಂತರ ಅದನ್ನು ಎಲ್ಲರೂ ಸೇರಿಕೊಂಡು ನೆಲಕ್ಕೆ ಕೆಲವು ಸಲ ಎತ್ತಿ ಹಾಕುವ ಮೂಲಕ ಒಂದಿಷ್ಟುಮೆತ್ತಗೆ ಮಾಡುತ್ತಾರೆ. ನಂತರ ಎಲ್ಲರೂ ಅದನ್ನು ಹಿಡಿದುಕೊಂಡಾಗ ಯುವಕನೊಬ್ಬ ಅದರ ರುಂಡವನ್ನು ಒಂದೇ ಹೊಡೆತಕ್ಕೆ ಚೆಂಡಾಡುವ ಮೂಲಕ ಚಿಮ್ಮಿ ಬಂದ ಕೋಣದ ಬಿಸಿ ನೆತ್ತರಲ್ಲಿ ಸುದೀಪ್, ಶಿವರಾಜಕುಮಾರ ಚಿತ್ರಕ್ಕೆ ರಕ್ತದ ಅಭಿಷೇಕ ಮಾಡಿ ಘೋಷಣೆ ಕೂಗುತ್ತಾರೆ.
ಸಾಮಾಜಿಕ ಜಾಲ ತಾಣಗಳಲ್ಲ ಹರಿದಾಡುತ್ತಿರುವ ಇಂತಹ ವಿಕೃತ ಅಭಿಮಾನದ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತಮ್ಮ ನೆಚ್ಚಿನ ಅಭಿಮಾನಿಗಳ ಬಗ್ಗೆ ಅಷ್ಟೊಂದು ಅಭಿಮಾನವಿದ್ದರೆ ಚಿತ್ರದ ಯಶಸ್ಸಿಗಾಗಿ ಅನಾಥ, ಅಂಧ, ವಿಶೇಷ ಮಕ್ಕಳು, ವೃದ್ಧಾಶ್ರಮಗಳಲ್ಲಿ ಅನ್ನ ಸಂತರ್ಪಣೆ ಮಾಡಿಸಲಿ. ಅದನ್ನು ಬಿಟ್ಟು, ಅಭಿಮಾನದ ಹೆಸರಿನಲ್ಲಿ ಮೂಕ ಪ್ರಾಣಿಗಳನ್ನು ಬಲಿ ಕೊಡುವ ಮೂಲಕ ವಿಕೃತ ಅಭಿಮಾನ ಪ್ರದರ್ಶಿಸುವುದು ಸರಿಯಲ್ಲ. ಹೀಗೆ ಅಜ್ಞಾನಿಗಳಂತೆ ವರ್ತಿಸುವುದು ಸರಿಯಲ್ಲ ಎಂಬ ಟೀಕೆ, ವಿರೋಧಗಳೂ ಕೇಳಿ ಬರುತ್ತಿವೆ.
ನಟರಿಗೆ ಜನರ ಮನವಿ
ತಮ್ಮ ಚಿತ್ರಗಳು ಬಿಡುಗಡೆಯಾದಾಗ ಯಾವುದೇ ನಟರಾಗಿದ್ದರೂ ಹೀಗೆ ಮೂಕ ಪ್ರಾಣಿಗಳನ್ನು ಅಮಾನುಷವಾಗಿ ಹತ್ಯೆ ಮಾಡದಂತೆ ಅಭಿಮಾನಿಗಳಿಗೆ ಕಿವಿಮಾತು ಹೇಳಬೇಕು. ಚಿತ್ರದ ಯಶಸ್ಸಿಗಾಗಿ, ತಮ್ಮ ಮೆಚ್ಚಿನ ನಾಯಕನ ಚಿತ್ರ ಚೆನ್ನಾಗಿ ಓಡಲಿ ಎಂಬ ಕಾರಣಕ್ಕೆ ಹೀಗೆ ಮೂಕ ಪ್ರಾಣಿಗಳನ್ನು ಅಮಾನವೀಯವಾಗಿ ಹತ್ಯೆ ಮಾಡುವುದು ಸರಿಯಲ್ಲವೆಂಬ ತಿಳಿವಳಿಕೆ ನೀಡುವ ಕೆಲಸ ಮಾಡಲಿ ಎಂಬುದಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.